ಶಿವಕುಮಾರ ಕುಷ್ಟಗಿ
ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯ ಕೊಳವೆಬಾವಿಗಳಲ್ಲಿ ಅಪಾಯಕಾರಿ ಮಟ್ಟದ ಪ್ಲೋರೈಡ್ ಅಂಶವಿದ್ದು, ಈ ನೀರು ಕುಡಿಯಲು ಯೋಗ್ಯವಲ್ಲ ಎಂದು ಸರ್ಕಾರವೇ ಅಧಿಕೃತವಾಗಿ ಘೋಷಿಸಿದೆ. ಪ್ಲೋರೈಡ್ ಯುಕ್ತ ನೀರು ಕುಡಿದು ಹಳ್ಳಿಗಳ ಎಷ್ಟೋ ಜನರು ಮೂಳೆ ಕಾಯಿಲೆ, ಹಲ್ಲಿನ ಸಮಸ್ಯೆ ಹಾಗೂ ಅರ್ಧ ವಯಸ್ಸಿನಲ್ಲೇ ಅಂಗವಿಕಲತೆಗೆ ಈಡಾಗುತ್ತಿದ್ದಾರೆ. ಇದಕ್ಕಾಗಿಯೇ ಸರ್ಕಾರ ಹಳ್ಳಿ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿತ್ತು. ಆದರೆ, ಜಿಲ್ಲೆಯಲ್ಲಿರುವ ಒಟ್ಟು 439 ಘಟಕಗಳ ಪೈಕಿ ಬರೋಬ್ಬರಿ 138 ಘಟಕಗಳು ಸಂಪೂರ್ಣ ಸ್ಥಗಿತಗೊಂಡಿವೆ ಎನ್ನುವುದನ್ನು ಗ್ರಾಮೀಣ ಕುಡಿವ ನೀರು ಇಲಾಖೆಯ ಕಡತಗಳೇ ಹೇಳುತ್ತಿವೆ.
ನಿರ್ವಹಣೆಯೇ ಇಲ್ಲ: ಗ್ರಾಮ ಪಂಚಾಯಿತಿಗಳ ಉಸ್ತುವಾರಿಗೆ ಹಸ್ತಾಂತರಿಸಲಾದ 25 ಘಟಕಗಳು ಸೂಕ್ತ ನಿರ್ವಹಣೆಯಿಲ್ಲದೇ ಕೆಟ್ಟು ನಿಂತಿವೆ. ಇನ್ನುಳಿದ 414 ಘಟಕಗಳ ಸ್ಥಿತಿಯೂ ಭಿನ್ನವಾಗಿಲ್ಲ. ಸಣ್ಣಪುಟ್ಟ ತಾಂತ್ರಿಕ ದೋಷ, ಫಿಲ್ಟರ್‌ಗಳ ಬದಲಾವಣೆ ಅಥವಾ ವಿದ್ಯುತ್ ಸಮಸ್ಯೆ ಬಂದರೂ ತಿಂಗಳುಗಟ್ಟಲೆ ದುರಸ್ತಿ ಭಾಗ್ಯ ಕಾಣುತ್ತಿಲ್ಲ. ದಾಖಲೆಗಳಲ್ಲಿ ಮಾತ್ರ ಇವುಗಳ ನಿರ್ವಹಣೆಗೆ ಪ್ರತಿವರ್ಷ ಲಕ್ಷಾಂತರ ರುಪಾಯಿ ಹಣ ವೆಚ್ಚವಾಗುತ್ತಿದೆಯಾದರೂ, ವಾಸ್ತವದಲ್ಲಿ ಹಳ್ಳಿಗರಿಗೆ ಶುದ್ಧ ಕುಡಿಯುವ ನೀರು ಮಾತ್ರ ಸಿಗುತ್ತಿಲ್ಲ.ತಪ್ಪದ ಕಾಯುವಿಕೆ: ಹನಿ ನೀರಿಗೆ ಪರದಾಡುವ ಪರಿಸ್ಥಿತಿ ನಮ್ಮದು. ಕೆಟ್ಟುನಿಂತ ಘಟಕಗಳ ಮುಂದೆ ಖಾಲಿ ಕೊಡ ಹಿಡಿದು ನಿಲ್ಲುವುದೇ ನಮ್ಮ ನಿತ್ಯದ ಕಾಯಕವಾಗಿದೆ. ಒಂದು ಕಡೆ ಬರಗಾಲ, ಇನ್ನೊಂದೆಡೆ ನದಿಮೂಲದ ನೀರು ಒದಗಿಸುವ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ತಲುಪದಿರುವುದು, ಈ ಎರಡರ ನಡುವೆ ಗ್ರಾಮೀಣ ಜನತೆ ಅತ್ತ ಫ್ಲೋರೈಡ್ ನೀರನ್ನೂ ಕುಡಿಯಲಾಗದೇ, ಇತ್ತ ಶುದ್ಧ ನೀರೂ ಸಿಗದೇ ನಾವೆಲ್ಲಾ ಶುದ್ಧ ಕುಡಿಯುವ ನೀರಿಗಾಗಿ ಚಾತಕ ಪಕ್ಷಿಗಳಂತೆ ಕಾಯುವಂತಾಗಿದೆ ಎನ್ನುತ್ತಾರೆ ಜಿಲ್ಲೆಯ ಗ್ರಾಮೀಣ ಭಾಗದ ಜನರು.