ಕ್ಯಾಮೆರಾ ಕಣ್ಗಾವಲಿನಲ್ಲಿ 13ನೇ ವಾರ್ಡ್; ಸ್ವಚ್ಛತೆ-ಭದ್ರತೆಗೆ ಹೊಸ ಹೆಜ್ಜೆ

KannadaprabhaNewsNetwork |  
Published : Jun 18, 2026, 02:00 AM IST
ಬಳ್ಳಾರಿಯ 13ನೇ ವಾರ್ಡ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ಸಿಸಿ ಕೆಮರಾ ಅಳವಡಿಸಲಾಯಿತು.  | Kannada Prabha

ಸಾರಾಂಶ

ವಾರ್ಡ್ ವ್ಯಾಪ್ತಿಯಲ್ಲಿ 200ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಸಂಪೂರ್ಣ ಪ್ರದೇಶವನ್ನು ಕಣ್ಗಾವಲಿನಡಿ ತರಲು ಯೋಜನೆ ರೂಪಿಸಿಕೊಂಡಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ರಸ್ತೆ ಬದಿಯಲ್ಲಿ ಕಸ ಎಸೆಯುವುದು, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಗಲಾಟೆ ನಡೆಸುವುದು, ರಾತ್ರಿ ವೇಳೆ ದುಷ್ಕೃತ್ಯಗಳಲ್ಲಿ ತೊಡಗುವುದು ಮುಂತಾದ ಸಮಸ್ಯೆಗಳಿಗೆ ತಡೆಯೊಡ್ಡಲು ಬಳ್ಳಾರಿ ಮಹಾನಗರ ಪಾಲಿಕೆಯ 13ನೇ ವಾರ್ಡ್ ಪಾಲಿಕೆ ಸದಸ್ಯ ಇಬ್ರಾಹಿಂಬಾಬು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

ವಾರ್ಡ್ ವ್ಯಾಪ್ತಿಯಲ್ಲಿ 200ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಸಂಪೂರ್ಣ ಪ್ರದೇಶವನ್ನು ಕಣ್ಗಾವಲಿನಡಿ ತರಲು ಯೋಜನೆ ರೂಪಿಸಿಕೊಂಡಿದೆ. ಸರ್ಕಾರಿ ಶಾಲೆ ಸೇರಿದಂತೆ ನಾನಾ ಕಡೆಗಳಲ್ಲಿ ಕ್ಯಾಮೆರಾ ಕಣ್ಗಾವಲು ಕಾರ್ಯ ಆರಂಭಗೊಂಡಿದೆ.

ಮೊದಲ ಹಂತದಲ್ಲಿ 50 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಹಂತ ಹಂತವಾಗಿ ಕ್ಯಾಮೆರಾಗಳ ಸಂಖ್ಯೆಯನ್ನು ಹೆಚ್ಚಿಸಿ ವಾರ್ಡ್‌ನ ಎಲ್ಲ ಪ್ರಮುಖ ಬೀದಿಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ನಿಗಾ ವ್ಯವಸ್ಥೆಗೆ ಒಳಪಡಿಸಲಾಗುವುದು. ಸುಮಾರು 3200ಕ್ಕೂ ಅಧಿಕ ಮನೆಗಳನ್ನು ಒಳಗೊಂಡಿರುವ 13ನೇ ವಾರ್ಡ್ ವ್ಯಾಪ್ತಿಯ ರೂಪನಗುಡಿ ನಾರಪ್ಪ ಬೀದಿ, ಕೋರ್ಟ್ ಮೊಹಲ್ಲಾ, ಆಂಜನೇಯ ದೇವಸ್ಥಾನ ಬೀದಿ, ರಂಗಪ್ಪ ಬೀದಿ, ಸೋಮಾದ್ರಿ ಬೀದಿ, ಆಕಲ ಕಾಸೀಮಸಾಬ್ ಬೀದಿ ಸೇರಿದಂತೆ ಸುಮಾರು 150ರಿಂದ 200 ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಕೆಯ ಜಾಗಗಳ ಗುರುತಿಸಲಾಗಿದೆ.

ಬೀದಿಗೆ ಕಸ ಎಸೆದರೆ ಕ್ರಮ:

ಕ್ಲೀನ್ ವಾರ್ಡ್-ಗ್ರೀನ್ ವಾರ್ಡ್ ಅಭಿಯಾನ ಆರಂಭಿಸಿರುವ ಪಾಲಿಕೆ ಸದಸ್ಯ ಇಬ್ರಾಹಿಂ ಬಾಬು ವಾರ್ಡ್‌ನಲ್ಲಿ ಸ್ವಚ್ಛತೆ ಕಾಪಾಡುವುದು, ಬೀದಿಯಲ್ಲಿ ಕಸ ಸುರಿಯುವವರ ವಿರುದ್ಧ ಕ್ರಮ ಜರುಗಿಸುವ ಉದ್ದೇಶದಿಂದ ಕ್ಯಾಮೆರಾ ಅಳವಡಿಕೆ ಕಾರ್ಯಕ್ಕೆ ಆಸ್ಥೆ ವಹಿಸಿದ್ದಾರೆ. ಕ್ಯಾಮೆರಾ ವ್ಯವಸ್ಥೆಯ ನಿರ್ವಹಣೆ, ನಿಗಾವಣೆಯ ಹೊಣೆಗಾರಿಕೆಯನ್ನು ಏರಿಯಾ ಇನ್‌ಸ್ಪೆಕ್ಟರ್, ಹೆಲ್ತ್ ಇನ್‌ಸ್ಪೆಕ್ಟರ್ ಮತ್ತು ಸ್ಥಳೀಯ ಪ್ರಮುಖರಿಗೆ ವಹಿಸಲು ನಿರ್ಧರಿಸಲಾಗಿದೆ. ಯಾವುದೇ ಗಲಾಟೆ, ಕಳ್ಳತನ ಅಥವಾ ಇತರ ಅಪರಾಧ ಪ್ರಕರಣಗಳು ನಡೆದ ಸಂದರ್ಭದಲ್ಲಿ ದೃಶ್ಯಾವಳಿಗಳ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ನೆರವಾಗಲಿದೆ.

ಚಾರಿಟೇಬಲ್ ಟ್ರಸ್ಟ್‌ ಹಣ:

13ನೇ ವಾರ್ಡ್‌ನಲ್ಲಿ ಕ್ಯಾಮೆರಾ ಅಳವಡಿಕೆಗೆ ಮಹಾನಗರ ಪಾಲಿಕೆಯಿಂದ ಯಾವುದೇ ಅನುದಾನ ನೀಡಿಲ್ಲ. ವಾರ್ಡ್‌ನಲ್ಲಿ ಹಸಿರೀಕರಣಕ್ಕೆ ಸಸಿಗಳ ವಿತರಣೆ, ಕ್ಯಾಮೆರಾ ಅಳವಡಿಕೆ ಸೇರಿದಂತೆ ವಿವಿಧ ಕಾರ್ಯ ಯೋಜನೆಗಳಿಗೆ ಪಾಲಿಕೆ ಸದಸ್ಯ ಇಬ್ರಾಹಿಂಬಾಬು, ಗೆಳೆಯರು ಜೊತೆಗೂಡಿ ಸ್ಥಾಪಿಸಿದ ಚಾರಿಟೇಬಲ್ ಟ್ರಸ್ಟ್‌ನಿಂದಲೇ ಹಣ ವ್ಯಯಿಸಲಾಗುತ್ತಿದೆ. ಸ್ವಯಂ ಆಸಕ್ತಿಯಿಂದ ಕೈಗೊಂಡಿರುವ ಕ್ಲೀನ್‌ವಾರ್ಡ್‌ಗ್ರೀನ್‌ವಾರ್ಡ್ ಅಭಿಯಾನ, ಕ್ಯಾಮೆರಾ ಅಳವಡಿಕೆ ಕೆಲಸಕ್ಕೆ ಪಾಲಿಕೆಯಿಂದ ನಯಾ ಪೈಸೆ ಪಡೆದಿಲ್ಲ ಎಂದು ಪಾಲಿಕೆ ಸದಸ್ಯ ಇಬ್ರಾಹಿಂಬಾಬು ಕನ್ನಡಪ್ರಭಕ್ಕೆ ತಿಳಿಸಿದರು.

ವಾರ್ಡ್‌ನಲ್ಲಿ ಕ್ಯಾಮೆರಾ ಅಳವಡಿಕೆ ಮಾಡುವುದು ಬಹುವರ್ಷದ ಕನಸು; ಇದೀಗ ನನಸಾಗುತ್ತಿದೆ. ಕ್ಯಾಮೆರಾ ಅಳವಡಿಕೆಯಿಂದ ಗಲಾಟೆ, ಕಳ್ಳತನ ನಿಯಂತ್ರಣವಾಗಲಿದೆ. ಕಸ ರಸ್ತೆ ಎಸೆಯುವವರನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ ಎನ್ನುತ್ತಾರೆ ಬಳ್ಳಾರಿ 13ನೇ ವಾರ್ಡ್ ಸದಸ್ಯ ಇಬ್ರಾಹಿಂಬಾಬು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫಲಾನುಭವಿಗಳಿಗೆ ಸ್ವ ಉದ್ಯೋಗಕ್ಕೆ ಸೌಲಭ್ಯ ಕಲ್ಪಿಸಿಕೊಡಿ
ರೈತರ ಚಿತ್ತ ಇರಲಿ ಸಾವಯವ, ನೈಸರ್ಗಿಕ ಕೃಷಿಯತ್ತ