ರಸ್ತೆಗಳ ಅಭಿವೃದ್ಧಿಗೆ 15 ಕೋಟಿ ಅನುದಾನ ಮೀಸಲು: ತಮ್ಮಯ್ಯ

KannadaprabhaNewsNetwork |  
Published : Nov 17, 2024, 01:16 AM IST
ಚಿಕ್ಕಮಗಳೂರು ತಾಲೂಕಿನ ಚಿಕ್ಕನಹಳ್ಳಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು. ಎ.ವಿ. ಗಾಯತ್ರಿ ಶಾಂತೇಗೌಡ, ಬಿ.ಎಚ್‌. ಹರೀಶ್‌, ಆಶಾರಾಣಿ, ಸಿದ್ದರಾಮೇಗೌಡ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸುವ ಜೊತೆಗೆ ಕ್ಷೇತ್ರದ ಗ್ರಾಮೀಣಾಭಿವೃದ್ಧಿ ರಸ್ತೆಗಳಿಗೆ 15 ಕೋಟಿ ಅನುದಾನ ಮೀಸಲಿರಿಸಿ, ಪ್ರತಿ ಗ್ರಾಮ ಪಂಚಾಯಿತಿಗೆ ₹40 ಲಕ್ಷ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಚಿಕ್ಕನಹಳ್ಳಿಯಲ್ಲಿ ಕನಕ ಸಮುದಾಯ ಭವನ ಉದ್ಘಾಟನೆ, ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸುವ ಜೊತೆಗೆ ಕ್ಷೇತ್ರದ ಗ್ರಾಮೀಣಾಭಿವೃದ್ಧಿ ರಸ್ತೆಗಳಿಗೆ 15 ಕೋಟಿ ಅನುದಾನ ಮೀಸಲಿರಿಸಿ, ಪ್ರತಿ ಗ್ರಾಮ ಪಂಚಾಯಿತಿಗೆ ₹40 ಲಕ್ಷ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ತಾಲೂಕಿನ ಕರ್ತಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕನಕ ಸಮುದಾಯ ಭವನ ಉದ್ಘಾಟನೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಪ್ರತಿ ಕ್ಷೇತ್ರಕ್ಕೆ ₹25 ಕೋಟಿ ಅನುದಾನ ಒದಗಿಸಿದೆ. ಹಂತ ಹಂತವಾಗಿ ಗ್ರಾಮಾಂತರ ಪ್ರದೇಶದ ನಿವಾಸಿಗಳ ಸವಲತ್ತಿಗೆ ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು. ಆ ನಿಟ್ಟಿನಲ್ಲಿ ಗ್ರಾಮದ ಬಹು ಬೇಡಿಕೆಯಾದ ಸಮುದಾಯ ಭವನದ ಅಪೂರ್ಣ ಕಾಮಗಾರಿ ಪೂರ್ಣಗೊಳಿಸಿ ಗ್ರಾಮಸ್ಥರಿಗೆ ಸಮರ್ಪಿಸಲಾಗಿದೆ ಎಂದರು.

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನೇತೃತ್ವದ ರಾಜ್ಯ ಸರ್ಕಾರ ಗ್ರಾಮೀಣ ಹಾಗೂ ಪಟ್ಟಣದ ನಿವಾಸಿಗಳಿಗೆ ಗ್ಯಾರಂಟಿ ಯೋಜನೆಯನ್ನು ಸಮರ್ಪಕವಾಗಿ ತಲುಪಿಸಿ ನುಡಿದಂತೆ ನಡೆಯುತ್ತಿದೆ. ಅಲ್ಲದೇ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ವಿಚಾರದಲ್ಲೂ ಹಿಂದೇಟು ಹಾಕದೇ ಪ್ರತಿ ಕ್ಷೇತ್ರಕ್ಕೂ ಕೋಟಿಗಟ್ಟಲೇ ಅನುದಾನ ಬಿಡುಗಡೆಗೊಳಿಸಿ ಸಹಕರಿಸುತ್ತಿದೆ ಎಂದು ಹೇಳಿದರು.

ಈಗಾಗಲೇ ಗ್ರಾಮದಲ್ಲಿ ಸರ್ಕಾರಿ ಶಾಲೆ ಮೂಲಭೂತ ಸೌಲಭ್ಯ ಹಾಗೂ ಕೆರೆ ಸ್ವಚ್ಛಗೊಳಿಸುವ ಸಂಬಂಧ ಮನವಿ ಸಲ್ಲಿಸಿದ್ದು ಹಂತ ಹಂತವಾಗಿ ಎಲ್ಲಾ ಬೇಡಿಕೆಗಳನ್ನು ಪೂರೈಸಲಾಗುವುದು. ರೈತರ ಏಳಿಗೆಯೇ ರಾಜ್ಯ ಸರ್ಕಾರದ ಅತಿ ದೊಡ್ಡ ಅಭಿವೃದ್ಧಿ ಪಥದ ಗುರಿಯಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ಮಾತನಾಡಿ, ಕಳೆದೆರಡು ದಶಕಗಳಿಂದ ಅಭಿವೃದ್ಧಿ ಶೂನ್ಯವಾಗಿದ್ದ ಗ್ರಾಮಕ್ಕೆ ಕಾಂಗ್ರೆಸ್ ಸರ್ಕಾರ ಯೋಜನೆಗಳ ಮಹಾಪೂರವನ್ನೇ ಒದಗಿಸುತ್ತಿದೆ. ₹10 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಹಾಗೂ ₹20 ಲಕ್ಷ ಗಳ ವೆಚ್ಚದಲ್ಲಿ ಮರ್ಲೆಯಿಂದ ಚಿಕ್ಕನಹಳ್ಳಿ ಗ್ರಾಮಕ್ಕೆ ಗುಣಮಟ್ಟದ ರಸ್ತೆ ನಿರ್ಮಿಸಲು ಮುಂದಾಗಿದೆ ಎಂದರು.

ಪಂಚ ಗ್ಯಾರಂಟಿ ಯೋಜನೆಗಳು ರೈತ ಮಹಿಳೆಯರು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಕೆಲವರು ಗ್ಯಾರಂಟಿ ಹಾಗೂ ಮುಖ್ಯಮಂತ್ರಿಗಳ ಬಗ್ಗೆ ಅಸಡ್ಡೆ ಮಾತುಗಳು ಆಡುತ್ತಿದ್ದು, ಎಲ್ಲದಕ್ಕೂ ಪ್ರಶ್ನಿಸುವ ಗುಣ ಬೆಳೆಸಿಕೊಂಡರೆ ಮಾತ್ರ ತಾನಾಗಿಯೇ ವಿರೋಧಿ ಪಡೆಗಳು ಸುಮ್ಮನಾಗುತ್ತಾರೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿಗಳು ಗ್ರಾಮಸ್ಥರ ಕುಂದು-ಕೊರತೆಗಳನ್ನು ಸಮಗ್ರವಾಗಿ ಆಲಿಸಬೇಕು. ಪ್ರತಿ ಗ್ರಾಮಗಳಲ್ಲಿ ಸಭೆ ಕರೆದು ನ್ಯೂನ್ಯತೆಗಳ ಬಗ್ಗೆ ಪರಿಶೀಲಿಸಿದರೆ ಯಾವುದೇ ಸಮಸ್ಯೆ ತಲೆದೋರುವುದಿಲ್ಲ. ಹೀಗಾಗಿ ಪಂಚಾಯಿತಿ ಪಿಡಿಒ ಹಾಗೂ ಆಡಳಿತ ಮಂಡಳಿ ಸಮಗ್ರವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಸಿ.ಎಲ್.ಸಿದ್ದರಾಮೇಗೌಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೃಷಿ ಉತ್ಪನ್ನ ಮಾರಾಟ ಸಂಸ್ಕರಣಾ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ್, ಒಬಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಜ್‍ ಅರಸ್, ಕರ್ತಿಕೆರೆ ಗ್ರಾಪಂ ಅಧ್ಯಕ್ಷೆ ಆಶಾರಾಣಿ, ಉಪಾಧ್ಯಕ್ಷ ಲೋಕಣ್ಣ, ಗ್ರಾಮಸ್ಥರಾದ ಸಿದ್ದೇಗೌಡ, ನಿಂಗಣ್ಣ, ರಾಮೇಗೌಡ, ರಾಜೇಗೌಡ, ಮಂಜೇಗೌಡ, ಶೇಖರ್, ರಂಗಸ್ವಾಮಿ ಉಪಸ್ಥಿತರಿದ್ದರು. 16 ಕೆಸಿಕೆಎಂ 4ಚಿಕ್ಕಮಗಳೂರು ತಾಲೂಕಿನ ಚಿಕ್ಕನಹಳ್ಳಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಎಚ್‌.ಡಿ. ತಮ್ಮಯ್ಯ ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು. ಎ.ವಿ. ಗಾಯತ್ರಿ ಶಾಂತೇಗೌಡ, ಬಿ.ಎಚ್‌. ಹರೀಶ್‌, ಆಶಾರಾಣಿ, ಸಿದ್ದರಾಮೇಗೌಡ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು