ಶೂನ್ಯ ಬಡ್ಡಿ ದರದಲ್ಲಿ 15 ಕೋಟಿ ಸಾಲ ವಿತರಣೆ: ಡಿ.ಕೆ.ಸುರೇಶ್

KannadaprabhaNewsNetwork |  
Published : Aug 18, 2025, 12:00 AM IST
3.ಹಾರೋಹಳ್ಳಿ ವಿದ್ಯಾಸಂಸ್ಥೆ ಆವರಣದಲ್ಲಿ ಕೆ.ಸಿ.ಸಿ ಹಾಗೂ ಸ್ತೀಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲ ವಿತರಣಾ ಸಮಾರಂಭವನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಹಾರೋಹಳ್ಳಿ: ರೈತರ ಬೆಳೆ ಸಾಲ ಹಾಗೂ ಗ್ರಾಮೀಣ ಜೀವನೋತ್ಪತ್ತಿ ಅಭಿಯಾನದ ಮೂಲಕ ಬಿಡಿಸಿಸಿ ಬ್ಯಾಂಕಿನಿಂದ ಗ್ರಾಮೀಣ ಪ್ರದೇಶದ 1095 ಜನರಿಗೆ 15 ಕೋಟಿ ರುಪಾಯಿ ಸಾಲ ವಿತರಣೆ ಮಾಡಲಾಗುತ್ತಿದೆ ಎಂದು ಮಾಜಿ ಸಂಸದ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.

ಹಾರೋಹಳ್ಳಿ: ರೈತರ ಬೆಳೆ ಸಾಲ ಹಾಗೂ ಗ್ರಾಮೀಣ ಜೀವನೋತ್ಪತ್ತಿ ಅಭಿಯಾನದ ಮೂಲಕ ಬಿಡಿಸಿಸಿ ಬ್ಯಾಂಕಿನಿಂದ ಗ್ರಾಮೀಣ ಪ್ರದೇಶದ 1095 ಜನರಿಗೆ 15 ಕೋಟಿ ರುಪಾಯಿ ಸಾಲ ವಿತರಣೆ ಮಾಡಲಾಗುತ್ತಿದೆ ಎಂದು ಮಾಜಿ ಸಂಸದ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.

ಪಟ್ಟಣದ ಗ್ರಾಮಾಂತರ ಪ್ರೌಢಶಾಲಾ ಆವರಣದಲ್ಲಿ ಕೆಸಿಸಿ ಹಾಗೂ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲ ವಿತರಣಾ ಚೆಕ್ ಗಳನ್ನು ವಿತರಿಸಿ ಮಾತನಾಡಿದ ಅವರು, ತಾಲೂಕಿನ ಮರಳವಾಡಿ ಮತ್ತು ಹಾರೋಹಳ್ಳಿ ಭಾಗದ ರೈತರು ಹಾಗೂ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಹಿನ್ನೆಲೆಯಲ್ಲಿ ಹಾಗೂ ಗ್ರಾಮೀಣ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಬಿಡಿಸಿಸಿ ಬ್ಯಾಂಕ್ 15 ಕೋಟಿ ಶೂನ್ಯ ಬಡ್ಡಿದರದಲ್ಲಿ ಸಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಬಿಡಿಸಿಸಿ ಬ್ಯಾಂಕಿನಿಂದ ಈ ಸೌಲಭ್ಯ ನೀಡಲಾಗಿದೆ ಎಂದರು.

ಜೀವನೋಪಾಯಕ್ಕೆ ವಿವಿಧ ಸ್ಥಳಗಳಲ್ಲಿ ಅಭಿವೃದ್ಧಿ ಹೊಂದಲು 5 ಲಕ್ಷ ರುಪಾಯಿಗಳವರೆಗೆ ಸಾಲವನ್ನು ನೀಡಲಾಗುವುದು, ಇದನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡು ಸಾಲ ಮರುಪಾವತಿ ಮಾಡಿದರೆ ಮತ್ತಷ್ಟು ಹೆಚ್ಚಿನ ಸಾಲವನ್ನು ಪಡೆದುಕೊಳ್ಳುವ ಅವಕಾಶವಿರುತ್ತದೆ. ತಾಲೂಕಿನಲ್ಲಿ ಮಹಿಳೆಯರು ಮೈಕ್ರೋಫೈನಾನ್ಸ್‌ನಂತಹ ಖಾಸಗಿಯವರಿಂದ ಹೆಚ್ಚಿನ ಬಡ್ಡಿ ಕಟ್ಟುವ ಮೂಲಕ ತೊಂದರೆ ಅನುಭವಿಸುತ್ತಿದ್ದಾರೆ. ಬಿಡಿಸಿಸಿ ಬ್ಯಾಂಕಿನಲ್ಲಿ ತೆಗೆದುಕೊಳ್ಳುವ ಸಾಲಕ್ಕೆ ಶೂನ್ಯ ಬಡ್ಡಿಯಿರುವುದರಿಂದ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಜನರಿಗೆ ಆರ್ಥಿಕ ಶಕ್ತಿಯನ್ನು ತುಂಬುವಂತಹ ಹೈನಗಾರಿಕೆಯನ್ನು ಮತ್ತಷ್ಟು ಬಲಪಡಿಸುವುದು. ಅಲ್ಲದೇ ಹೆಚ್ಚು ಹೆಚ್ಚು ಹಸುಗಳನ್ನು ಸಾಕಾಣಿಕೆ ಮಾಡುವುದರಿಂದ ಹೆಚ್ಚು ಹಾಲು ಉತ್ಪತ್ತಿ ಮಾಡಿ ಹಣ ಗಳಿಸಬಹುದು. ರೈತರು ಉತ್ಪತ್ತಿ ಮಾಡವ ಹಾಲನ್ನು ಸಂಪೂರ್ಣವಾಗಿ ಖರೀದಿಸುವ ಜವಾಬ್ದಾರಿ ನಮ್ಮದಾಗಿದೆ. ಶಿವನಹಳ್ಳಿ ಡೇರಿ ಬಳಿ ನಿರ್ಮಿಸಿರುವ ಮೆಗಾ ಡೇರಿಯು ಇನ್ನು 5 ಲಕ್ಷ ಲೀಟರ್ ನಷ್ಟು ಹೆಚ್ಚಿನ ಹಾಲು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದರು.

ರೈತರು ಹೆಚ್ಚು ಹಾಲು ಉತ್ಪತ್ತಿ ಮಾಡಿ ಆರ್ಥಿಕವಾಗಿ ಸಬಲರಾಗಬೇಕು. ಜೊತೆಗೆ ರೈತರ ಸಂಸ್ಥೆಯಾದ ಬಮೂಲ್ ಉತ್ಪನ್ನಗಳನ್ನು ಉಪಯೋಗಿಸುವ ಮೂಲಕ ಜನರು ಇದಕ್ಕೆ ಶಕ್ತಿ ನೀಡಬೇಕು ಎಂದು ಡಿ.ಕೆ.ಸುರೇಶ್ ಹೇಳಿದರು.

ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಜನರು ಸ್ವಾರ್ಥಕ್ಕೆ ಸಾಲ ಮಾಡಿ ರೈತರ ಸಾಲ ಮನ್ನಾ ಮಾಡಿ ಎಂದು ಕಾದು ಕುಳಿತುಕೊಳ್ಳುವ ಕಾಲ ಹೋಗಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದು ಅದನ್ನು ಬಳಸಿಕೊಂಡು ಸಬಲರಾಗಬೇಕು. ಈ ಹಿಂದೆ ತಾಲೂಕಿನಲ್ಲಿ ಮೂಲ ಸೌಕರ್ಯಗಳ ಕೊರತೆ ಇತ್ತು, ನಾನು ಶಾಸಕನಾದ ಮೇಲೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸರ್ಕಾರದ ವಿವಿಧ ಅನುದಾನಗಳಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಹಾರೋಹಳ್ಳಿ ಪಟ್ಟಣಕ್ಕೆ ಕುಡಿಯಲು ಶಾಶ್ವತ ಕಾವೇರಿ ನೀರು ಜಾರಿಗೆ ತರಲು ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್ ಮಾತನಾಡಿ, ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಹಾಗೂ ಗ್ರಾಮೀಣ ಆರ್ಥಿಕತೆಯ ಜೀವನಾಡಿಯಾದ ಸಹಕಾರ ವಲಯವನ್ನು ಬಲಪಡಿಸಲು ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವ ಯೋಜನೆ ಇದಾಗಿದೆ. ರೈತರು ಅಲ್ಪಾವಧಿಯ ಬೆಳೆ ಸಾಲ ಪಡೆಯಲು ಕೇಂದ್ರ ಸರ್ಕಾರ ಸಲ್ಲದ ಸಬೂಬುಗಳನ್ನು ಹೇಳಿ ಸಾಲ ಮಂಜೂರಾತಿಗೆ ಮೀನಮೇಷ ಎಣಿಸುತ್ತಿರುವುದರಿಂದ ರಾಜ್ಯ ಸರ್ಕಾರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗಳ ಮೂಲಕ ಸಾಲ ನೀಡಲು ಮುಂದಾಗಿದೆ ಎಂದು ಹೇಳಿದರು.

ಬೆಳೆ ಸಾಲವಲ್ಲದೆ ಇತರ ಉದ್ದೇಶಗಳಿಗೆ ಕಡಿಮೆ ಬಡ್ಡಿದರದಲ್ಲಿ 15 ಲಕ್ಷ ರು. ಸಾಲ ಪಡೆಯಬಹುದು. ಇದನ್ನು ರೈತರ, ಮಹಿಳೆಯರು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಬಹುದು ಎಂದು

ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ರವಿ, ಬಮೂಲ್ ನಿರ್ದೇಶಕ ಎಚ್.ಎಸ್.ಹರೀಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಅಶೋಕ್, ಮುಖಂಡರಾದ ಡಿ.ಎಂ.ವಿಶ್ವನಾಥ್, ಭುಜಂಗಯ್ಯ, ಪುಟ್ಟಸ್ವಾಮಿ, ಮೋಹನ್ ಮತ್ತಿತರರು ಹಾಜರಿದ್ದರು.

17ಕೆಆರ್ ಎಂಎನ್ 3,4.ಜೆಪಿಜಿ

3.ಹಾರೋಹಳ್ಳಿ ವಿದ್ಯಾಸಂಸ್ಥೆ ಆವರಣದಲ್ಲಿ ಕೆಸಿಸಿ ಹಾಗೂ ಸ್ತೀಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲ ವಿತರಣಾ ಸಮಾರಂಭವನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು. ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌, ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ ಇತರರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌