ಕೆಂಪೇಗೌಡ ಜಯಂತಿ ಆಚರಣೆ ಸಂಬಂಧ ವಿಧಾನಸೌಧದಲ್ಲಿ ಸಿಎಂ ಸಭೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರತಿ ವರ್ಷದಂತೆ ಈ ವರ್ಷವು ಜೂ.27ರಂದು ನಗರದಲ್ಲಿ ಅದ್ಧೂರಿಯಾಗಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲು ತೀರ್ಮಾನಿಸಲಾಗಿದ್ದು, ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 15 ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕೆಂಪೇಗೌಡ ಜಯಂತಿ ಆಚರಣೆ ಸಂಬಂಧ ವಿಧಾನಸೌಧದಲ್ಲಿ ಮಂಗಳವಾರ ಸಚಿವರು, ಶಾಸಕರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಜೂ.27ರಂದು ಕೆಂಪೇಗೌಡ ಬಡಾವಣೆಯಲ್ಲಿ ಬೆಳಗ್ಗೆ 11.30ಕ್ಕೆ ಕಾರ್ಯಕ್ರಮ ನಡೆಸುತ್ತೇವೆ. ಕೆಂಪೇಗೌಡರ ಜಯಂತಿ ಅಂಗವಾಗಿ ಕೆಂಪೇಗೌಡ ಬಡಾವಣೆಯಲ್ಲಿ ಬಿಡಿಎ ವತಿಯಿಂದ 15 ಲಕ್ಷ ಸಸಿ ನೆಡುವುದಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.
ಕೆಂಪೇಗೌಡ ಜಯಂತಿ ಅಂಗವಾಗಿ 4 ಗಡಿಗೋಪುರದಿಂದ ವಿಶೇಷ ಜ್ಯೋತಿಯನ್ನು ತರಲಾಗುವುದು. ಜತೆಗೆ ದೇವನಹಳ್ಳಿ ವಿಮಾನ ನಿಲ್ದಾಣ ಬಳಿಯ ಕೆಂಪೇಗೌಡ ಬೃಹತ್ ಪ್ರತಿಮೆಯಿಂದಲೂ ಜ್ಯೋತಿ ತರಲಾಗುವುದು. 4 ಗೋಪುರಗಳಿಂದ ಬರುವ ಜ್ಯೋತಿ ಬಗ್ಗೆ ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ಕೆ.ಜೆ ಜಾರ್ಜ್ ಹಾಗೂ ಬೈರತಿ ಸುರೇಶ್ ಅವರು ಜವಾಬ್ದಾರಿ ವಹಿಸಲಿದ್ದಾರೆ. ಮಾಗಡಿ ತಂಡವನ್ನು ಸ್ಥಳೀಯ ಶಾಸಕರಾದ ಬಾಲಕೃಷ್ಣ, ಹುಲಿಯೂರು ದುರ್ಗ ಕಡೆಯಿಂದ ರಂಗನಾಥ್ ಅವರು ಮುನ್ನಡೆಸಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಅವರು ಮಾಹಿತಿ ನೀಡಿದರು.
369 ವಾರ್ಡ್‌ಗಳಲ್ಲೂ ಆಚರಣೆ:
ತಲಾ 1 ಲಕ್ಷ ರು. ಅನುದಾನ
ಅದರ ಜತೆಗೆ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲೂ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಹಾಗೆಯೇ 369 ವಾರ್ಡ್‌ಗಳಲ್ಲೂ ಪ್ರತ್ಯೇಕ ದಿನದಂದು ಕೆಂಪೇಗೌಡ ಜಯಂತಿ ಆಚರಣೆ ಆಯೋಜಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಪ್ರತಿ ವಾರ್ಡ್‌ಗೆ 1 ಲಕ್ಷ ರು. ಅನುದಾನ ನೀಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ಎಂದು ತಿಳಿಸಿದರು.
ಕೆಂಪೇಗೌಡ ಹೆಸರಲ್ಲಿ ನಗರ ಯೋಜನೆ ಕಾಲೇಜ್:
ಕೆಂಪೇಗೌಡ ಅವರ ಗೌರವಾರ್ಥ ಅವರ ಹೆಸರಿನಲ್ಲಿ ನಗರ ಯೋಜನೆ ಸಂಬಂಧಿತ ಕಾಲೇಜು ಸ್ಥಾಪಿಸಲು ನಿರ್ಧರಿಸಲಾಗಿದೆ. ಆ ಬಗ್ಗೆ ಚರ್ಚಿಸಿ ಮುಂದಿನ ರೂಪುರೇಷೆ ಸಿದ್ಧಪಡಿಸಲಾಗುವುದು. ಹಾಗೆಯೇ ದೇವನಹಳ್ಳಿಯಲ್ಲಿ ನಿರ್ಮಿಸಲಾಗುತ್ತಿರುವ ಥೀಮ್ ಪಾರ್ಕ್ ಕಾಮಗಾರಿ ಬಹುತೇಕ ಅಂತ್ಯವಾಗಿದ್ದು, ಅದನ್ನು ಶೀಘ್ರದಲ್ಲಿ ಸಾರ್ವಜನಿಕ ವೀಕ್ಷಣೆಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಸಚಿವರಾದ ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ಕೆ.ಎಚ್.ಮುನಿಯಪ್ಪ, ಕೃಷ್ಣ ಬೈರೇಗೌಡ, ಶಾಸಕರಾದ ಎನ್.ಎ. ಹ್ಯಾರಿಸ್, ಎಚ್.ಸಿ. ಬಾಲಕೃಷ್ಣ, ಡಾ. ರಂಗನಾಥ್, ಶ್ರೀನಿವಾಸ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿ ಹಾಜರಿದ್ದರು.
ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ಸಲಹೆ:ಕೆಂಪೇಗೌಡರ ಜಯಂತಿ ಆಚರಣೆ ಸಂಬಂಧಿಸಿದಂತೆ ನಡೆದ ಪೂರ್ವಭಾವಿ ಸಭೆಯಲ್ಲಿ ಅನೇಕ ಸಲಹೆಗಳು ವ್ಯಕ್ತವಾಗಿದ್ದು, ಕೆಂಪೇಗೌಡ ಅವರನ್ನು ಬೆಂಗಳೂರಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಸಲಹೆ ಕೇಳಿ ಬಂದಿದೆ. ಜತೆಗೆ ಕೆಂಪೇಗೌಡ ಸಮಾಧಿ ಸ್ಥಳವನ್ನು 10 ಎಕರೆ ಜಾಗದಲ್ಲಿ ಅಭಿವೃದ್ಧಿ ಪಡಿಸಬೇಕು. ಕೆಂಪೇಗೌಡರ ಕೋಟೆ ಅಭಿವೃದ್ಧಿಗೆ 100 ಕೋಟಿ ರು. ವೆಚ್ಚದ ಟೆಂಡರ್ ಆಗಿದ್ದು, ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು. ಜಿಬಿಎ ವ್ಯಾಪ್ತಿಯಲ್ಲಿ ಕೆಂಪೇಗೌಡ ಪ್ರಶಸ್ತಿ ಆಯ್ಕೆ ಸಮಿತಿ ರಚಿಸಬೇಕು. ನಗರದ 4 ದಿಕ್ಕುಗಳಲ್ಲೂ 50-60 ಅಡಿ ಎತ್ತರದ ಕೆಂಪೇಗೌಡರ ಕಲ್ಲಿನ ಪ್ರತಿಮೆಗಳ ನಿರ್ಮಾಣ, ಎಲ್ಲಾ ಜಿಲ್ಲೆಗಳಲ್ಲಿ ಕೆಂಪೇಗೌಡ ಜಿಲ್ಲಾ ಭವನ ನಿರ್ಮಾಣ, ಕೆಂಪೇಗೌಡ ಜಯಂತಿಯಂದು ಸರ್ಕಾರಿ ರಜೆ ಘೋಷಣೆ, ಪಠ್ಯಪುಸ್ತಕದಲ್ಲಿ ಕೆಂಪೇಗೌಡರ ಪಠ್ಯಕ್ರಮ ಅಳವಡಿಕೆ ಸೇರಿದಂತೆ ವಿವಿಧ ಸಲಹೆಗಳು ಸಭೆಯಲ್ಲಿ ವ್ಯಕ್ತವಾಗಿವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.