೧೫ರಿಂದ ಅರಣ್ಯವಾಸಿಗಳ ಜಾಗೃತಿ ಜಾಥಾ: ರವೀಂದ್ರ ನಾಯ್ಕ

KannadaprabhaNewsNetwork | Published : Feb 11, 2025 12:50 AM

ಸಾರಾಂಶ

ಅರಣ್ಯವಾಸಿಗಳ ಜಾಥಾ ಫೆ. ೧೫ರಂದು ಹೊನ್ನಾವರದಲ್ಲಿ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ನಂತರದ ದಿನಗಳಲ್ಲಿ ಹೋರಾಟದ ವಾಹಿನಿಗಳ ಮೂಲಕ ರಾಜ್ಯಾದಂತ ಸಂಚರಿಸಲಿದೆ.

ಕಾರವಾರ: ಅರಣ್ಯ ಭೂಮಿ ಹಕ್ಕು ಕಾಯಿದೆ ಅಡಿ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಮೂರು ತಲೆಮಾರಿನ ದಾಖಲೆಯ ಷರತ್ತು ಕೈಬಿಡಿ. ಅರಣ್ಯ ಭೂಮಿ ಹಕ್ಕು ನೀಡಿ ಎಂಬ ಶಿರೋನಾಮೆ ರಾಜ್ಯಾದಂತ ಅರಣ್ಯವಾಸಿಗಳ ಕಾನೂನು ಜಾಗೃತಿ ಜಾಥಾ ಫೆ. ೧೫ರಿಂದ ೩೩ ದಿನಗಳ ಕಾಲ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅರಣ್ಯವಾಸಿಗಳಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿ, ಅರಣ್ಯವಾಸಿಗಳ ಜಾಥವು ಜಿಲ್ಲೆಯ ೧೬೩ ಗ್ರಾಪಂ ವ್ಯಾಪ್ತಿಯೊಂದಿಗೆ ರಾಜ್ಯದ ೧೬ ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.ರಾಜ್ಯಾದಂತ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಕಳೆದ ೩೩ ವರ್ಷದಿಂದ ಸಾಂಘಿಕ ಮತ್ತು ಕಾನೂನತ್ಮಕ ವಿವಿಧ ರೀತಿಯ ಹೋರಾಟದ ಹಿನ್ನಲೆ ಅರಣ್ಯವಾಸಿಗಳ ಜಾಥಾವು ಅರಣ್ಯವಾಸಿಗಳ ಕಾನೂನು ಜ್ಞಾನವನ್ನು ಹೆಚ್ಚಿಸುವ ಚಿಂತನೆಯನ್ನು ಇಟ್ಟುಕೊಳ್ಳಲಾಗಿದೆ.

ರಾಜ್ಯದ ೨೫ ಜಿಲ್ಲೆಗಳಲ್ಲಿ ೨,೯೫,೦೪೮ ಅರ್ಜಿಗಳನ್ನ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳು ಸಲ್ಲಿಸಿದ್ದು, ೧೫,೭೯೮ ಅರ್ಜಿಗಳಿಗೆ ಮಾತ್ರ ಹಕ್ಕು ಪತ್ರ ದೊರಕಿದೆ. ಬಂದಿರುವ ಅರ್ಜಿಗಳಲ್ಲಿ ಪ್ರಥಮ ಹಂತದಲ್ಲಿ ೧,೮೪,೩೫೮ ಅರ್ಜಿಗಳು ತಿರಸ್ಕಾರ ಆಗಿರುವುದು ವಿಷಾದಕರ ಸಂಗತಿಯಾಗಿದೆ ಎಂದರು.ಹೊನ್ನಾವರದಲ್ಲಿ ಚಾಲನೆ: ಅರಣ್ಯವಾಸಿಗಳ ಜಾಥಾ ಫೆ. ೧೫ರಂದು ಹೊನ್ನಾವರದಲ್ಲಿ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ನಂತರದ ದಿನಗಳಲ್ಲಿ ಹೋರಾಟದ ವಾಹಿನಿಗಳ ಮೂಲಕ ರಾಜ್ಯಾದಂತ ಸಂಚರಿಸಲಿದೆ ಎಂದು ಮಾಹಿತಿ ನೀಡಿದರು.ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಹೊಸ ಒತ್ತುವರಿಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣವಾಗಿದೆ. ಹೊಸ ಅತಿಕ್ರಮಣದಾರರಿಗೆ ವೇದಿಕೆಯಿಂದ ಬೆಂಬಲವಿಲ್ಲ ಎಂದರು.

ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ಕುಮಟಾ ಅಧ್ಯಕ್ಷ ಮಂಜುನಾಥ ಮರಾಠಿ, ಯಲ್ಲಾಪುರ ಅಧ್ಯಕ್ಷ ಭೀಮಶಿ ವಾಲ್ಮೀಕಿ, ಗ್ರೀನ್ ಕಾರ್ಡ್ ಪ್ರಮುಖರಾದ ಅಮೋಸ ಈದಾ, ಪೆಂಚಲಯ್ಯ ಕೊಸಿನಪೊಗು ಮುಂತಾದವರು ಇದ್ದರು.

ನಾಳೆ ಹೊನ್ನಾವರದಲ್ಲಿ ವಿದ್ಯುತ್ ವ್ಯತ್ಯಯ

ಕಾರವಾರ: ಹೆಸ್ಕಾಂ ಹೊನ್ನಾವರ ಉಪವಿಭಾಗದ ಗ್ರಾಮೀಣ ಶಾಖೆಯ ವಿವಿಧೆಡೆ ಫೆ. 12ರಂದು ವಿದ್ಯುತ್‌ ವ್ಯತ್ಯಯವಾಗಲಿದೆ.ಸಾಲ್ಕೋಡ, ಹಡಿನಬಾಳ, ಕಡ್ಲೆ ಮತ್ತು ಸುಬ್ರಹ್ಮಣ್ಯ ಫೀಡರ್ ವ್ಯಾಪ್ತಿಗಳಲ್ಲಿ ಹಾಗೂ ಪಟ್ಟಣ ಶಾಖೆಯ ಬಂದರು ರೋಡ್ ಫೀಡರ್ ವ್ಯಾಪ್ತಿಯಲ್ಲಿ ಹಾಗೂ ಪಟ್ಟಣ ಶಾಖೆಯ ಎಲ್ಐಸಿ, ಕೆಎಚ್‌ಬಿ ಕಾಲನಿ ಮತ್ತು ಕರ್ಕಿ ಫೀಡರ್ ವ್ಯಾಪ್ತಿಗಳಲ್ಲಿ ನಿರ್ವಹಣೆಯ ಇರುವುದರಿಂದ ಫೆ. 12ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.30ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

Share this article