ಶ್ರೀಶೈಲಕ್ಕೆ 17ನೇ ವರ್ಷದ ಪಾದಯಾತ್ರೆ ಆರಂಭ

KannadaprabhaNewsNetwork |  
Published : Mar 29, 2024, 12:50 AM IST
ಪೋಟೊ27ಕೆಎಸಟಿ1: ದೋಟಿಹಾಳದಿಂದ ಶ್ರೀಶೈಲ ಮಲ್ಲಯ್ಯನಿಗೆ ಪಾದಯಾತ್ರೆಯನ್ನು ಮಾಡುತ್ತಿರುವ ಭಕ್ತಾಧಿಗಳು, ದೋಟಿಹಾಳ ಸಮೀಪದ ಮಾಟೂರು ಗ್ರಾಮದಲ್ಲಿ ಹಣ್ಣು ಹಂಪಲುಗಳನ್ನು ವಿತರಣೆ ಮಾಡುತ್ತಿರುವ ಭಕ್ತರು. | Kannada Prabha

ಸಾರಾಂಶ

ಅವಧೂತ ಶುಖಮುನಿ ತಾತನ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆ ಪ್ರಾರಂಭಿಸಲಾಗುತ್ತದೆ.

ದೋಟಿಹಾಳ, ಕೇಸೂರು ಭಕ್ತರಿಂದ ಶುಖಮುನಿ ತಾತನ ಮಠದಿಂದ ಶ್ರೀಶೈಲ ಮಲ್ಲಯ್ಯನ

ದೇವಸ್ಥಾನಕ್ಕೆ ಪಾದಯಾತ್ರೆ । ಭಕ್ತರಿಂದ ಉಪಾಹಾರ, ಹಣ್ಣು, ಹಂಪಲು ವ್ಯವಸ್ಥೆಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಎಲ್ಲಿ ನೋಡಿದರಲ್ಲಿ ಭಕ್ತರ ದಂಡು, ಓಂ ನಮಃ ಶಿವಾಯ, ಉಘೇ ಉಘೇ ಮಲ್ಲಯ್ಯ ಎಂಬ ಜಯಘೋಷ, ಪಾದಯಾತ್ರಿಗಳ ಸೇವೆ ಮಾಡುವುದೇ ಒಂದು ಭಾಗ್ಯವೆಂದು ರಸ್ತೆಯುದ್ದಕ್ಕೂ ಉಪಾಹಾರ, ಹಣ್ಣು ಹಂಪಲುಗಳನ್ನು ನೀಡುತ್ತಿರುವ ಭಕ್ತರು.

ಹೌದು... ಈ ದೃಶ್ಯ ಕಂಡು ಬಂದಿದ್ದು ತಾಲೂಕಿನ ದೋಟಿಹಾಳ ಹಾಗೂ ಕೇಸೂರು ಗ್ರಾಮಸ್ಥರು ಶ್ರೀಶೈಲ ಮಲ್ಲಯ್ಯನಿಗೆ ಪಾದಯಾತ್ರೆ ಮಾಡುವ ಸಂದರ್ಭ. ಇವರು ಪಾದಯಾತ್ರೆಯ ಸೇವೆಯನ್ನು ಸತತವಾಗಿ 17 ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ಅವಧೂತ ಶುಖಮುನಿ ತಾತನ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆ ಪ್ರಾರಂಭಿಸಲಾಗುತ್ತದೆ. ಯುಗಾದಿ ಹಬ್ಬದ ಸಮಯದಲ್ಲಿ ಜರುಗುವ ಶ್ರೀಶೈಲದ ಮಲ್ಲಯ್ಯನ ಜಾತ್ರೆಗೆ ಬುಧವಾರದಂದು ದೋಟಿಹಾಳ, ಕೇಸೂರ, ಕಲಕೇರಿ, ಬಿಜಕಲ್, ಮುದೇನೂರ, ಜಾಲಿಹಾಳ ಸೇರಿದಂತೆ ವಿವಿಧ ಸುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಶ್ರೀಶೈಲ ಕ್ಷೇತ್ರದತ್ತ ಪಾದಯಾತ್ರೆ ಕೈಗೊಂಡಿದ್ದಾರೆ. ದಾರಿಯುದ್ದಕ್ಕೂ ಪಾದಯಾತ್ರಿಗಳು ಸಿರಿಗಿರಿಯ ಮಲ್ಲಯ್ಯನಿಗೆ ಜೈ ಎಂದು ಜೈಕಾರ ಹಾಕುತ್ತಾ ಮುಂದಕ್ಕೆ ಸಾಗುವ ಈ ಭಕ್ತರಿಗೆ ಪ್ರತಿದಿನ ತಾವು ಕ್ರಮಿಸಿದ ದೂರ ಎಷ್ಟು ಎಂಬುದು ಗೊತ್ತಾಗುವುದೇ ಇಲ್ಲ. ಭಕ್ತಿಯ ಉನ್ಮಾದ ಹಾಗೂ ಹೊಸ ಚೈತನ್ಯದೊಂದಿಗೆ ಶ್ರೀಶೈಲ ಕ್ಷೇತ್ರದತ್ತ ಪಾದಯಾತ್ರೆ ಕೈಗೊಂಡವರಿಗೆ ಮಾರ್ಗ ಮಧ್ಯದಲ್ಲಿ ಹಲವು ಭಕ್ತರು ಅನ್ನಪ್ರಸಾದ ವ್ಯವಸ್ಥೆ ಹಾಗೂ ವಸತಿ ಸೌಲಭ್ಯ ಒದಗಿಸುತ್ತಾರೆ. ನಿತ್ಯ 50-60 ಕಿಮೀ ದೂರ ಕ್ರಮಿಸಿ, 11 ದಿನದ ಒಳಗೆ ಸುಮಾರು 500 ಕಿಮೀ ದೂರದ ಶ್ರೀಶೈಲ ಮಲ್ಲಯ್ಯನ ಕ್ಷೇತ್ರ ತಲುಪುತ್ತಾರೆ.

ಪಾದಯಾತ್ರೆ ಮಾರ್ಗ:

ರಾಜ್ಯದ ಬಯಲು ಸೀಮೆಯ ನಂತರ ಆಂಧ್ರ ಪ್ರದೇಶದ ಗಡಿ ದಾಟಿ ಐದಾರು ದಿನ ಕಳೆದ ನಂತರ, ಅಲ್ಲಿಯ ಸಿದ್ದಪುರಂ ಬಳಿ ಕಡೆ ಬಾಗಿಲಿನ ವೀರಭದ್ರೇಶ್ವರ ದೇವರ ದರ್ಶನ ಪಡೆದು, ಗಿರಿಯ ಬೆಟ್ಟ ಏರಬೇಕಾಗುತ್ತದೆ. ಈ ಮಾರ್ಗದಲ್ಲಿ ಚಾರಣ ಮಾಡಬೇಕಾಗುತ್ತದೆ. ಅಂಬಲಿಹಳ್ಳ, ಗಂಗನಹಳ್ಳಿ ನಂತರ ಮಲ್ಲಯ್ಯನ ಬಾವಿ ನೀರು ಕುಡಿದು ಭೀಮನಕೊಳ್ಳ ದಾಟಿ, ಕೈಲಾಸ ಬಾಗಿಲ ಸಮೀಪಕ್ಕೆ ಹೋದಾಗ ಸ್ವರ್ಗವೇ ನಮ್ಮ ಹತ್ತಿರದಲ್ಲಿದೆ ಎಂದು ಭಾಸವಾಗುತ್ತದೆ. ಸ್ವಲ್ಪ ದಾರಿಯಲ್ಲಿ ಚಲಿಸಿದ ನಂತರ ಸಿಗುವುದೇ ಶ್ರೀಶೈಲ ಮಲ್ಲಯ್ಯನ ದೇವಸ್ಥಾನ ಎಂದು ಪಾದಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರು ಹೇಳುತ್ತಾರೆ.

ಪಾದಯಾತ್ರಿಗಳಿಗೆ ಸೇವೆ:

ಶ್ರೀಶೈಲದ ಮಲ್ಲಯ್ಯನ ದರ್ಶನಕ್ಕೆ ಹೊರಡುತ್ತಿರುವ ಪಾದಯಾತ್ರಿಗಳಿಗಾಗಿ ದೋಟಿಹಾಳ ಗ್ರಾಮದಿಂದ ಶ್ರೀಶೈಲದ ವರೆಗೂ ಪ್ರಸಾದ ಸೇವೆ ಇರುತ್ತದೆ. ಮಾರ್ಗದುದ್ದಕ್ಕೂ ಚಹಾ, ಚೂಡಾ, ಭಜ್ಜಿ, ಉಪ್ಪಿಟ್ಟು, ಅವಲಕ್ಕಿ, ಬದಾಮಿ ಹಾಲು, ಮಜ್ಜಿಗೆ, ಹಣ್ಣು-ಹಂಪಲುಗಳ ವ್ಯವಸ್ಥೆ ಮಾಡುತ್ತಾ ಮಲ್ಲಯ್ಯನಿಗೆ ಭಕ್ತಿ ಸಮರ್ಪಿಸುತ್ತಿದ್ದಾರೆ. ಸುಮಾರು 500 ಕಿಮೀ ದೂರ ಕ್ರಮಿಸುವ ಯಾತ್ರಾರ್ಥಿಗಳು ಯುಗಾದಿಯಂದು ಶ್ರೀ ಶೈಲ ಮಲ್ಲಿಕಾರ್ಜುನ ದರ್ಶನ ಪಡೆಯಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!