
ಕನ್ನಡಪ್ರಭ ವಾರ್ತೆ ಮಧುಗಿರಿ
ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ಬಗರ್ ಹುಕ್ಕುಂ ಸಮಿತಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ಹಲವು ವರ್ಷಗಳಿಂದ ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆದರೆ 187 ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ. ಅರ್ಜಿಗಳ ಪರಿಶೀಲನೆ ನಡೆಸಿ ಅರ್ಹರಿಗೆ ಸಾಗುವಳಿ ಚೀಟಿ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಾಗುವಳಿ ಮಾಡುತ್ತಿರುವ ರೈತರು ತಮ್ಮ ಜಮೀನಿನ ಹಕ್ಕುಪತ್ರ ಪಡೆಯಲು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಅರ್ಜಿಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ, ನಿಯಮಾನುಸಾರ ಅರ್ಹ ಫಲಾನುಭವಿಗಳನ್ನು ಗುರುತಿಸಿ ವಿಲೇವಾರಿ ಮಾಡಬೇಕು. ಅನಗತ್ಯ ವಿಳಂಬ ಮಾಡದೆ ಬಾಕಿ ಅರ್ಜಿಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಕಂದಾಯ ಹಾಗೂ ಗ್ರಾಮಲೆಕ್ಕಿಗ ಲಾಗಿನ್ ನಲ್ಲಿರುವ ಸಾಗುವಳಿ ಚೀಟಿ ಪ್ರಕರಣಗಳು ಡಿ.10 ರೊಳಗಾಗಿ ಸರ್ವೇ ಇಲಾಖೆಯ ಲಾಗಿನ್ ಗೆ ಪುಷ್ ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.ತಾಲೂಕಿನಲ್ಲಿ 2357 ಸಾಗುವಳಿ ಚೀಟಿ ಈ ಹಿಂದೆ ನೀಡಿದ್ದು, ಆ ದಾಖಲಾತಿಗಳು ಕಳೆದು ಹೋಗಿವೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದಾಗ, ಆ ರೈತರ ಬಳಿ ಇರುವ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿ, ಅವರಿಂದ ಸೂಕ್ತ ದಾಖಲೆಗಳನ್ನು ಡಿ.20ರೊಳಗಾಗಿ ಪಡೆಯಬೇಕೆಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನಲ್ಲಿ ಮಜರೆ ಗ್ರಾಮಗಳನ್ನು ಗುರುತಿಸಿರುವ ಕಡೆ ರುದ್ರಭೂಮಿಗಳಿಗೂ ಜಾಗವನ್ನು ಮೀಸಲಿಡಬೇಕು ಎಂದು ಶಾಸಕ ಕೆ.ಎನ್. ರಾಜಣ್ಣ ತಿಳಿಸಿದರು.
ಉಪವಿಭಾಗಾಧಿಕಾರಿ ಗೊಟೂರು ಶಿವಪ್ಪ ಮಾತನಾಡಿ, ಕಂದಾಯ ಹಾಗೂ ಗ್ರಾಮ ಲೆಕ್ಕಿಗರುಗಳಿಗೆ ಯಾವ ರೀತಿ ಕೆಲಸ ಮಾಡುತ್ತಿದ್ದೀರಾ ಎಂದು ಒಬ್ಬೊಬ್ಬರಿಗೆ ಗನ್ ಮ್ಯಾನ್ ಗಳನ್ನು ಇಡಬೇಕಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.