ವಿಕಿಪೀಡಿಯಾದಲ್ಲಿ ಮಹಿಳಾ ಪರ ಮಾಹಿತಿ ಹೆಚ್ಚಾಗಲಿ: ಡಾ. ಯು.ಬಿ. ಪವನಜ

KannadaprabhaNewsNetwork |  
Published : Nov 26, 2026, 01:15 AM IST
000 | Kannada Prabha

ಸಾರಾಂಶ

, ತಂತ್ರಜ್ಞಾನ ಯುಗದಲ್ಲಿ ಜ್ಞಾನ ಸಂಪಾದನೆ ಮತ್ತು ಹಂಚಿಕೆ ಡಿಜಿಟಲ್ ಮಾಧ್ಯಮಗಳ ಮೂಲಕ ಹೆಚ್ಚು ಪರಿಣಾಮಕಾರಿಯಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳು ವಿಕಿಪೀಡಿಯಾ ಸಂಪಾದನೆಯ ತಾಂತ್ರಿಕ ಕೌಶಲ್ಯಗಳನ್ನು ಕಲಿತುಕೊಳ್ಳಬೇಕು. ಕೇವಲ ಮಾಹಿತಿಯ ಬಳಕೆದಾರರಾಗದೆ, ವಿಶ್ವಾಸಾರ್ಹ ಮಾಹಿತಿಯನ್ನು ಸೃಷ್ಟಿಸುವವರಾಗಬೇಕು.

ಕನ್ನಡಪ್ರಭ ವಾರ್ತೆ ತುಮಕೂರು

ವಿಕಿಪೀಡಿಯಾದಲ್ಲಿ ಮಹಿಳಾ ಸಂಪಾದಕರ ಪಾಲ್ಗೊಳ್ಳುವಿಕೆ ಕಡಿಮೆಯಿದ್ದು, ಮಹಿಳಾ ಸಾಧಕಿಯರ ಕುರಿತ ಮಾಹಿತಿಯೂ ನಿರೀಕ್ಷಿತ ಪ್ರಮಾಣದಲ್ಲಿ ಲಭ್ಯವಿಲ್ಲ. ಈ ಕೊರತೆಯನ್ನು ನೀಗಿಸಲು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವಿಕಿಪೀಡಿಯಾ ಸಂಪಾದನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹಿರಿಯ ವಿಜ್ಞಾನಿ ಹಾಗೂ ಕನ್ನಡದ ಮೊದಲ ಜಾಲತಾಣದ ಸ್ಥಾಪಕ ಡಾ. ಯು.ಬಿ. ಪವನಜ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಮತ್ತು ಸಂಶೋಧನ ವಿಭಾಗ ಹಾಗೂ ಕರಾವಳಿ ವಿಕಿಮೀಡಿಯನ್ಸ್ ಸಹಯೋಗದಲ್ಲಿ ನ. ೨೫ರಂದು ಬುಧವಾರ ಆಯೋಜಿಸಿರುವ ಎರಡು ದಿನಗಳ ಕನ್ನಡ ವಿಕಿಪೀಡಿಯಾ ಕಾರ್ಯಾಗಾರ ಹಾಗೂ ಮಹಿಳಾಪರ ಸಂಪಾದನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಅನುವಾದ ಕಾರ್ಯದಲ್ಲಿ ತೊಡಗಿಸಿಕೊಳ್ಳುವವರಿಗೆ ವಿಷಯ ಜ್ಞಾನ, ಮಾಹಿತಿ ಜ್ಞಾನ ಹಾಗೂ ಭಾಷಾ ಜ್ಞಾನ ಅತ್ಯಗತ್ಯ. ಕೇವಲ ಭಾಷಾಂತರ ಮಾಡುವುದಷ್ಟೇ ಅನುವಾದವಲ್ಲ, ವಿಷಯದ ಹಿನ್ನೆಲೆ ಮತ್ತು ಅದರ ನಿಖರತೆಯನ್ನು ಅರಿತುಕೊಂಡು ಅರ್ಥಪೂರ್ಣವಾಗಿ ಅನುವಾದಿಸಬೇಕು. ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಜ್ಞಾನ ಸಂಪತ್ತಿನ ವಿಸ್ತರಣೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಬೇಕು. ಡಿಜಿಟಲ್ ಜಗತ್ತಿನಲ್ಲಿ ಮಹಿಳೆಯರ ಸಾಧನೆ, ಚಿಂತನೆ, ಸಂಶೋಧನೆ ಮತ್ತು ಕೊಡುಗೆಗಳಿಗೆ ಸೂಕ್ತ ಸ್ಥಾನ ಕಲ್ಪಿಸುವಲ್ಲಿ ವಿಕಿಪೀಡಿಯಾ ಸಂಪಾದನೋತ್ಸವಗಳು ಮಹತ್ವದ ಪಾತ್ರ ವಹಿಸುತ್ತವೆ. ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಮಾಹಿತಿ ಸಂಪತ್ತು ಅತ್ಯಗತ್ಯ. ಜನರಿಂದ, ಜನರಿಗಾಗಿ, ಜನರೇ ಬೆಳೆಸುವ ಮುಕ್ತ ಜ್ಞಾನಕೋಶವೇ ವಿಕಿಪೀಡಿಯಾ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥ ಪ್ರೊ. ಪಿ. ಪರಮಶಿವಯ್ಯ ಮಾತನಾಡಿ, ತಂತ್ರಜ್ಞಾನ ಯುಗದಲ್ಲಿ ಜ್ಞಾನ ಸಂಪಾದನೆ ಮತ್ತು ಹಂಚಿಕೆ ಡಿಜಿಟಲ್ ಮಾಧ್ಯಮಗಳ ಮೂಲಕ ಹೆಚ್ಚು ಪರಿಣಾಮಕಾರಿಯಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳು ವಿಕಿಪೀಡಿಯಾ ಸಂಪಾದನೆಯ ತಾಂತ್ರಿಕ ಕೌಶಲ್ಯಗಳನ್ನು ಕಲಿತುಕೊಳ್ಳಬೇಕು. ಕೇವಲ ಮಾಹಿತಿಯ ಬಳಕೆದಾರರಾಗದೆ, ವಿಶ್ವಾಸಾರ್ಹ ಮಾಹಿತಿಯನ್ನು ಸೃಷ್ಟಿಸುವವರಾಗಬೇಕು ಎಂದರು.

ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷ ಡಾ. ಸಿಬಂತಿ ಪದ್ಮನಾಭ ಕೆ.ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಪ್ರಜ್ಞಾ ದೇವಾಡಿಗ, ಉಪನ್ಯಾಸಕರಾದ ಡಾ. ಪೃಥ್ವಿರಾಜ ಟಿ., ಡಾ. ಸುಲೋಚನ ಜಿ.ಎಸ್., ಡಾ. ಗಿರಿಜಮ್ಮ, ವಿಷ್ಣುಧರನ್ ಹಾಗೂ ತನುಶ್ರೀ ಉಪಸ್ಥಿತರಿದ್ದರು. ಈಶ್ವರಿ ವಿ. ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆಯಲ್ಲಿ ಮುಳುಗಿವೆ ಕೊಳಚೆ ಮಂಡಳಿಯ ನಿವಾಸಗಳು: ರವಿಶಂಕರ್ ರೆಡ್ಡಿ
ಸಂತ್ರಸ್ತ ಕುಟುಂಬಗಳಿಗೆ ಸಚಿವ ಶಿವಲಿಂಗೇಗೌಡ ಸಾಂತ್ವನ