ಮಂಡ್ಯ ಜಿಲ್ಲೆಯ ೧೯,೨೦೫ ಮಂದಿ ಪಿಂಚಣಿದಾರರು ನಿರಾಳ

KannadaprabhaNewsNetwork |  
Published : Aug 25, 2026, 01:45 AM IST
ಡಾ.ಕುಮಾರ | Kannada Prabha

ಸಾರಾಂಶ

ಪಿಂಚಣಿದಾರರ ವಾರ್ಷಿಕ ಆದಾಯ ಮಿತಿಯನ್ನು ರಾಜ್ಯ ಸರ್ಕಾರ ೩೨ ಸಾವಿರ ರು.ಗಳಿಂದ ೧,೨೦,೦೦೦ ರು.ಗಳಿಗೆ ಹೆಚ್ಚಿರುವುದರಿಂದ ಪಿಂಚಣಿ ಕಡಿತಗೊಂಡಿದ್ದ ಜಿಲ್ಲೆಯ ೧೯,೨೦೫ ಫಲಾನುಭವಿಗಳು ಇದೀಗ ನಿರಾಳರಾಗಿದ್ದಾರೆ. ನಿಯಮಬಾಹಿರವಾಗಿ ಪಿಂಚಣಿ ಪಡೆಯುತ್ತಿದ್ದವರ ಕುರಿತು ರಾಜ್ಯ ಸರ್ಕಾರ ಪರಿಶೀಲನೆ ನಡೆಸಿದ ವೇಳೆ ಮಂಡ್ಯ ಜಿಲ್ಲೆಯ ೬೦,೬೫೧ ಅನರ್ಹರು ಎಂದು ಗುರುತಿಸಿ ಪಿಂಚಣಿ ಕಡಿತಗೊಳಿಸಲಾಗಿತ್ತು.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಪಿಂಚಣಿದಾರರ ವಾರ್ಷಿಕ ಆದಾಯ ಮಿತಿಯನ್ನು ರಾಜ್ಯ ಸರ್ಕಾರ ೩೨ ಸಾವಿರ ರು.ಗಳಿಂದ ೧,೨೦,೦೦೦ ರು.ಗಳಿಗೆ ಹೆಚ್ಚಿರುವುದರಿಂದ ಪಿಂಚಣಿ ಕಡಿತಗೊಂಡಿದ್ದ ಜಿಲ್ಲೆಯ ೧೯,೨೦೫ ಫಲಾನುಭವಿಗಳು ಇದೀಗ ನಿರಾಳರಾಗಿದ್ದಾರೆ.

ನಿಯಮಬಾಹಿರವಾಗಿ ಪಿಂಚಣಿ ಪಡೆಯುತ್ತಿದ್ದವರ ಕುರಿತು ರಾಜ್ಯ ಸರ್ಕಾರ ಪರಿಶೀಲನೆ ನಡೆಸಿದ ವೇಳೆ ಜಿಲ್ಲೆಯ ೬೦,೬೫೧ ಅನರ್ಹರು ಎಂದು ಗುರುತಿಸಿ ಪಿಂಚಣಿ ಕಡಿತಗೊಳಿಸಲಾಗಿತ್ತು. ಅದರಲ್ಲಿ ೧೯,೨೦೫ ಮಂದಿ ೩೨ ಸಾವಿರ ರು. ವಾರ್ಷಿಕ ಆದಾಯಕ್ಕಿಂತ ಮೇಲ್ಪಟ್ಟವರು ಸೇರಿದ್ದರು. ಅದರಂತೆ ರಾಜ್ಯದಲ್ಲಿ ೨೩,೧೪,೫೪೪ ಫಲಾನುಭವಿಗಳ ಆದಾಯ ಮಿತಿ ೩೨ ಸಾವಿರ ರು.ಗಿಂತ ಹೆಚ್ಚು ಹಾಗೂ ೧,೨೦,೦೦೦ ರು. ಮಿತಿಯಲ್ಲಿ ಫಲಾನುಭವಿಗಳಿರುವುದು ಕಂಡುಬಂದಿತ್ತು.

ನಿಗದಿತ ವಾರ್ಷಿಕ ಆದಾಯ ಮಿತಿಯಲ್ಲಿರುವಂತಹ ಸಂಶಯಾಸ್ಪದ ಫಲಾನುಭವಿಗಳ ಪಿಂಚಣಿಗಳನ್ನು ಮುಂದುವರೆಸುವಂತೆ ಉಪ ಮುಖ್ಯಮಂತ್ರಿಗಳ ಆದೇಶದಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜಿ.ಎನ್.ಸುಶೀಲ ಸುತ್ತೋಲೆ ಹೊರಡಿಸಿದ್ದಾರೆ.

ಇದರ ಪರಿಣಾಮ ಜಿಲ್ಲೆಯೊಳಗೆ ೩೨ ಸಾವಿರ ರು. ವಾರ್ಷಿಕ ಆದಾಯ ಮಿತಿ ಮೀರಿದ್ದ ಕಾರಣದಿಂದ ಪಿಂಚಣಿ ಕಡಿತಗೊಂಡಿದ್ದ ೧೯,೨೦೫ ಫಲಾನುಭವಿಗಳು ಇದೀಗ ಮತ್ತೆ ಪಿಂಚಣಿ ಪಡೆಯುವುದಕ್ಕೆ ಅರ್ಹರೆನಿಸಿಕೊಂಡಿದ್ದಾರೆ. ಅವರಿಗೆ ಪಿಂಚಣಿ ಪಾವತಿಸುವಂತೆ ತಾಲೂಕಿನ ಎಲ್ಲಾ ತಹಸೀಲ್ದಾರ್‌ರವರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸೂಚನೆ ನೀಡಿದ್ದಾರೆ.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್‌ಕುಮಾರ್ ಮೀನಾ ಅವರು ಮಂಡ್ಯದಲ್ಲಿ ಪ್ರಗತಿಪರಿಶೀಲನೆ ನಡೆಸುವ ಸಮಯದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ವಾರ್ಷಿಕ ಆದಾಯದ ಮಿತಿಯ ಕಾರಣದಿಂದ ಜಿಲ್ಲೆಯಲ್ಲಿ ಪಿಂಚಣಿಯಿಂದ ಹೊರಗುಳಿದಿರುವವರ ಬಗ್ಗೆ ಗಮನಸೆಳೆದಿದ್ದರು. ೩೨ ಸಾವಿರ ರು. ವಾರ್ಷಿಕ ಆದಾಯ ಮಿತಿ ಮಾನದಂಡ ಇಂದಿಗೆ ಸೂಕ್ತ ಎನಿಸುವುದಿಲ್ಲ. ಕಾಲ ಬದಲಾದಂತೆ ಎಲ್ಲರ ವಾರ್ಷಿಕ ಆದಾಯ ಮಿತಿಯೂ ಏರಿಕೆಯಾಗಿದೆ. ಗೃಹಲಕ್ಷ್ಮಿ ಹಣವೂ ಸೇರಿದಂತೆ ಆದಾಯ ಮಿತಿ ಹೆಚ್ಚಳವಾಗಿರುವುದರಿಂದ ಹಳೆಯ ಮಾನದಂಡಕ್ಕೆ ಅನುಗುಣವಾಗಿ ಪಿಂಚಣಿಯನ್ನು ನಿರ್ಧರಿಸುವುದು ಸೂಕ್ತವಲ್ಲ. ಇದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಮನಸೆಳೆದು ಆದಾಯಮಿತಿ ಹೆಚ್ಚಿಸುವಂತೆ ಮನವಿ ಮಾಡಿದ್ದರು.

ಅದರಂತೆ ರಾಜ್ಯ ಸರ್ಕಾರ ಆದಾಯ ಮಿತಿಯ ಕುರಿತಂತೆ ಪರಿಷ್ಕರಣೆ ಮಾಡಿ ೩೨ ಸಾವಿರ ರು. ಇದ್ದ ಆದಾಯ ಮಿತಿಯನ್ನು ೧,೨೦,೦೦೦ ರು.ಗಳಿಗೆ ಏರಿಸಿದ್ದು, ಇದು ಇಡೀ ರಾಜ್ಯದ ವಾರ್ಷಿಕ ಆದಾಯ ಮಿತಿಯ ಕಾರಣಕ್ಕೆ ಪಿಂಚಣಿಯಿಂದ ಹೊರಗುಳಿದಿದ್ದ ೨೩,೧೪,೫೪೪ ಫಲಾನುಭವಿಗಳಿಗೆ ಅನುಕೂಲವಾಗಿದೆ.

ಜಿಲ್ಲಾಧಿಕಾರಿ ಡಾ.ಕುಮಾರ ಅವರು ನೀಡಿದ ಒಂದು ಸಲಹೆಯಿಂದ ಲಕ್ಷಾಂತರ ಜನರು ಮತ್ತೆ ಪಿಂಚಣಿ ವ್ಯಾಪ್ತಿಯೊಳಗೆ ಬಂದು ಜೀವನ ಭದ್ರತೆ ಕಂಡುಕೊಳ್ಳುವಂತಾಗಿದೆ. ಇದು ಜಿಲ್ಲಾಧಿಕಾರಿಯವರಲ್ಲಿರುವ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ. ಇದರಿಂದ ಪಿಂಚಣಿದಾರರಲ್ಲಿ ನಿರಾಳ ಭಾವ ಮೂಡಿದೆ.

ಜಿಲ್ಲೆಯಲ್ಲಿ ವಾರ್ಷಿಕ ಆದಾಯ ಮಿತಿಯಿಂದ ಪಿಂಚಣಿ ಕಡಿತಗೊಂಡಿದ್ದವರು

ತಾಲೂಕು ಪಿಂಚಣಿದಾರರು

ಕೆ.ಆರ್.ಪೇಟೆ ೩೬೨೩

ಮದ್ದೂರು ೬೨೫೩

ಮಳವಳ್ಳಿ ೧೭೯೩

ಮಂಡ್ಯ ೫೯೧೬

ನಾಗಮಂಗಲ ೧೩೨೬

ಪಾಂಡವಪುರ ೧೨೯೫

ಶ್ರೀರಂಗಪಟ್ಟಣ ೧೮೪೦

ಒಟ್ಟು ೧೯೨೦೫ ಪಿಂಚಣಿ ವ್ಯವಸ್ಥೆಗೆ ೩೨ ಸಾವಿರ ರು. ವಾರ್ಷಿಕ ಆದಾಯ ಮಿತಿ ನಿಗದಿ ಹಳೆಯ ಮಾನದಂಡ. ಈಗ ಗೃಹಲಕ್ಷ್ಮಿ ಹಣ ಬರುತ್ತಿದೆ. ಎಲ್ಲರ ಆದಾಯ ಮಿತಿಯೂ ಹೆಚ್ಚಳವಾಗಿದೆ. ಈಗಲೂ ವಾರ್ಷಿಕ ಆದಾಯ ಮಿತಿಯಲ್ಲಿ ಹಳೆಯ ಮಾನದಂಡ ಅನುಸರಿಸಿದರೆ ಅರ್ಹ ಫಲಾನುಭವಿಗಳು ಪಿಂಚಣಿಯಿಂದ ವಂಚಿತರಾಗುತ್ತಿದ್ದರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಬಂದಿದ್ದ ವೇಳೆ ಅವರ ಗಮನಕ್ಕೆ ತಂದಿದ್ದೆವು. ಇದೀಗ ಸರ್ಕಾರ ವಾರ್ಷಿಕ ಆದಾಯಮಿತಿಯನ್ನು ಪರಿಷ್ಕರಿಸಿ ೧.೨೦ ಲಕ್ಷ ರು.ವರೆಗೆ ಹೆಚ್ಚಿಸಿದೆ. ಇದರಿಂದ ಜಿಲ್ಲೆಯ ೧೯,೨೦೫ ಫಲಾನುಭವಿಗಳು ಮತ್ತೆ ಪಿಂಚಣಿ ವ್ಯಾಪ್ತಿಗೆ ಬಂದಿದ್ದಾರೆ.

- ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ರಾಹ್ಮಣ ಯುವಕರು ಸಮಾಜಕ್ಕೆ ಕೊಡುಗೆ ನೀಡಿ: ಮಾ.ಸ ನಂಜುಂಡಸ್ವಾಮಿ
ವಿವಿಧ ಪ್ರದೇಶಗಳಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ, ಪರಿಶೀಲನೆ