-ಜಿಲ್ಲಾ ರೈತರ ಒಕ್ಕೂಟ ನೇತೃತ್ವದಲ್ಲಿ ಪ್ರತಿಭಟನೆ। ನೀರು ಹೋರಾಟಗಾರರಿಗೆ ವಾಸ್ತವಾಂಶ ತಿಳಿಸಿ: ಸತೀಶ್‌ಕನ್ನಡಪ್ರಭ ವಾರ್ತೆ, ದಾವಣಗೆರೆಭದ್ರಾ ಡ್ಯಾಂನಿಂದ ಬೇಸಿಗೆ ಹಂಗಾಮಿನಲ್ಲೇ ಸತತವಾಗಿ 120 ದಿನಗಳ ಕಾಲ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ಜಿಲ್ಲಾ ರೈತರ ಒಕ್ಕೂಟದ ನೇತೃತ್ವದಲ್ಲಿ ಅಚ್ಚುಕಟ್ಟು ರೈತರು ನಗರದಲ್ಲಿ ಸೋಮವಾರ ಸಾಂಕೇತಿಕವಾಗಿ ಪ್ರತಿಭಟಿಸಿದರು. ನಗರದ ಜಿಲ್ಲಾಡಳಿತ ಭವನದ ಎದುರು ಜಿಲ್ಲೆಯ ರೈತರ ಒಕ್ಕೂಟದ ಅಧ್ಯಕ್ಷ ಬಿ.ಎಂ. ಸತೀಶ ಕೊಳೇನಹಳ್ಳಿ, ತಾಪಂ ಮಾಜಿ ಉಪಾಧ್ಯಕ್ಷ ಬೇತೂರು ಸಂಗನಗೌಡ್ರು, ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ, ಬಲ್ಲೂರು ರವಿಕುಮಾರ ಇತರರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.ಇದೇ ವೇಳೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಬಿ.ಎಂ. ಸತೀಶ ಕೊಳೇನಹಳ್ಳಿ, ಈಗಾಗಲೇ ಜಿಲ್ಲೆಯ ಅಚ್ಚುಕಟ್ಟು ಪ್ರದೇಶದಲ್ಲಿ ಶೇ.16ರಷ್ಟು ನಾಟಿ ಮಾಡಿದ್ದಾರೆ. ಶೇ.14ರಷ್ಟು ರೈತರು ಬೀಜ ಚೆಲ್ಲಿದ್ದಾರೆ. ಭದ್ರಾ ನೀರು ಅಂದರೆ ಭದ್ರಾ ಕಾಲುವೆ ನೀರು ಬಂದ ನಂತರ ಶೇ.50ರಷ್ಟು ರೈತರು ಬತ್ತದ ಬೀಜ ಚೆಲ್ಲುವವರಿದ್ದಾರೆ. ಈ ಎಲ್ಲರಿಗೂ ಬತ್ತದ ಕೊಯ್ಲು ಆಗುವವರೆಗೂ ನೀರು ಹರಿಸಬೇಕಾಗುತ್ತದೆ. ಅಂದರೆ ಜನವರಿ 2027ರವರೆಗೆ ನೀರು ಹರಿಸಬೇಕಾಗುತ್ತದೆ ಎಂದರು. ಈಗಿನಿಂದ ಜನವರಿವರೆಗೆ ನಾಲೆಗೆ ನೀರು ಹರಿಸಿದರೆ ಭದ್ರಾ ಡ್ಯಾಂ ಖಾಲಿಯಾಗುತ್ತದೆ. ಈಗ ಬೀಜ ಚೆಲ್ಲಿ ನಾಟಿ ಮಾಡಿದರೆ ಮೂಡುಗಾಳಿಗೆ ಎಕರೆಗೆ 15-20 ಚೀಲ ಇಳುವರಿ ಬರುತ್ತದೆ. ಈದು ಬಾರಿ ಗೊಬ್ಬರ, ಕೂಲಿ ಖರ್ಚು ಮಾಡಿದರೂ ಹಾಕಿದ ಬಂಡವಾಳ ಸಹ ಬರುವುದಿಲ್ಲ. ಮತ್ತೊಂದು ಕಡೆ ಡ್ಯಾಂ ನೀರು ವ್ಯರ್ಥವಾಗುತ್ತದೆ. ರೈತರ ಶ್ರಮಕ್ಕೆ ತಕ್ಕ ಪ್ರತಿಫಲವೂ ಸಿಗುವುದಿಲ್ಲ. ಡ್ಯಾಂ ಖಾಲಿಯಾಗಿ ಮುಂದಿನ ಬೇಸಿಗೆ ಹಂಗಾಮಿನಲ್ಲಿ ಇಡೀ ಜಿಲ್ಲೆಯ ಅಚ್ಚುಕಟ್ಟು ಪ್ರದೇಶ ಒಣಗಿ, ಅಂತರ್ಜಲೂ ಪಾತಾಳಕ್ಕಿಳಿಯಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಡ್ಯಾಂನಿಂದ ಜನವರಿ 5 ಅಥವಾ 10ನೇ ತಾರೀಖಿನಿಂದ ಮೇ ಅಂತ್ಯದವರೆಗೆ ಒಟ್ಟು 130 ದಿನ ಸತತವಾಗಿ ನೀರು ಹರಿಸಿದರೆ ಬೇಸಿಗೆಯಲ್ಲಿ ಬತ್ತ ಎಕರೆಗೆ 50 ಚೀಲ ಇಳುವರಿ ಬರುತ್ತದೆ. ದರ ಕ್ವಿಂಟಲ್‌ಗೆ 4 ಸಾವಿರಕ್ಕಿಂತ ಹೆಚ್ಚಾಗುತ್ತದೆ. ತೋಟದ ಬೆಳೆಗಳೂ ಉಳಿಯುತ್ತವೆ. ಅಲ್ಲದೇ, ಅಂತರ್ಜಲ ಮಟ್ಟವೂ ಕುಸಿಯುವುದಿಲ್ಲ. ಕೊಳವೆ ಬಾವಿಗಳೂ ಫೇಲ್ ಆಗುವುದಿಲ್ಲ. ಇಡೀ ಜಿಲ್ಲೆಯೂ ತಣ್ಣಗಿರುತ್ತದೆ. ಈಗಾಗಲೇ ಬತ್ತದ ಬೀಜ ಚೆಲ್ಲಿ ನಾಟಿ ಮಾಡಿದ ಮತ್ತು ನಾಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ರೈತರು ನೀರು ಬಿಡುವಂತೆ ಕೆಲವರು ಒತ್ತಾಯಿಸುತ್ತಿದ್ದಾರೆ. ಅಂತಹವರಿಗೆ ವಾಸ್ತವ ಪರಿಸ್ಥಿತಿ ತಿಳಿಸಿ, ಜಾಗೃತಿ ಮೂಡಿಸಿ, ಸಮಾಧಾನಪಡಿಸುವುದು ಸರ್ಕಾರ ಮತ್ತು ರೈತ ಮುಖಂಡರ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು. ನಮ್ಮ ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ರೈತರು 10-20 ವರ್ಷದಿಂದ ತೋಟ ಬೆಳೆಸಿಕೊಂಡಿದ್ದಾರೆ. ಸುಮಾರು 3 ಲಕ್ಷ ಎಕರೆ ತೋಟವಿದ್ದು, ಇದರಲ್ಲಿ ಶೇ.80ರಷ್ಟು ಅಡಿಕೆ ಬೆಳೆ ಇದೆ. 2023ರಲ್ಲಿ ಬೇಸಿಗೆ ಹಂಗಾಮಿನಲ್ಲಿ ನೀರಿನ ಕೊರತೆಯಂದಾಗಿ ರೈತರು ತಮ್ಮ ಹೆಂಡತಿ ಕೊರಳ ತಾಳಿ ಅಡ ಇಟ್ಟು, ಸಾಲ ಮಾಡಿ, ಟ್ಯಾಂಕರ್ ಮೂಲಕ ನೀರು ಪೂರೈಸಿ, ತೋಟ ಉಳಿಸಿಕೊಂಡಿದ್ದಾರೆ. ಇನ್ನು ಕೆಲ ರೈತರು ಸಾಲ ಸೋಲ ಮಾಡಿ, 2-3 ಬೋರ್‌ವೆಲ್ ಕೊರೆಸಿ, ತೋಟ ಉಳಿಸಿಕೊಂಡಿದ್ದಾರೆ. ಇಂತಹ ಕಹಿ ಅನುಭವ ಮತ್ತೆ ಮರುಕಳಿಸಬಾರದೆಂಬುದು ಬಹುತೇಕ ರೈತರ ಇಚ್ಛೆಯಾಗಿದೆ ಎಂದು ಅವರು ಹೇಳಿದರು. ತಾಪಂ ಮಾಜಿ ಉಪಾಧ್ಯಕ್ಷ ಬೇತೂರು ಬಿ.ಸಂಗನಗೌಡ್ರು ಮಾತನಾಡಿ, ಬೇಸಿಗೆ ಹಂಗಾಮಿಗೆ 120 ದಿನ ಸತತವಾಗಿ ಹರಿಸಲು ಡ್ಯಾಂನಲ್ಲಿ ಬಳಸಬಹುದಾದ 35 ಟಿಎಂಸಿ ನೀರು ಸಂಗ್ರಹ ಮೀಸಲಿಡಬೇಕು. ಭದ್ರಾ ಮೇಲ್ದಂಡೆ ಯೋಜನೆ ಷರತ್ತಿನಂತೆ ತುಂಗಾ ನದಿಯಿಂದ ಭದ್ರಾ ಡ್ಯಾಂಗೆ 17.40 ಟಿಎಂಸಿ ನೀರು ಲಿಫ್ಟಿಂಗ್ಎ ಮಾಡುವ ಕಾಮಗಾರಿಗೆ ಅಗತ್ಯ ಅನುದಾನ ಕೊಟ್ಟು, ಬಾಕಿ ಕಾಮಗಾರಿ ಪೂರ್ಣಗೊಳಿಸಲಿ. ವಿಬಿಜೀ-ರಾಮ ಜೀ ಯೋಜನೆಯಡಿ ಕಾಲುವೆಗಳಲ್ಲಿ ಬೆಳೆದ ಗಿಡ ಗಂಟಿ ತೆಗೆಸಿ, ಹೂಳು ತೆಗೆದು ಸ್ವಚ್ಛ ಮಾಡಿ, ಕೊನೆ ಭಾಗಕ್ಕೆ ನೀರು ತಲುಪುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ರೈತ ಸಂಘದ ಬಲ್ಲೂರು ರವಿಕುಮಾರ, ಹುಚ್ಚವ್ವನಹಳ್ಳಿ ಮಂಜುನಾಥ, ವಡ್ಡಿನಹಳ್ಳಿ ಲಿಂಗರಾಜ, ಕುಕ್ಕುವಾಡದ ಡಿ.ಸಿ.ದಿನೇಶ, ಗೋಣಿವಾಡ ಎನ್.ಎಂ.ಮಂಜುನಾಥ್, ಶ್ಯಾಗಲೆ ಜಿ.ಜೆ.ರಮೇಶಗೌಡ, ಡಿ.ಕೆ.ಪರಮೇಶ, ಗೋಪನಾಳ್ ಎಸ್.ಆರ್.ರಾಜೇಶ, ಪರಮೇಶ, ಬೇತೂರು ಬಿ.ವಿರೂಪಾಕ್ಷಪ್ಪ, ಬಿ.ಬಿ.ಪ್ರಭು, ಶಿವಕುಮಾರ, ಶ್ಯಾಗಲೆ ಕ್ಯಾಂಪ್ ಸತೀಶ ಇತರರು ಇದ್ದರು. .......ಕೋಟ್...ದಾವಣಗೆರೆ ಜಿಲ್ಲೆಯಲ್ಲಿ ಶೇ.75ರಷ್ಟು ಭದ್ರಾ ಡ್ಯಾಂ ಅಚ್ಚುಕಟ್ಟು ಪ್ರದೇಶ ಹೊಂದಿರುವ ಜಿಲ್ಲೆಯಾಗಿದೆ. ಹಾಗಾಗಿ ದಾವಣಗೆರೆ ಜಿಲ್ಲೆಯವರನ್ನೇ ಭದ್ರಾ ನೀರಾವರಿ ಸಲಹಾ ಸಮಿತಿ(ಐಸಿಸಿ) ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು. ಅಲ್ಲದೇ, ಐಸಿಸಿ ಸಭೆಯನ್ನು ಕಡ್ಡಾಯವಾಗಿ ದಾವಣಗೆರೆಯಲ್ಲಿ ನಡೆಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಹುಚ್ಚವ್ವನಹಳ್ಳಿ ಮಂಜುನಾಥ,ರೈತ ಸಂಘದ ರಾಜ್ಯಾಧ್ಯಕ್ಷ........................ಕ್ಯಾಪ್ಷನ್24ಕೆಡಿವಿಜಿ1-ದಾವಣಗೆರೆಯಲ್ಲಿ ಸೋಮವಾರ ಜಿಲ್ಲಾ ರೈತರ ಒಕ್ಕೂಟದಿಂದ ಸಾಂಕೇತಿಕವಾಗಿ ಪ್ರತಿಭಟಿಸಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಮನವಿ ಅರ್ಪಿಸಲಾಯಿತು.