AC office besieged against gutka ban on 28th

-ಆ.26ರಿಂದ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಿಂದ ಜಿಲ್ಲಾ ಕೇಂದ್ರಕ್ಕೆ ಪಾದಯಾತ್ರೆ: ರೇಣುಕಾಚಾರ್ಯಕನ್ನಡಪ್ರಭ ವಾರ್ತೆ ದಾವಣಗೆರೆ

ಗುಟ್ಕಾ ನಿಷೇಧಿಸುವ ಆರೋಗ್ಯ ಸಚಿವ ಯು.ಟಿ.ಖಾದರ್‌ ಗೊಂದಲಕಾರಿ ನಿರ್ಧಾರದಿಂದಾಗಿ ₹55 ಸಾವಿರ ಇದ್ದ ಅಡಿಕೆ ಧಾರಣೆ 44 ಸಾವಿರಕ್ಕೆ ಕುಸಿದಿದ್ದು, ಖರೀದಿದಾರರು ಮುಂದೆ ಬಾರದ್ದರಿಂದ ರಾಜ್ಯದ 15 ಲಕ್ಷಕ್ಕೂ ಅಧಿಕ ಅಡಿಕೆ ಬೆಳೆಗಾರರ ಕುಟುಂಬಗಳು, ₹50 ಲಕ್ಷಕ್ಕೂ ಅಧಿಕ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದಾರೆ.

ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೂಡಲೇ ಗುಟ್ಕಾ ನಿಷೇಧದ ಆದೇಶ ರದ್ಧುಪಡಿಸಿ, ಅಡಿಕೆ ಬೆಳೆಗಾರರ ಹಿತರಕ್ಷಣೆ ಮುಂದಾಗುವಂತೆ ಒತ್ತಾಯಿಸಿ ಆ.26 ರಂದು ಬೆಳಿಗ್ಗೆ 9ಕ್ಕೆ ಚನ್ನಗಿರಿ, ಮಾಯಕೊಂಡ, ಹೊನ್ನಾಳಿ, ಹರಿಹರ, ಜಗಳೂರು ಎಲ್ಲಾ ಕ್ಷೇತ್ರದಲ್ಲೂ ಪಾದಯಾತ್ರೆ ಆರಂಭಗೊಂಡು, ಆ.27ರಂದು ವಿವಿಧೆಡೆ ವಾಸ್ತವ್ಯ ಮಾಡಿ, ಆ.28ರಂದು ದಾವಣಗೆರೆ ಉಪ ವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ ಎಂದರು.

ದಾವಣಗೆರೆ ಉಪ ವಿಭಾಗಾಧಿಕಾರಿ ಕಚೇರಿ ಎದುರು ಜಿಲ್ಲೆಯ ಎಲ್ಲಾ ಅಡಿಕೆ ಬೆಳೆಗಾರರು, ರೈತರು, ರೈತ ಮಹಿಳೆಯರು, ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.

ಜಿಲ್ಲೆಯ ಸಮಸ್ತ ಅಡಿಕೆ ಬೆಳೆಗಾರರು, ರೈತರು, ಬಿಜೆಪಿ ವಿವಿಧ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಸಿಗರೇಟ್, ಮದ್ಯದ ಲಾಬಿಗೆ ಮಣಿದ ಕಾಂಗ್ರೆಸ್: ಸಿಗರೇಟ್‌, ಮದ್ಯದ ಲಾಬಿಗೆ ಮಣಿದು ರಾಜ್ಯ ಸರ್ಕಾರ ಅಡಿಕೆ ಬೆಳೆಗಾರರ ಹೊಟ್ಟೆ ಮೇಲೆ ಹೊಡೆವ ಕೆಲಸಕ್ಕೆ ಮುಂದಾಗಿದೆ. ಆರೋಗ್ಯ ಸಚಿವರು ಅಹಂಕಾರದ ಧೋರಣೆ ಕೈಬಿಟ್ಟು, ಅಡಿಕೆ ಬೆಳೆಗಾರರ ನೆರವಿಗೆ ಧಾವಿಸಲಿ. ಇಲ್ಲವಾದರೆ, ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ. ಈ ಹೋರಾಟ ಅಡಿಕೆ ಬೆಳೆಗಾರರ ಜೀವನದ ಹೋರಾಟ, ಅಸ್ತಿತ್ವದ ಹೋರಾಟವಾಗಿದೆ. ಎಲ್ಲಾ ಪಕ್ಷಗಳ ಮುಖಂಡರು, ಕಾರ್ಯಕರ್ತರು, ರೈತರು, ಅಡಿಕೆ ಬೆಳೆಗಾರರು, ಸಾರ್ವಜನಿಕರು ಪಕ್ಷಾತೀತವಾಗಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಕಳಂಕಿತ ಸಚಿವ ಬಿ.ನಾಗೇಂದ್ರವಿರುದ್ಧ ಭ್ರಷ್ಟಾಚಾರದ ಹಿನ್ನೆಲೆ ಸಂಪುಟದಿಂದ ವಜಾ ಮಾಡುವಂತೆ ಹೋರಾಟ ನಡೆಸಿದ್ದೇವೆ. ವಿಧಾನಸಭೆ, ವಿಧಾನ ಪರಿಷತ್ ಒಳಗೆ ಮತ್ತು ಹೊರಗೆ ಬಿಜೆಪಿ ನಿರಂತರ ಹೋರಾಟ ನಡೆಸಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಅಪರಾಧಿಯೂ ಅಲ್ಲ. ನನ್ನ ವಿರುದ್ಧದ ಕೇಸ್ ಇದ್ದರೆ ವಿಚಾರಣೆಗೆ ನೋಟೀಸ್ ನೀಡಿದರೆ ನ್ಯಾಯಾಲಯಕ್ಕೆ ಹಾಜರಾಗುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.

ಗುಟ್ಕಾ ಬ್ಯಾನ್ ನಿಷೇಧ ದಿಂದ ರೈತರಿಗೆ ಅನ್ಯಾಯವಾದರೆ ಸಹಿಸುವ ಪ್ರಶ್ನೆಯೇ ಇಲ್ಲ. ಮೆಕ್ಕೆಜೋಳ, ಭತ್ತದ ಬೆಳೆಗಾರರ ಬೆಂಬಲ ಬೆಲೆಗಾಗಿ ಹೋರಾಟದಲ್ಲಿ ಬಿಜೆಪಿ ರೈತ ಮೋರ್ಚಾ ಮುಂದೂಣಿಯಲ್ಲಿದ್ದು, ಹೋರಾಟ ನಡೆಸಿದೆ. ಈಗ ರೈತರಿಗೆ ಅನ್ಯಾಯವಾಗುತ್ತಿದ್ದು, ಮತ್ತೆ ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ಎಂ.ಪಿ.ರೇಣುಕಚಾರ್ಯ ಹೇಳಿದರು.

ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಚಂದ್ರಶೇಖರ ಪೂಜಾರ, ಬಿ.ಎಸ್.ಜಗದೀಶ, ಜಿ.ಎಂ.ರುದ್ರಗೌಡ್ರು, ಬಿ.ಎಂ.ಸತೀಶ ಕೊಳೇನಹಳ್ಳಿ, ಧನಂಜಯ ಕಡ್ಲೇಬಾಳು, ಶಂಕರಗೌಡ ಬಿರಾದಾರ್, ರಾಜು ತೋಟದ್, ತಾರೇಶ ನಾಯ್ಕ, ಚೇತನಾ ಬಾಯಿ, ಎಚ್.ಸಿ.ಜಯಮ್ಮ, ವೀಣಾ ನಂಜಪ್ಪ, ಗೌರಮ್ಮ ಪಾಟೀಲ, ರಾಕೇಶ ಭಜರಂಗಿ, ರಾಜು ವೀರಣ್ಣ, ಸಂತೋಷ ಪೈಲ್ವಾನ್, ಪ್ರವೀಣ ಜಾಧವ್, ಪಂಜು ಪೈಲ್ವಾನ ಇದ್ದರು.

....ಕೋಟ್‌ ...

ಅಡಿಕೆ ಈಗ ವ್ಯಾಪಾರಿ ಬೆಳೆಯಾಗಿಲ್ಲ. ಅಡಿಕೆ ಬೆಳೆಗಾರರ ಹಿತ ಕಾಪಾಡಲು ನಾವು ಹೋರಾಟ ಮಾಡುತ್ತಿದ್ದೇವೆ. ಎಲ್ಲರೂ ಪಕ್ಷಾತೀತವಾಗಿ ಹೋರಾಟದಲ್ಲಿ ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕು. ಅಡಿಕೆ ಬೆಳೆಗಾರ ಭದ್ರಾ ರೈತರ ಹಿತಕ್ಕಾಗಿ ಎಂತಹದ್ದೇ ಹೋರಾಟಕ್ಕೂ ಸಿದ್ಧ.

ತುಂಗಾ ನೀರು ಲಿಫ್ಟ್ ಮಾಡದೇ, ಮೇಲ್ದಂಡೆಗೆ ನೀರು ಹರಿಸುವಂತಿಲ್ಲ.

-ಮಾಡಾಳ್ ಮಲ್ಲಿಕಾರ್ಜುನ, ಬಿಜೆಪಿ ಯುವ ಮುಖಂಡ.

-----

.......ಇದು ಪ್ರತ್ಯೇಕ ಸುದ್ದಿ..............

ಭದ್ರಾ ಡ್ಯಾಂ ಬಳಿ ಪ್ರತಿಭಟನೆ, ಶಿವಮೊಗ್ಗ ಸಿಇಒ ಕಚೇರಿಗೆ ಮುತ್ತಿಗೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ಡ್ಯಾಂ ನೀರು ಈ ಹಿಂದೆ ಪೋಲಾಗುತ್ತಿದ್ದಾಗ ಹೆದ್ದಾರಿ ತಡೆ ನಡೆಸಿದ್ದೇವೆ, ಭದ್ರಾ ಡ್ಯಾಂ ಬಳಿ ಪ್ರತಿಭಟನೆ, ಶಿವಮೊಗ್ಗ ಸಿಇಒ ಕಚೇರಿ ಮುತ್ತಿಗೆ, ಬೆಳಗಾವಿವರೆಗೂ ಹೋರಾಟ ನಡೆಸಿದ್ದೇವೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾಳಿ-ನ್ಯಾಮತಿ ತಾಲೂಕಿನ ಕೆರೆ ತುಂಬಿಸುವ ಯೋಜನೆಗೆ ಬಿ.ಎಸ್.ಯಡ್ಯುರಪ್ಪ ಸರ್ಕಾರ ₹589 ಕೋಟಿ ಅನುದಾನ ಒದಗಿಸಿತ್ತು. ಭದ್ರಾ ಮೇಲ್ಡಂಡೆಗೆ 17.4 ಟಿಎಂಸಿ ನೀರನ್ನು ತುಂಗಾ ನದಿಯಿಂದ ಭದ್ರಾ ಡ್ಯಾಂಗೆ ಲಿಫ್ಟ್ ಮಾಡುವ ಮುತ್ತಿನಕೊಪ್ಪ ಬಳಿ ಕಾಮಗಾರಿಗೆ ₹324 ಕೋಟಿ ಬಿಡುಗಡೆ ಮಾಡಲಾಗಿತ್ತು. ಈಗ ಶೇ.20ರಷ್ತು ಮಾತ್ರ ಕಾಮಗಾರಿ ಬಾಕಿ ಇದೆ ಎಂದರು.

ಮುತ್ತಿನಕೊಪ್ಪ ಲಿಫ್ಟ್ ಯೋಜನೆ ಬಾಕಿ ಕಾಮಗಾರಿಗೆ ಇನ್ನೂ ₹30 ಕೋಟಿ ಅಗತ್ಯವಿದ್ದು, ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಲಿ. ಅರಣ್ಯ ಇಲಾಖೆಯೂ ಕಾಮಗಾರಿಗೆ ಸಮ್ಮತಿಸಿದೆ. ಹಾಗಾಗಿ, ಅಗತ್ಯ ಹಣ ಬಿಡುಗಡೆ ಮಾಡಿ, ತುಂಗಾ ನದಿಯಿಂದ ಭದ್ರಾ ಡ್ಯಾಂಗೆ ನೀರು ಲಿಫ್ಟ್‌ ಮಾಡುವ ಕಾಮಗಾರಿ ಪೂರ್ಣಗೊಳಿಸಲಿ ಎಂದು ಅವರು ಆಗ್ರಹಿಸಿದರು.

ಭದ್ರಾ ಡ್ಯಾಂನಿಂದ ಒಂದು ಹನಿ ನೀರನ್ನೂ ಅನ್ಯ ಉದ್ದೇಶಕ್ಕೆ ಬಿಟ್ಟರೆ ಅಥವಾ ಭದ್ರಾ ಮೇಲ್ದಂಡೆ ನೆಪದಲ್ಲಿ ಜಿಲ್ಲೆಯ ಅಚ್ಚುಕಟ್ಟು ರೈತರ ಹಿತಕ್ಕೆ ಧಕ್ಕೆ ತಂದರೆ ಉಗ್ರ ಹೋರಾಟ ನಡೆಸುತ್ತೇವೆ. ರೈತರ ಹಿತ ಕಾಯದಿದ್ದರೆ ವಿಧಾನಸೌಧ ಮುತ್ತಿಗೆ ಹಾಗೂ ರಕ್ತ ಕ್ರಾಂತಿಯ ಹೋರಾಟಕ್ಕೂ ನಾವ್ಯಾರೂ ಹಿಂಜರಿಯುವುದಿಲ್ಲ ಎಂದು ಅವರು ಎಚ್ಚರಿಸಿದರು.

ಫೋಟೊ

24ಕೆಡಿವಿಜಿ2, 3

ದಾವಣಗೆರೆ ಹಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ.