ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಬಿಎಂಪಿಯ ಅನುಮತಿ ಇಲ್ಲದೇ ಫ್ಲೆಕ್ಸ್, ಬ್ಯಾನರ್ ಮುದ್ರಣ ಮಾಡುವ ಪ್ರಿಂಟಿಂಗ್ ಪ್ರೆಸ್‌ಗಳಿಗೆ 1 ರಿಂದ 2 ಲಕ್ಷ ರುಪಾಯಿ ದಂಡ ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ.ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಳವಡಿಕೆ ತಡೆಯುವ ನಿಟ್ಟಿನಲ್ಲಿ ಮಂಗಳವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬಿಬಿಎಂಪಿ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಜಂಟಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಭೆಯಲ್ಲಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಗರದಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್‌ಗಳನ್ನು ತಡೆಗೆ ಬಿಬಿಎಂಪಿ ಮತ್ತು ನಗರ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಲಾಗುವುದು. ಎರಡೂ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಲು ಪ್ರತ್ಯೇಕ ಪ್ರಮಾಣಿತ ಕಾರ್ಯಾಚರಣೆಯ ವಿಧಾನ (ಎಸ್‌ಒಪಿ) ರಚಿಸಲಾಗುವುದು ಎಂದರು. ಫ್ಲೆಕ್ಸ್, ಬ್ಯಾನರ್ ಮುದ್ರಣಾ ಘಟಕಗಳಿಗೆ ಭೇಟಿ ನೀಡಿ ಬಿಬಿಎಂಪಿಯ ಅನುಮತಿ ಇಲ್ಲದ ಜಾಹೀರಾತುಗಳನ್ನು ಮುದ್ರಿಸದಂತೆ ಎಚ್ಚರಿಕೆ ನೀಡಬೇಕು. ನಿಯಮ ಮೀರಿದರೆ ಕಾನೂನು ಕ್ರಮದೊಂದಿಗೆ ದಂಡ ವಿಧಿಸುವುದಾಗಿ ತಿಳಿಸಬೇಕು.ನಗರದ ಪೊಲೀಸ್ ಠಾಣಾವಾರು ಬಿಬಿಎಂಪಿಯಿಂದ ನೋಡಲ್ ಅಧಿಕಾರಿ ನಿಯೋಜಿಸಲಾಗುವುದು, ನಿಗಾ ವಹಿಸಲು ವಲಯಕ್ಕೊಂದು ಪ್ರಹರಿ ವಾಹನ ಕಲ್ಪಿಸಲಾಗುವುದು. ಪೊಲೀಸ್ ಮತ್ತು ಬಿಬಿಎಂಪಿ ಅಧಿಕಾರಿಗಳು ಜಂಟಿಯಾಗಿ ಗಸ್ತು ನಡೆಸಬೇಕು. ಅನಧಿಕೃತ ಜಾಹೀರಾತು ಅಳವಡಿಕೆ ಕಂಡು ಬಂದರೆ ಸ್ಥಳದಲ್ಲಿಯೇ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಅನಧಿಕೃತ ಜಾಹೀರಾತು ಅಳವಡಿಕೆ ಕಂಡು ಬಂದರೆ ಪಾಲಿಕೆ ಸಹಾಯವಾಣಿ ಸಂಖ್ಯೆ 1533ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಿದರು.
ಜಾಹೀರಾತು ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಮಾತನಾಡಿ, ನಗರದಲ್ಲಿ ಜು.1ರಿಂದ ಈವರೆಗೆ ಅನಧಿಕೃತವಾಗಿ ಅಳವಡಿಸಿದ 8,500ಕ್ಕೂ ಅಧಿಕ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಿ 180 ಎಫ್ಐಆರ್ ದಾಖಲಿಸಲಾಗಿದೆ. ಸಾರ್ವಜನಿಕರು ಈ ಬಗ್ಗೆ ದೂರು ದಾಖಲಿಸಲು ಪ್ರತ್ಯೇಕ ಅಪ್ಲಿಕೇಷನ್ ತಯಾರಿಸಲಾಗುವುದು ಎಂದು ಮಾಹಿತಿ ನೀಡಿದರು.ವಲಯ ಆಯುಕ್ತರಾದ ಡಾ। ಆರ್.ಎಲ್ ದೀಪಕ್, ರಮೇಶ್, ಶಿವಾನಂದ್ ಕಪಾಶಿ, ರಮ್ಯಾ, ಸ್ನೇಹಲ್, ವಿನೋತ್ ಪ್ರಿಯಾ, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸತೀಶ್ ಕುಮಾರ್, ರಮನ್ ಗುಪ್ತಾ ಉಪಸ್ಥಿತರಿದ್ದರು.