ಕನ್ನಡಪ್ರಭ ವಾರ್ತೆ ಬೆಂಗಳೂರು
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬಿಬಿಎಂಪಿ ಜಾರಿ ಮಾಡಿರುವ ‘ಒನ್ ಟೈಮ್ ಸೆಟ್ಟಲ್ಮೆಂಟ್’ (ಓಟಿಎಸ್) ಯೋಜನೆಯಡಿ ಏಪ್ರಿಲ್‌ನಿಂದ ಜು.29ರವರೆಗೆ ₹185 ಕೋಟಿ ಪಾವತಿ ಆಗಿದೆ ಎಂದು ಬಿಬಿಎಂಪಿ ತಿಳಿಸಿದೆ.ಏಪ್ರಿಲ್ 1ಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ 3.95 ಲಕ್ಷ ಆಸ್ತಿಗಳಿಂದ ₹733.71 ಕೋಟಿ ಆಸ್ತಿ ತೆರಿಗೆ ಬಾಕಿ ಇತ್ತು. ಜು.29ರ ವೇಳೆಗೆ ₹548.94 ಕೋಟಿಗೂ ಇಳಿಕೆಯಾಗಿದ್ದು, 2.87 ಲಕ್ಷ ಆಸ್ತಿ ಮಾಲೀಕರು ತೆರಿಗೆ ಪಾವತಿಸುವುದು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಏಪ್ರಿಲ್‌ನಲ್ಲಿ ಒಟ್ಟು ₹222.38 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ 16,501 ಆಸ್ತಿ ಮಾಲೀಕರಿಗೆ ನೋಟಿಸ್ ನೀಡಲಾಗಿತ್ತು. ಈ ಪೈಕಿ ಸಾಕಷ್ಟು ಮಂದಿ ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ. ಜು.29ರ ವೇಳೆಗೆ ₹282.59 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ 16,904 ಆಸ್ತಿ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.ಇಂದು ಕೊನೆಯ ದಿನ
ಒನ್ ಟೈಮ್ ಸೆಟ್ಟಲ್ಮೆಂಟ್’ (ಓಟಿಎಸ್) ಬುಧವಾರ ಮಧ್ಯರಾತ್ರಿ 12ಕ್ಕೆ ಕೊನೆಯಾಗಲಿದ್ದು, ಈ ಅವಧಿಗೂ ಮುನ್ನಾ ಬಾಕಿ ಇರುವ ಆಸ್ತಿ ತೆರಿಗೆ ಪಾವತಿಸಿದವರಿಗೆ ಆಸ್ತಿ ತೆರಿಗೆ ಮೇಲೆ ವಿಧಿಸುವ ದಂಡ ಮತ್ತು ಬಡ್ಡಿ ಸಂಪೂರ್ಣವಾಗಿ ಮನ್ನಾ ಆಗಲಿದೆ. ಮಧ್ಯರಾತ್ರಿ 12 ಗಂಟೆ ನಂತರ ಆಸ್ತಿ ತೆರಿಗೆ ಪಾವತಿ ಮಾಡುವವರಿಗೆ ಆಸ್ತಿ ತೆರಿಗೆಗೆ ಸಮನಾಗಿ ದಂಡ ಮತ್ತು ವಾರ್ಷಿಕ ಶೇ.15ರಷ್ಟು ಬಡ್ಡಿ ವಿಧಿಸಲಾಗುತ್ತದೆ.ಬುಧವಾರ ರಾತ್ರಿ 9ರವರೆಗೆ ಕೆಲಸಓಟಿಎಸ್ ಯೋಜನೆ ಬುಧವಾರ ಮಧ್ಯರಾತ್ರಿ ಅಂತ್ಯಗೊಳ್ಳುವ ಹಿನ್ನೆಲೆಯಲ್ಲಿ ವಲಯ ಹಾಗೂ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗಳು ಬುಧವಾರ ರಾತ್ರಿ 9 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ. ಬಿಬಿಎಂಪಿಯ ಆಸ್ತಿ ತೆರಿಗೆ ವೆಬ್‌ಸೈಟ್‌ನಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದರೆ, ಎಸ್ಎಎಸ್ ಅರ್ಜಿ ಸಂಖ್ಯೆಯನ್ನು ನಮೂದಿಸಿ ಡಿಮ್ಯಾಂಡ್ ಡ್ರಾಫ್ಟ್ ಸ್ವೀಕರಿಸಲಾಗುತ್ತದೆ. ಎಲ್ಲ ತೆರಿಗೆದಾರರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಂದಾಯ ವಿಭಾಗದ ವಿಶೇಷ ಆಯುಕ್ತರು ಮನವಿ ಮಾಡಿದ್ದಾರೆ.
ಬಿಬಿಎಂಪಿ ಆಸ್ತಿ ತೆರಿಗೆ ಪಾವತಿಕಡೆದಿನ ವಿಸ್ತರಿಸಿ: ಎಫ್ಕೆಸಿಸಿಐ
ಕನ್ನಡಪ್ರಭ ವಾರ್ತೆ ಬೆಂಗಳೂರುನಗರದಲ್ಲಿ ಬಾಕಿ ಇರುವ ಆಸ್ತಿ ತೆರಿಗೆಯನ್ನು ಪಾವತಿಸಲು ನೀಡಿರುವ ‘ಒನ್‌ಟೈಮ್ ಸೆಟ್ಲ್‌ಮೆಂಟ್’ ಯೋಜನೆಯ ಅವಧಿಯನ್ನು ಆ.31ರ ವರೆಗೆ ವಿಸ್ತರಣೆ ಮಾಡುವಂತೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಮನವಿ ಮಾಡಿದೆ.ಈ ಯೋಜನೆ ಸಾರ್ವಜನಿಕರು, ವ್ಯಾಪಾರ, ಕೈಗಾರಿಕೆ ಮತ್ತು ಸೇವಾ ವಲಯಗಳ ಸದಸ್ಯರು ಬಳಸಿಕೊಳ್ಳಲು ಅನುಕೂಲಕರವಾಗಿದೆ. ಆದರೆ. ಅನೇಕ ಸದಸ್ಯರು ತಮ್ಮ ದಾಖಲೆಗಳನ್ನು ಪರಿಶೀಲಿಸಿ ಅಂತಿಮಗೊಳಿಸುತ್ತಿದ್ದಾರೆ. ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಜು.31ರ ಒಳಗೆ ತೆರಿಗೆ ಪಾವತಿಸಲು ಸಾಧ್ಯವಾಗದ ಕಾರಣ ಅವಧಿ ವಿಸ್ತರಿಸುವಂತೆ ಎಫ್‌ಕೆಸಿಸಿಐ ಕೋರಿದೆ.