ಉಪನಗರ ರೈಲ್ವೆ ರಾಜಾನುಕುಂಟೆ, ಹೀಲಲಿಗೆ ಮಾರ್ಗ ಕಾಮಗಾರಿ ಶುರು

KannadaprabhaNewsNetwork | Published : Jul 31, 2024 2:06 AM

ಸಾರಾಂಶ

ಹೀಲಲಿಗೆ - ರಾಜಾನುಕುಂಟೆ (46.24 ಕಿ.ಮೀ.) ಸಂಪರ್ಕಿಸುವ ಬೆಂಗಳೂರು ಉಪನಗರ ರೈಲ್ವೆ ಯೋಜನೆ (ಬಿಎಸ್‌ಆರ್‌ಪಿ) 4ನೇ ಕಾರಿಡಾರ್‌ ‘ಕನಕ’ ಮಾರ್ಗ ನಿರ್ಮಾಣ ಪೂರ್ವ ಕಾಮಗಾರಿ ಆರಂಭವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೀಲಲಿಗೆ - ರಾಜಾನುಕುಂಟೆ (46.24 ಕಿ.ಮೀ.) ಸಂಪರ್ಕಿಸುವ ಬೆಂಗಳೂರು ಉಪನಗರ ರೈಲ್ವೆ ಯೋಜನೆ (ಬಿಎಸ್‌ಆರ್‌ಪಿ) 4ನೇ ಕಾರಿಡಾರ್‌ ‘ಕನಕ’ ಮಾರ್ಗ ನಿರ್ಮಾಣ ಪೂರ್ವ ಕಾಮಗಾರಿ ಆರಂಭವಾಗಿದೆ.

ಪ್ರಸ್ತುತ ಬೈಯಪ್ಪನಹಳ್ಳಿ - ಚಿಕ್ಕಬಾಣಾವರ ಸಂಪರ್ಕಿಸುವ (ಮಲ್ಲಿಗೆ ಮಾರ್ಗ) ಬಿಎಸ್‌ಆರ್‌ಪಿ ಕಾಮಗಾರಿ ನಡೆಯುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮಾರ್ಗದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಇದರ ಜೊತೆಗೆ ಈಗ ಕನಕ ಮಾರ್ಗದಲ್ಲಿ ಪೂರ್ಣ ಪ್ರಮಾಣದ ಕಾಮಗಾರಿ ನಡೆಸಲು ಸಿದ್ಧತೆ ನಡೆಸಿರುವುದಾಗಿ ಯೋಜನೆ ಅನುಷ್ಠಾನ ಮಾಡುತ್ತಿರುವ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆ-ರೈಡ್‌) ತಿಳಿಸಿದೆ.

ಸದ್ಯ ಕಿರುಸೇತುವೆ, ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಭೂಮಾಪನ ಸೇರಿ ತಾಂತ್ರಿಕ ಕಾಮಗಾರಿಗಳು, ಮರಗಳ ತೆರವು, ಕಟ್ಟಡ, ವಿದ್ಯುತ್‌ ಕಂಬ ಸೇರಿ ಇನ್ನಿತರ ಸ್ಥಳಾಂತರ ಕಾರ್ಯಗಳು ನಡೆಯುತ್ತಿವೆ ಎಂದು ಬಿಎಸ್‌ಆರ್‌ಪಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಜನವರಿಯಲ್ಲೇ ನೈಋತ್ಯ ರೈಲ್ವೆ ಈ ಮಾರ್ಗಕ್ಕೆ (ಅಲೈನ್‌ಮೆಂಟ್‌) ಅನುಮೋದನೆ ನೀಡಿದ್ದು, ಯೋಜನೆಗೆ ಅಗತ್ಯವಿದ್ದ ಭೂಮಿಯನ್ನು ರೈಲ್ವೆ ಇಲಾಖೆ ಏಪ್ರಿಲ್‌ನಲ್ಲಿ ಹಸ್ತಾಂತರ ಮಾಡಿದೆ. ಅಲ್ಲದೆ, ₹1040.51 ಕೋಟಿ ಮೊತ್ತದ ಈ ಯೋಜನೆ ಕಾಮಗಾರಿಯನ್ನು ಎಲ್‌ ಆ್ಯಂಡ್‌ ಟಿ ಕಂಪನಿ ಪ್ರಾರಂಭಿಸಿದೆ. 30 ತಿಂಗಳಲ್ಲಿ ಕಾಮಗಾರಿ ಮುಗಿಯಬೇಕಿದೆ.

ಈ ಮಾರ್ಗದ ಖಾಸಗೀ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಮುಂದುವರಿದಿದೆ. ರಾಜಾನುಕುಂಟೆಯಿಂದ ಚನ್ನಸಂದ್ರವರೆಗೆ 4.44ಎಕರೆ, ಚನ್ನಸಂದ್ರದಿಂದ ಯಲಹಂಕದವರೆಗೆ 1.92 ಎಕರೆ, ಹೀಲಲಿಗೆ-ಸಿಲ್ಕ್‌ ಬೋರ್ಡ್‌ವರೆಗೆ 6.5 ಎಕರೆ ಹಾಗೂ ಸಿಲ್ಕ್‌ ಫಾರ್ಮ್‌ನಿಂದ ಬೆಳ್ಳಂದೂರುವರೆಗೆ ಅಗತ್ಯವಿರುವ ಸರ್ಕಾರಿ, ಖಾಸಗಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಕೆಐಎಡಿಬಿಗೆ ಕೆ-ರೈಡ್‌ಗೆ ಪ್ರಸ್ತಾವನೆ ಸಲ್ಲಿಸಿದೆ.

ಕೆ-ರೈಡ್ ಸದ್ಯ ಹೀಲಲಿಗೆ-ಬೆನ್ನಿಗಾನಹಳ್ಳಿ (22.5 ಕಿ.ಮೀ.) ಮಾರ್ಗದ ಕಾಮಗಾರಿಯನ್ನು 2026ರ ಜೂನ್‌ಗೆ ಮುಗಿಸುವ ಗುರಿ ಹೊಂದಿದೆ. ಅದೇ ವರ್ಷ ಡಿಸೆಂಬರ್‌ಗೆ ಬೆನ್ನಿಗಾನಹಳ್ಳಿ-ರಾಜಾನುಕುಂಟೆ (24.6 ಕಿ.ಮೀ.) ಯೋಜನೆಯನ್ನು ಪೂರ್ಣಗೊಳಿಸುವ ಉದ್ದೇಶ ಇಟ್ಟುಕೊಂಡಿದೆ.

Share this article