ನರೇಗಾ ಯೋಜನೆಯಡಿ ಗಿಡ ನೆಡದೆ 2 ಲಕ್ಷ ರು. ಭ್ರಷ್ಟಾಚಾರ: ಆರೋಪ

KannadaprabhaNewsNetwork |  
Published : Jun 16, 2025, 05:17 AM IST
15ಕೆಎಂಎನ್ ಡಿ18,19 | Kannada Prabha

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನ ಊಗಿನಹಳ್ಳಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಯಾವುದೇ ಗಿಡಗಳನ್ನು ನೆಡದೆ ನಕಲಿ ದಾಖಲೆ ಸೃಷ್ಟಿಸಿ ಲಕ್ಷ್ಮೀಪುರ ಗ್ರಾಮ ಪಂಚಾಯ್ತಿಯಲ್ಲಿ 2 ಲಕ್ಷ ರು. ಭ್ರಷ್ಟಾಚಾರ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಕೆ.ಆರ್.ಪೇಟೆ ತಾಲೂಕಿನ ಊಗಿನಹಳ್ಳಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಯಾವುದೇ ಗಿಡಗಳನ್ನು ನೆಡದೆ ನಕಲಿ ದಾಖಲೆ ಸೃಷ್ಟಿಸಿ ಲಕ್ಷ್ಮೀಪುರ ಗ್ರಾಮ ಪಂಚಾಯ್ತಿಯಲ್ಲಿ 2 ಲಕ್ಷ ರು. ಭ್ರಷ್ಟಾಚಾರ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಲಕ್ಷ್ಮೀಪುರ ಗ್ರಾಪಂ ಕಚೇರಿ ಎದುರು ಗ್ರಾಮಸ್ಥರು ಆಗಮಿಸಿ ಪಿಡಿಒ ಅವರು ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಸ್ಥಳಕ್ಕೆ ಮೇಲಾಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

ನರೇಗಾ ಯೋಜನೆಯಡಿ 2024-25 ಸಾಲಿನಲ್ಲಿ ಜಿಪಂ, ತಾಪಂ ಸಹಯೋಗದಲ್ಲಿ ಕೂಲಿ ಕಾರ್ಮಿಕರಿಂದ ಮಾನವ ಕೆಲಸದಿಂದ 5 ಲಕ್ಷ ರು. ವೆಚ್ಚದಲ್ಲಿ ಹೆಬ್ಬೇವು, ಮಹಾಗನಿ, ನೇರಳೆಯ 300 ಗಿಡಗಳನ್ನು ಊಗಿನಹಳ್ಳಿ ಕ್ರಾಸ್‌ನಿಂದ ಊಗಿನಹಳ್ಳಿ ಶಾಲೆವರೆಗೆ ನೆಡಬೇಕಿತ್ತು. ದಿನವೊಂದಕ್ಕೆ 349 ರು. ಕೂಲಿ ನೀಡಿ 1412 ಮಾನವ ದಿನಗಳಲ್ಲಿ ಕೆಲಸ ಮಾಡಬೇಕಿತ್ತು. ಆದರೆ, ಯಾವುದೇ ಒಂದು ಗಿಡವನ್ನು ನೆಡದೆ ತಾವು ಗಿಡ ನೆಟ್ಟಿರುವುದಾಗಿ ಬೋಗಸ್ ಮಾಹಿತಿ ನೀಡಿ ಮೊದಲು ಕಂತಿನಲ್ಲಿ 2,04,609 ರು.ಗಳನ್ನು ಗ್ರಾಪಂ ಅಧಿಕಾರಿಗಳ ಶಿಫಾರಿಸ್ಸಿನಲ್ಲಿ ಹಲವು ಪ್ರಭಾವಿಗಳು ಹಣ ಪಡೆದಿದ್ದು, ಕೆಲಸ ಮಾಡದವರ ಜಾಬ್‌ ಕಾರ್ಡುದಾರ ಹೆಸರಿನಲ್ಲಿ ವ್ಯವಸ್ಥಿತವಾಗಿ ಹಣ ಸಂದಾಯವಾಗಿದೆ ಎಂದು ದೂರಿದ್ದಾರೆ.

ಕಳೆದೆರಡು ದಿನಗಳ ಹಿಂದೆ ಕೆಲವರು ಗಿಡ ನೆಡುತ್ತಿರುವ, ಗುಂಡಿ ತೆಗೆಯುತ್ತಿರುವ ಮಾದರಿಯಲ್ಲಿ ಜಿಪಿಆರ್‌ಎಸ್ ಫೋಟೊ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಅಲ್ಲದೇ, ಉದ್ಯೋಗ ಖಾತ್ರಿ ಯೋಜನೆಯಡಿ ಗಿಡ ನೆಟ್ಟಿರುವ ಕಾಮಗಾರಿ ಮಾಡಿರುವ ನಾಮಫಲಕ ಅಳವಡಿಸಲು ಮುಂದಾಗಿದ್ದಾರೆ.

ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದಾಗ ವ್ಯಕ್ತಿಗಳು ಓಡಿ ಹೋಗಿದ್ದಾರೆ. ಪರಿಸರ ಪ್ರೇಮಿ ವೆಂಕಟೇಶ್‌ ತಮ್ಮ ಸ್ನೇಹಿತರ ಸಹಕಾರದಲ್ಲಿ ಪ್ರತಿ ವರ್ಷ ವಿಶ್ವ ಪರಿಸರ ದಿನದಂದು ವಿವಿಧೆಡೆ ಗಿಡ ನೆಡುವ ಕಾಯಕ ಮಾಡುತ್ತಿದ್ದಾರೆ. ಕಳೆದ ವರ್ಷ ಕಾರೆಮೆಳೆ ಸಿಂಗಮ್ಮ ಗುಡಿ ಮೈದಾನದಲ್ಲಿ ಮಾವು, ಹಲಸು, ಬೇವು, ಅರಳಿ, ಹೊನ್ನೆ, ಬುಗರಿ, ನೇರಳೆ, ಕಾಡು ಬಾದಾಮಿಯಂತಹ ವಿವಿಧ ರೀತಿಯ 100 ಗಿಡ ನೆಡಿಸಿದ್ದಾರೆ.

ಇದೇ ಗಿಡಗಳನ್ನು ನರೇಗಾ ಯೋಜನೆಯಲ್ಲಿ ನೆಟ್ಟಿರುವುದಾಗಿ ಲಕ್ಷ್ಮೀಪುರ ಗ್ರಾಪಂಗೆ ದಾಖಲೆ ನೀಡಿ ಅಧಿಕಾರಿಗಳು, ಜನಪ್ರತಿನಿಧಿಗಳ ಸಹಕಾರದಲ್ಲಿ ಜಾಬ್‌ ಕಾರ್ಡ್‌ದಾರರ ಮೂಲಕ ಯಾವುದೇ ಗಿಡ ನೆಡದೆ ಸುಳ್ಳು ಮಾಹಿತಿ ನೀಡಿ ಭ್ರಷ್ಟಾಚಾರ ಮಾಡಲಾಗಿದೆ.

ಈ ಬಗ್ಗೆ ಸಮಗ್ರ ತನಿಖೆ ಮಾಡಿ ಜಾಬ್‌ ಕಾರ್ಡ್‌ದಾರರ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಗ್ರಾಪಂ ಪಿಡಿಒ, ಗ್ರಾಪಂ ಸದಸ್ಯರಿಗೆ ತಿಳಿಯದೆ ಈ ಕೃತ್ಯ ನಡೆಯಲು ಸಾಧ್ಯವಿಲ್ಲ. ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದುಪಟ್ಟು ಹಿಡಿದರು.

ಈ ಬಗ್ಗೆ ಪಿಡಿಒ ಸುರೇಶ್‌ಬಾಬು ಮಾಹಿತಿ ನೀಡಿ, ದಾಖಲೆಗಳು ಎಂಜಿನಿಯರ್ ಬಳಿ ಇದೆ. ತಾಲೂಕು ಅಧಿಕಾರಿಗಳು ಆಗಮಿಸಿ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಪರಿಸರ ಪ್ರೇಮಿ ವೆಂಕಟೇಶ್, ದಿಲೀಪ್, ಯೋಗೇಶ್, ರವಿ, ಮೋಹನ್, ಸುರೇಶ್, ಮಹದೇವು, ಶಿವರಾಜು, ಮಹೇಶ್, ಹೇಮಂತ್, ಉಮೇಶ್, ಅನಿಲ್‌ಕುಮಾರ್ ಮತ್ತಿತರರಿದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ