ವೃದ್ಧಾಶ್ರಮ ಸಂಸ್ಕೃತಿಗೆ ಕಡಿವಾಣ ಹಾಕಬೇಕು

KannadaprabhaNewsNetwork |  
Published : Jun 16, 2025, 05:05 AM ISTUpdated : Jun 16, 2025, 05:06 AM IST
೧೫ಕೆಎಲ್‌ಆರ್-೩ಕೋಲಾರದ ಅಂತರಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ‘ವಿಶ್ವ ಹಿರಿಯರ ಮೇಲಿನ ದೌರ್ಜನ್ಯ ಜಾಗೃತಿ ದಿನ’ ಕಾರ್ಯಕ್ರಮಕ್ಕೆ  ಹಿರಿಯ ನ್ಯಾಯಾಧೀಶರಾದ ಆರ್.ನಟೇಶ್ ಚಾಲನೆ ನೀಡಿದರು. | Kannada Prabha

ಸಾರಾಂಶ

ಮಕ್ಕಳಿಂದ ವಂಚನೆ, ದೌರ್ಜನ್ಯಕ್ಕೆ ಒಳಗಾಗುವ ಹಿರಿಯ ನಾಗರೀಕರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯವಾಣಿ ೧೫೧೦೦ ಬಳಸಿಕೊಂಡು ದೂರು ನೀಡುವಂತೆ ಸಲಹೆ ನೀಡಿದ ಅವರು, ನಿಮ್ಮ ಹಕ್ಕುಗಳನ್ನು ಪಡೆದಕೊಳ್ಳಲು ಸರ್ಕಾರ ಜಾರಿಗೆ ತಂದಿರುವ ಹಿರಿಯ ನಾಗರೀಕರ ದೌರ್ಜನ್ಯ ತಡೆ ಕಾಯಿದೆ ನೆರವು ಪಡೆಯಿರಿ.

ಕನ್ನಡಪ್ರಭ ವಾರ್ತೆ ಕೋಲಾರಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸುವ ಮೂಲಕ ಹೆಚ್ಚುತ್ತಿರುವ ವೃದ್ದಾಶ್ರಮ ಸಂಸ್ಕೃತಿಗೆ ಕಡಿವಾಣ ಹಾಕಬೇಕು, ಸಂಧ್ಯಾ ಕಾಲದಲ್ಲಿ ಅವರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳು ಸಮರ್ಪಕವಾಗಿ ಒದಗಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶರಾದ ಆರ್.ನಟೇಶ್ ಸಲಹೆ ನೀಡಿದರು.ನಗರದ ಅಂತರಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ವಿಶ್ವ ಹಿರಿಯರ ಮೇಲಿನ ದೌರ್ಜನ್ಯ ಜಾಗೃತಿ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಸಹಾಯವಾಣಿ ಬಳಸಿ

ಮಕ್ಕಳಿಂದ ವಂಚನೆ, ದೌರ್ಜನ್ಯಕ್ಕೆ ಒಳಗಾಗುವ ಹಿರಿಯ ನಾಗರೀಕರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯವಾಣಿ ೧೫೧೦೦ ಬಳಸಿಕೊಂಡು ದೂರು ನೀಡುವಂತೆ ಸಲಹೆ ನೀಡಿದ ಅವರು, ನಿಮ್ಮ ಹಕ್ಕುಗಳನ್ನು ಪಡೆದಕೊಳ್ಳಲು ಸರ್ಕಾರ ಜಾರಿಗೆ ತಂದಿರುವ ಹಿರಿಯ ನಾಗರೀಕರ ದೌರ್ಜನ್ಯ ತಡೆ ಕಾಯಿದೆಯ ಸದುಪಯೋಗ ಪಡೆದುಕೊಳ್ಳಲು ಸಲಹೆ ನೀಡಿದರು.ಮನೆಯಲ್ಲಿ ವೃದ್ಧರು ಎಂದಿಗೂ ಹೊರೆಯಲ್ಲ, ಅವರು ಕುಟುಂಬದ ಕಿರಿಯರಿಗೆ ಮಾರ್ಗದರ್ಶನ ನೀಡುವ ಸಂಪನ್ಮೂಲ ವ್ಯಕ್ತಿಗಳು ಎಂಬುದನ್ನು ಅರಿಯಬೇಕು, ಮಕ್ಕಳಾಗಿದ್ದಾಗ ಅವರು ಮಾಡಿರುವ ಸೇವೆ, ಪೋಷಣೆ ಮರೆಯಬಾರದು, ಯೌವ್ವನದ ಬಿಸಿಯಲ್ಲಿ ಹಿರಿಯರ ಕಡೆಗಣನೆ ಸರಿಯಲ್ಲ. ಅವರ ರಕ್ಷಣೆಗೆ ಈಗ ಕಾನೂನು ಇದೆ ಎಂಬುದನ್ನು ಮಕ್ಕಳು ಅರಿತುಕೊಳ್ಳಬೇಕು. ಹಿರಿಯರ ಅನುಭವ ನಿಮಗೆ ದಾರಿದೀಪವಾಗುತ್ತದೆ, ಅವರನ್ನು ವೃದ್ದಾಶ್ರಮಗಳಿಗೆ ಸೇರಿಸಿ ಮನೆಯಲ್ಲಿ ಮಕ್ಕಳಿಗೆ ತಾತ, ಅಜ್ಜಿಯ ಪ್ರೀತಿ ಇಲ್ಲವಾಗಿಸಬೇಡಿ ಎಂದು ಕಿವಿಮಾತು ಹೇಳಿದರು.

ವೃದ್ಧರಿಗೆ ಸರ್ಕಾರಿ ಸೌಲಭ್ಯ

ಕಾರ್ಯಕ್ರಮದಲ್ಲಿ ಗ್ರೇಡ್-೨ ತಹಸೀಲ್ದಾರ್ ಹಂಸ ಮರಿಯಾ ಮಾತನಾಡಿ, ಹಿರಿಯ ನಾಗರೀಕರಿಗೆ ಸರ್ಕಾರ ತಮ್ಮ ಸಂಧ್ಯಾಕಾಲದಲ್ಲಿ ಹಲವಾರು ಸೌಲಭ್ಯಗಳನ್ನು ನೀಡಿದೆ, ವೃದ್ದಾಪ್ಯವೇತನ, ಸಂಧ್ಯಾ ಸುರಕ್ಷ ವೇತನ, ಉಚಿತ ಆರೋಗ್ಯ ಸೇವೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.ಸಂಪನ್ಮೂಲ ವ್ಯಕ್ತಿ ಹಾಗೂ ವಕೀಲ ಗೋಪಾಲರೆಡ್ಡಿ, ಹಿರಿಯ ನಾಗರೀಕರ ರಕ್ಷಣಾ ಕಾಯಿದೆ-೨೦೦೭ರ ಕುರಿತು ಮಾರ್ಗದರ್ಶನ ನೀಡಿ, ಸರ್ಕಾರ ನಿಮ್ಮ ರಕ್ಷಣೆಗಾಗಿಯೇ ಜಾರಿಗೆ ತಂದಿರುವ ಈ ಕಾಯಿದೆಯ ಸದುಪಯೋಗ ಪಡೆಯಿರಿ ಎಂದರು. ವೃದ್ಧರಿಗೆ ಕಾನೂನು ರಕ್ಷಣೆ

ಹಿರಿಯ ನಾಗರೀಕರ ರಕ್ಷಣೆ, ಆರೈಕೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಮಕ್ಕಳ ವಿರುದ್ದ ಕ್ರಮಕ್ಕೆ ಈ ಕಾಯಿದೆ ಅನುವು ಮಾಡಿಕೊಡುತ್ತದೆ. ನೀವು ನೆಮ್ಮದಿಯಿಂದ ಜೀವನ ನಡೆಸಲು ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಈ ಕಾಯಿದೆಯ ಉದ್ದೇಶವಾಗಿದ್ದು, ಇದರ ಉಪಯೋಗ ಪಡೆಯಿರಿ ನಿಮ್ಮ ಹಕ್ಕು ನಿಮ್ಮದಾಗಿಸಿಕೊಳ್ಳಿ ಎಂದರು.ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್.ಮಂಜುಳಾ ಮಾತನಾಡಿ, ಹಿರಿಯ ನಾಗರೀಕರ ಹಾಗೂ ಅಂಗವಿಕಲ ಕಲ್ಯಾಣ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿ, ವಿಕಲಚೇತನರಿಗೆ ವಿಶೇಷ ಸೌಲಭ್ಯಗಳಿವೆ, ಸಲಕರಣೆಗಳ ನೆರವೂ ಸಿಗಲಿದೆ ಎಂದು ತಿಳಿಸಿದರು.ದೌರ್ಜನ್ಯ ಕಡೆ ಕಾಯ್ದೆ ಅರಿವಿಲ್ಲ

ಹಿರಿಯ ನಾಗರೀಕರ ಪರವಾಗಿ ನಿವೃತ್ತ ಶಿಕ್ಷಕ ಟಿ.ಎಂ.ರಾಮಕೃಷ್ಣೇಗೌಡ, ಹಿರಿಯ ನಾಗರೀಕರು ಕುಟುಂಬ ಹಾಗೂ ಸಮಾಜದ ನಿರ್ಲಕ್ಷ್ಯದಿಂದ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದರು. ಎಷ್ಟೊ ಮಂದಿಗೆ ಈ ದೌರ್ಜನ್ಯ ತಡೆ ಕಾಯಿದೆ ಇದೆ ಎಂಬುದೇ ಗೊತ್ತಿಲ್ಲ ಎಂದರು.ಕಾರ್ಯಕ್ರಮದಲ್ಲಿ ಸ್ವಾಗತಿಸಿದ ಅಂತರಗಂಗಾ ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್.ಶಂಕರ್, ವಿಕಲಚೇತನರು, ಅನಾಥರಿಗೆ ಸಂಸ್ಥೆಯಲ್ಲಿ ಸಿಗುತ್ತಿರುವ ಸೌಲಭ್ಯಗಳ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಈನೆಲ ಈಜಲ ಸಂಸ್ಥೆಯ ವೆಂಕಟಾಚಲಪತಿ ಗಾಯನ ನಡೆಸಿಕೊಟ್ಟು ಜಾಗೃತಿ ಮೂಡಿಸಿದ್ದು, ನೂರಾರು ಮಂದಿ ಹಿರಿಯ ನಾಗರೀಕರು ಹಾಜರಿದ್ದು, ಕಾಯಕ್ರಮದ ಪ್ರಯೋಜನ ಪಡೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ