ಮೈಸೂರು: ಮನುಷ್ಯ ಹಿಂದೆ ನಿಸರ್ಗದ ಮೂಲಕ ದೈವವನ್ನು ಆರಾಧಿಸುತ್ತಿದ್ದ ಆದರೆ ಇಂದು ಆಧುನಿಕತೆಯ ವೈಭವದಿಂದ ಜಗತ್ತು ತುಂಬಾ ಬದಲಾಗಿದೆ ಎಂದು ಸಂಸ್ಕೃತಿ ಚಿಂತಕ ಶಂಕರ್ ದೇವನೂರು ಹೇಳಿದರು.
ಆಧುನಿಕ ಆರ್ಭಟ ಪಾಶ್ಚಾತ್ಯ ಪ್ರಭಾವ ಮೊಬೈಲ್ ಅಂತರ್ಜಾಲ ಹಾವಳಿಯಲ್ಲಿ ಕಳೆದು ಅಳಿದು ನಶಿಸಿ ಹೋಗುತ್ತಿರುವ ಎಷ್ಟೋ ಭಾರತೀಯ ಮೌಲ್ಯಗಳಲ್ಲಿ ಸಂಗೀತ ಮತ್ತು ಸಾಹಿತ್ಯವು ಒಂದು. ಕನ್ನಡ ಸಾಹಿತ್ಯದಲ್ಲಿರುವ ಜೀವನ ಮೌಲ್ಯಗಳು ಈಗಿನ ಪೀಳಿಗೆಗೆ ತಿಳಿಯುತ್ತಿಲ್ಲ ಎಂದರು.
ಬಳಿಕ ವಿದುಷಿ ಶುಭಾ ರಾಘವೇಂದ್ರ ಅವರು ಗಮಕ ಶೈಲಿಯಲ್ಲಿ ಪಂಪ, ರನ್ನ, ಕುಮಾರವ್ಯಾಸ ಭಾರತ, ವಾಲ್ಮೀಕಿ ರಾಮಾಯಣ, ಮಂಕುತಿಮ್ಮನ ಕಗ್ಗ, ಮುದ್ದು ರಾಮನ ಪದ್ಯಗಳು ಹೀಗೆ ವಿಭಿನ್ನ ಸಾಹಿತ್ಯವನ್ನು ಉಣಬಡಿಸಿದರು.ಶಂಕರ ದೇವನೂರು ಅವರು ಗಮಕ ಶೈಲಿಯ ಸಾಲುಗಳಿಗೆ ಅನುಭಾವವನ್ನು ಬೆಸೆದು ಪೋಣಿಸಿ ಮತ್ತೆ ಬಿಡಿಸಿ ಅನುಭಾವದ ಜಾಲವನ್ನು ಸೋತೃಗಳಿಗೆ ತಿಳಿಸಿದರು.
ವಿದುಷಿ ಶುಭಾ ರಾಘವೇಂದ್ರ ಅವರು ಮತ್ತೆ ಕುವೆಂಪು, ಬೇಂದ್ರೆ, ಶಿಶುನಾಳ ಶರೀಫ , ಅಕ್ಕಮಹಾದೇವಿ, ಅಲ್ಲಮ ಪ್ರಭು, ಮುಕ್ತಾಯಕ್ಕ, ಚನ್ನಬಸವಣ್ಣ ಹೀಗೆ ಹಲವು ತತ್ವ ಪದಗಳ ವಚನ ಸಾರದ ಮೂಲಕ ಎಲ್ಲರ ಪ್ರೇಕ್ಷಕರ ಗಮನ ಸೆಳೆದರು. ಇದಕ್ಕೆ ಪ್ರತಿಯಾಗಿ ಶಂಕರ ದೇವನೂರು ಅವರು ತಮ್ಮ ಸೃಜನಶೀಲ ಅಂತಃಕರಣದ ಭಾವದೊಂದಿಗೆ ಬೇರೆತು ಅಲ್ಲಿ ಒಂದು ಕೂಡಲ ಸಂಗಮವನ್ನು ಸೃಷ್ಟಿಸಿದರು. ಒಂದು ಸಮಾಜ ರೂಪುಗೊಳ್ಳೇಬೇಕಾದರೆ ಮೊದಲು ಒಳ್ಳೆ ತಂದೆ, ತಾಯಿ, ಶಿಕ್ಷಕರು, ನಮ್ಮ ಮೌಲ್ಯಗಳ ಅರಿತು ಮಕ್ಕಳಿಗೆ ನೀಡಬೇಕು ಎಂದರು.ಶರಣರು, ಸಂತರು ಜಗತ್ತಿಗೆ ಶಾಂತಿಯನ್ನು ಸಾರಿ ಸಮಾನತೆಯ ಸಮಾಜ ಕಟ್ಟುವ ಕೆಲಸ ಅವರದಾಗಿತ್ತು. ಹಾಗಾಗಿ ಇವತ್ತಿನ ಮಕ್ಕಳಿಗೆ ವಚನ ಮಾರ್ಗ ದರ್ಶನವಾಗಬೇಕು ಎಂದು ಹೇಳಿದರು.
ಪ್ರಕೃತಿ ನಮ್ಮನ್ನೆಲ್ಲ ಪೊರೆಯುವಂತಾದ್ದು. ಆದರೆ ಆಧುನಿಕ ಮಾನವನ ಆರ್ಥಿಕ ಅವಿವೇಕ ತನದಲ್ಲಿ ತನಗೂ ಪರಿಸರಕ್ಕೂ ಇದ್ದ ಕರುಳ ಬಳ್ಳಿ ಸಂಬಂಧವನ್ನ ಕತ್ತರಿಸಿಕೊಂಡು ಅದರ ಶ್ಯಾಮಲತೆಯನ್ನು ಆಳು ಮಾಡುತ್ತಿರುವುದು ದುರಂತ ಎಂದರು.ಅನೇಕ ಪರಿಸರ ಕುರಿತ ಚಿಂತನೆಗಳನ್ನು ಗಾಯನ ಮತ್ತು ವ್ಯಾಖ್ಯಾನದ ಮೂಲಕ ತಿಳಿಸಿದರು.
ಪ್ರಸಾರಾಂಗದ ನಿರ್ದೇಶಕ, ಶಿಬಿರದ ಸಂಚಾಲಕ ಡಾ. ನಂಜಯ್ಯ ಹೊಂಗನೂರು, ಮಾಳವಿಯ ಮಿಷನ್ ಶಿಕ್ಷಕ ತರಬೇತಿ ಕೇಂದ್ರದ ನಿರ್ದೇಶಕಿ ಪ್ರೊ.ಎಚ್. ಜ್ಯೋತಿ, ಸಹಾಯಕ ಪ್ರಾಧ್ಯಾಪಕ ಡಾ.ಎಲ್. ನಂಜುಂಡಸ್ವಾಮಿ, ಶಿಬಿರಾರ್ಥಿಗಳು ಇದ್ದರು.