ಔಷಧ ಖರೀದಿಯಲ್ಲೂ 20% ಕಮಿಷನ್‌ ಹಾವಳಿ: ಬಿವೈವಿ

KannadaprabhaNewsNetwork |  
Published : Feb 26, 2026, 02:00 AM IST
Vijayendra

ಸಾರಾಂಶ

ರಾಜ್ಯದ ಸರ್ಕಾರಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳಲ್ಲಿ ಔಷಧ ಕೊರತೆಯಾಗಲು ಈ ಸರ್ಕಾರ ಮತ್ತು ಸಂಬಂಧಪಟ್ಟ ಸಚಿವರೇ ನೇರ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಪಾದಿಸಿದ್ದಾರೆ.

  ಬೆಂಗಳೂರು :  ರಾಜ್ಯದ ಸರ್ಕಾರಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳಲ್ಲಿ ಔಷಧ ಕೊರತೆಯಾಗಲು ಈ ಸರ್ಕಾರ ಮತ್ತು ಸಂಬಂಧಪಟ್ಟ ಸಚಿವರೇ ನೇರ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಪಾದಿಸಿದ್ದಾರೆ. 

ಮಂಗಳೂರು ಮೂಲದ ವಹಾಬ್‌ ಖಾನ್‌ ಎಂಬ ಪ್ರಭಾವಿ ವ್ಯಕ್ತಿಯು ರಾಜ್ಯದ ಔಷಧ ಖರೀದಿ ವ್ಯವಸ್ಥೆ ನಿಯಂತ್ರಿಸುತ್ತಿದ್ದಾನೆ. ಈ ವ್ಯಕ್ತಿಯ ಪ್ರಭಾವದಿಂದ ಔಷಧ ಖರೀದಿಯಲ್ಲಿ ಅವ್ಯವಹಾರ ನಡೆಯುತ್ತಿದೆ. ಔಷಧ ಖರೀದಿಯಲ್ಲೂ ತುಂಡು ಗುತ್ತಿಗೆ ನೀಡಿದ್ದಾರೆ. ಶೇ.15-20ರಷ್ಟು ಕಮಿಷನ್‌ ಹಾವಳಿಯಿಂದ ಟೆಂಡರ್‌ ಕರೆದರೂ ಯಾವುದೇ ಕಂಪನಿಗಳೂ ಭಾಗಿಯಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕೃತಕ ಔಷಧ ಅಭಾವಕ್ಕೆ ಅವಕಾಶ ನೀಡಬಾರದು. ಒಬ್ಬ ಖಾಸಗಿ ವ್ಯಕ್ತಿಗೇ ಔಷಧ ಟೆಂಡರ್ ಸಿಗುವ ಪರಿಸ್ಥಿತಿ ಯಾಕಾಗುತ್ತಿದೆ? ಇದರಲ್ಲಿ ಏನು ಷಡ್ಯಂತ್ರ, ಪಿತೂರಿ, ಅವ್ಯವಹಾರ ನಡೆದಿದೆ? ಮಾರುಕಟ್ಟೆ ದರಕ್ಕಿಂತ 3 ಪಟ್ಟು ಹೆಚ್ಚು ದರದಲ್ಲಿ ಖರೀದಿ ಮಾಡುವುದು ಯಾಕೆ? ಇಷ್ಟೊಂದು ಔಷಧಿ ಕೊರತೆಗೆ ಯಾರು ಕಾರಣ ಎಂದು ಸಚಿವರು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.

108 ಆ್ಯಂಬುಲೆನ್ಸ್ ಸಿಬ್ಬಂದಿ ಮತ್ತು ವೈದ್ಯರು ಬೀದಿಗಿಳಿದು ಹೋರಾಡುವ ಪರಿಸ್ಥಿತಿಯನ್ನು ಸರ್ಕಾರ ತಂದಿಟ್ಟಿದೆ. ಕಾಂಗ್ರೆಸ್‌ನವರು ಸಾವಿರ ದಿನಗಳ ಸಾಧನಾ ಸಮಾವೇಶ ಮಾಡುತ್ತಾರೆ. ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ ಎಂದು ಟೀಕಿಸಿದರು. ಇವರ ಬೇಜವಾಬ್ದಾರಿಯಿಂದ ರಾಜ್ಯದ ಆರೋಗ್ಯ ಇಲಾಖೆಯೇ ಐಸಿಯುನಲ್ಲಿದೆ. ಔಷಧ ಕೊರತೆ ಕಾಡುತ್ತಿದೆ ಎಂದು ಹರಿಹಾಯ್ದರು.ಸರ್ಕಾರದ ಬೇಜವಾಬ್ದಾರಿ ವರ್ತನೆಯಿಂದ ರಾಜ್ಯದ ಆರೋಗ್ಯ ಇಲಾಖೆಯ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಕಾಡುತ್ತಿದೆ.  

ಜನೌಷಧ ಕೇಂದ್ರಗಳನ್ನು ಮುಚ್ಚಿ ಹಾಕುವ ಷಡ್ಯಂತ್ರ

ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಸಹಿಸಲಾಗದೇ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿದ್ದ ಜನೌಷಧ ಕೇಂದ್ರಗಳನ್ನು ಮುಚ್ಚಿ ಹಾಕುವ ಷಡ್ಯಂತ್ರ ಮಾಡಿದ್ದೇ ಇವರ ಘನಂದಾರಿ ಕೆಲಸ. ಬಡವರೇ ಅತಿ ಹೆಚ್ಚು ಸಂಖ್ಯೆಯಲ್ಲಿ ಹೋಗುವ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಸಿಗದೇ ಕಳೆದೆರಡು ತಿಂಗಳಿನಿಂದ ಬಡವರು ಪರದಾಡುತ್ತಿದ್ದಾರೆ. ಖಾಸಗಿ ಫಾರ್ಮಸಿಯಿಂದ ಔಷಧ ಖರೀದಿಸಲು ಸರ್ಕಾರಿ ವೈದ್ಯರೇ ತಿಳಿಸುವಂತಾಗಿದೆ ಎಂದು ಆಕ್ಷೇಪಿಸಿದರು.ಸಿಟಿ ಸ್ಕ್ಯಾನ್, ಎಂಆರ್‌ಐ ಸೇವೆ ನೀಡುವ ಸಂಸ್ಥೆಗೆ 143 ಕೋಟಿ ರು.ಗಳನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಇದರಿಂದ ಬಡವರು ಸಿಟಿ ಸ್ಕ್ಯಾನ್, ಎಂಆರ್‌ಐ ಸೇವೆ ಇಲ್ಲದೇ ಪರದಾಡಬೇಕಾಗಿದೆ. ಗರ್ಭಿಣಿಯರಿಗೂ ಅನಾನುಕೂಲ ಆಗುತ್ತಿದೆ. ವೈದ್ಯರು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದರೆ ಈ ರಾಜ್ಯ ಸರ್ಕಾರಕ್ಕೆ ಮಾನ- ಮರ್ಯಾದೆ ಇದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.ರಾಜ್ಯ ಸರ್ಕಾರಕ್ಕೆ ಸುಳ್ಳೇ ಮನೆ ದೇವರು:

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸುಳ್ಳಾಟ-ಕಳ್ಳಾಟ ನಿಲ್ಲಿಸಿ ನಾಡಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. 

ಷಡ್ಯಂತ್ರ-ಕುತಂತ್ರ ಮಾಡುತ್ತಿದೆ

ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಸುಳ್ಳು ಹೇಳುವುದು ಬಿಟ್ಟರೆ ಬೇರೇನೂ ಮಾಡಲು ಸಾಧ್ಯವಿಲ್ಲ. ಈ ಸರ್ಕಾರದ ಮನೆ ದೇವರೇ ಸುಳ್ಳು. ಏನೇ ಸಮಸ್ಯೆಗಳು ಎದುರಾದರೂ ಹಿಂದಿನ ಬಿಜೆಪಿ ಸರ್ಕಾರವನ್ನು ದೂರುತ್ತಾರೆ. ಕಳೆದ ಮೂರು ವರ್ಷಗಳಿಂದ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಷಡ್ಯಂತ್ರ-ಕುತಂತ್ರ ಮಾಡುತ್ತಿದೆ ಎಂದು ಕಿಡಿಕಾರಿದರು.

ಸಿಎಂ ಮತ್ತು ಡಿಸಿಎಂ ಸಾವಿರ ದಿನಗಳ ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ಇದು ನುಡಿದಂತೆ ನಡೆಯುವ, ಬಡವರ ಪರ ಸರ್ಕಾರವಲ್ಲ. ದಲ್ಲಾಳಿಗಳಿಗೋಸ್ಕರ ಇರುವ ಸರ್ಕಾರ. ದಲ್ಲಾಳಿಗಳ ಸಾಕುವ ಸರ್ಕಾರ. ಈ ಸರ್ಕಾರಕ್ಕೆ ಮಾನ-ಮರ್ಯಾದೆ ಇಲ್ಲ ಎಂದು ಹರಿಹಾಯ್ದರು.-ಕೋಟ್‌-ಖಾಲಿ ಹುದ್ದೆಗಳ ಭರ್ತಿಮಾಡದಿದ್ರೆ ಹೋರಾಟಮುಖ್ಯಮಂತ್ರಿ ಸಿದ್ದರಾಮಯ್ಯ ವಾಸ್ತವಿಕ ಸತ್ಯವನ್ನು ಬಿಚ್ಚಿಟ್ಟು ರಾಜ್ಯದ ಜನರ ಕ್ಷಮೆ ಕೇಳಬೇಕು. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಖಾಲಿ ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಇಲ್ಲವಾದರೆ, ಬಿಜೆಪಿ ಹೋರಾಟಕ್ಕೆ ಇಳಿಯಲಿದೆ.- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮಹಿಳಾ ಮೀಸಲಿಂದ ರಾಜಕೀಯ ಚಿತ್ರಣವೇ ಬದಲು : ಕುಮಾರಸ್ವಾಮಿ
ಬೀದಿಗಳಲ್ಲಿ ಇಲಿಗಳ ಕಾಟ : ಆರೋಗ್ಯ ಸಮಸ್ಯೆ ಭೀತಿ