ದೊಡ್ಡಬಳ್ಳಾಪುರ: ಶ್ರಮಿಕ ವರ್ಗದವರು ಹಾಗೂ ಅವರ ಅವಲಂಬಿತರಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ಒದಗಿಸುವಲ್ಲಿ ಇಎಸ್ಐಸಿ ಆಸ್ಪತ್ರೆ ವರದಾನವಾಗಲಿದೆ. ಎಲ್ಲಾ ಕಾರ್ಮಿಕರು ವೈದ್ಯಕೀಯ ಸೇವೆಯ ಸದುಪಯೋಗ ಪಡೆಯಬೇಕು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವೀಯ ಹೇಳಿದರು.
ಕೇಂದ್ರ ಸರ್ಕಾರ ಇಎಸ್‌ಐಸಿ ಆಸ್ಪತ್ರೆ ಮೂಲಕ ಕಾರ್ಮಿಕರಿಗೆ ಆರ್ಥಿಕ ಹೊರೆ ತಗ್ಗಿಸಿ ಗುಣಮಟ್ಟದ ಉಚಿತ ಆರೋಗ್ಯ ಸೇವೆ ಹಾಗೂ ಹೊಸ ಕಾರ್ಮಿಕ ಸಂಹಿತೆಯಡಿ ಲಿಂಗ ತಾರತಮ್ಯವಿಲ್ಲದೇ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿದ್ದೇವೆ ಎಂದು ತಿಳಿಸಿದರು.
20 ಇಎಸ್ಐಸಿ ಮೆಡಿಕಲ್ ಕಾಲೇಜು ಸ್ಥಾಪನೆ:ದೇಶಾದ್ಯಂತ 20 ಇಎಸ್‌ಐಸಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಕಾರ್ಮಿಕರ ಕುಟುಂಬಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಚಿಕಿತ್ಸೆಯ ಭರವಸೆ ನೀಡಲಾಗಿದೆ. ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಮಿಕರ ಮಕ್ಕಳಿಗಾಗಿ ಮೀಸಲಾತಿಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕಾರ್ಮಿಕರ ಮಕ್ಕಳಿಗೆ 702 ವೈದ್ಯಕೀಯ ಸೀಟು ಮೀಸಲು:
ದೇಶಾದ್ಯಂತ ಇರುವ 15 ಕೋಟಿ ಕಾರ್ಮಿಕರು ಮತ್ತು ಅವರ ಕುಟುಂಬದವರಿಗೆ ಗುಣಮಟ್ಟದ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ದೇಶದ ಇಎಸ್ಐಸಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಸ್ತುತ 1,550 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅದರಲ್ಲಿ ವಿಶೇಷವಾಗಿ ಕಾರ್ಮಿಕರ ಮಕ್ಕಳಿಗಾಗಿ 702 ಸೀಟುಗಳನ್ನು ಮೀಸಲಿಡಲಾಗಿದೆ. ಮುಂಬರುವ ವರ್ಷದಲ್ಲಿ ಕೇಂದ್ರ ಸರ್ಕಾರದಿಂದ ನಿರ್ವಹಿಸಲ್ಪಡುವ ಇಂತಹ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತದ ಸಂಸದ ಡಾ. ಕೆ.ಸುಧಾಕರ್ ಮಾತನಾಡಿ, ಇಎಸ್ಐಸಿ ಆಸ್ಪತ್ರೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ಉಚಿತ ಆರೋಗ್ಯ ಸೇವೆ ಒದಗಿಸುತ್ತಿದೆ. ದೊಡ್ಡಬಳ್ಳಾಪುರದ ಇಎಸ್ಐಸಿ ಆಸ್ಪತ್ರೆಯಲ್ಲಿ ಕಾರ್ಮಿಕರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಲಿದೆ. ಈ ಭಾಗದಲ್ಲಿ 5 ಲಕ್ಷ ಕಾರ್ಮಿಕರಿದ್ದು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಜಿಲ್ಲೆಯ ಕಾರ್ಮಿಕರು ವೈದ್ಯಕೀಯ ಸೇವೆ ಪಡೆಯಲು ಸಹಕಾರಿಯಾಗಲಿದೆ ಎಂದರು.
ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಮಾತನಾಡಿ, ಜಿಲ್ಲೆಯಲ್ಲಿ ಕಾರ್ಮಿಕರ ಬಹುದಿನಗಳ ಕನಸು ಇಂದು ನನಸಾಗುತ್ತಿದೆ. ಇಲ್ಲಿ ನೂರಾರು ಕಾರ್ಖಾನೆಗಳು, ಕಂಪನಿಗಳು ಸ್ಥಾಪನೆಯಾಗಿದ್ದು, ಅವುಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರಿಗೆ ಇಎಸ್ಐಸಿ ಆಸ್ಪತ್ರೆ ವೈದ್ಯಕೀಯ ಸೇವೆಗೆ ಅನುಕೂಲವಾಗಲಿದೆ ಎಂದರು.
ಇದೇ ವೇಳೆ ವರ್ಚುವಲ್ ಮೂಲಕ ಬಳ್ಳಾರಿಯಲ್ಲಿ ನಿರ್ಮಾಣಗೊಳ್ಳಲಿರುವ 100 ಹಾಸಿಗೆಗಳ ಇಎಸ್‌ಐಸಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಇಎಸ್‌ಐಸಿ ಯೋಜನೆಯಡಿ ಅವಲಂಭಿತ ಭತ್ಯೆ, ಶಾಶ್ವತ ಅಂಗವೈಕಲ್ಯ ಭತ್ಯೆ, ಮಾತೃತ್ವ ಭತ್ಯೆಯ ಫಲಾನುಭವಿಗಳಿಗೆ ನಗದು ಸೌಲಭ್ಯದ ಚೆಕ್ ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಆಯುಕ್ತ ಡಾ.ಆರ್ ಶ್ರೀನಿವಾಸ್, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರೇಮ್ ಕುಮಾರ್, ಇಎಸ್ಐಸಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.3ಕೆಡಿಬಿಪಿ1-
ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲಾಗಿರುವ 100 ಹಾಸಿಗೆ ಸಾಮರ್ಥ್ಯದ ಇಎಸ್‌ಐಸಿ ಆಸ್ಪತ್ರೆಯನ್ನು ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಉದ್ಘಾಟಿಸಿದರು.--
3ಕೆಡಿಬಿಪಿ2- ದೊಡ್ಡಬಳ್ಳಾಪುರದಲ್ಲಿ ನಡೆದ ಇಎಸ್‌ಐಸಿ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು.--
3ಕೆಡಿಬಿಪಿ3- ದೊಡ್ಡಬಳ್ಳಾಪುರದಲ್ಲಿ ನಿರ್ಮಾಣಗೊಂಡಿರುವ ಇಎಸ್‌ಐಸಿ ಆಸ್ಪತ್ರೆ ಮಾದರಿಯನ್ನು ವೀಕ್ಷಿಸುತ್ತಿರುವ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯಾ, ಶೋಭಾ ಕರಂದ್ಲಾಜೆ ಮತ್ತಿತರರು.--
3ಕೆಡಿಬಿಪಿ4- ಬಳ್ಳಾರಿಯಲ್ಲಿ ನಿರ್ಮಿಸಲಾಗುವ ಇಎಸ್‌ಐಸಿ ಆಸ್ಪತ್ರೆಗೆ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯಾ, ದೊಡ್ಡಬಳ್ಳಾಪುರದಲ್ಲಿ ವರ್ಚುವಲ್ ಮೂಲಕ ಶಿಲಾನ್ಯಾಸ ನೆರವೇರಿಸಿದರು.