2024 ಕಾಫಿನಾಡಿಗೆ ಬ್ಯಾಡ್‌ ಇಯರ್‌.

KannadaprabhaNewsNetwork | Published : Dec 31, 2024 1:01 AM

ಸಾರಾಂಶ

ಚಿಕ್ಕಮಗಳೂರು, ಹೇಗಿತ್ತು ಕಳೆದ ವರ್ಷ ? ವರ್ಷದ ಆರಂಭದಲ್ಲಿ ಹೆಚ್ಚಿನ ಮಂದಿ ಕೇಳುವ ಪ್ರಶ್ನೆ ಇದು. ಆದರೆ, ಜಿಲ್ಲೆಯ ಸಮಗ್ರ ಚಿತ್ರಣದ ಬಗ್ಗೆ ಕೇಳುವ ಪ್ರಶ್ನೆಗೆ 2024ರ ಚಿಕ್ಕಮಗಳೂರು ಜಿಲ್ಲೆಯ ಪಾಲಿಗೆ ಬ್ಯಾಡ್‌ ಇಯರ್‌.

ವರ್ಷವಿಡಿ ಮಳೆ, ಬೆಳೆಗಳಿಗೆ ಹಾನಿ । ಮಲೆನಾಡಿನಲ್ಲಿ ಕಾಡಾನೆಗಳ ಉಪಟಳ । ಕಾಡಾನೆ ತುಳಿತಕ್ಕೆ ಕೆಲವು ಮಂದಿ ಬಲ, ಹಿನ್ನೋಟ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಹೇಗಿತ್ತು ಕಳೆದ ವರ್ಷ ? ವರ್ಷದ ಆರಂಭದಲ್ಲಿ ಹೆಚ್ಚಿನ ಮಂದಿ ಕೇಳುವ ಪ್ರಶ್ನೆ ಇದು. ಆದರೆ, ಜಿಲ್ಲೆಯ ಸಮಗ್ರ ಚಿತ್ರಣದ ಬಗ್ಗೆ ಕೇಳುವ ಪ್ರಶ್ನೆಗೆ 2024ರ ಚಿಕ್ಕಮಗಳೂರು ಜಿಲ್ಲೆಯ ಪಾಲಿಗೆ ಬ್ಯಾಡ್‌ ಇಯರ್‌.

ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆ ಹಲವು ಸಮಸ್ಯೆಗಳಿಂದ ತೊಳಲಾಡುತ್ತಿದೆ. ವರ್ಷದಿಂದ ವರ್ಷಕ್ಕೆ ಹೊಸ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ಜಿಲ್ಲೆಗೆ 2024ರ ವರ್ಷ ಮಳೆ ವರ್ಷ, ಜನವರಿಯಿಂದ ಡಿಸೆಂಬರ್‌ 27ರವರೆಗೆ ಜಿಲ್ಲೆಯ ಸರಾಸರಿ ವಾಡಿಕೆ ಮಳೆ 1831.1 ಮಿ.ಮೀ., ಬಿದ್ದ ಮಳೆ 2250.0 ಮಿ.ಮೀ. ಅಂದರೆ, ಶೇ. 23 ರಷ್ಟು ಹೆಚ್ಚುವರಿ ಮಳೆಯಾಗಿದೆ. ಇದರಿಂದ ರೈತರ ಬೆಳೆ ಅದರಲ್ಲೂ ಕಾಫಿ ಬೆಳೆ ಮೇಲೂ ದುಷ್ಪರಿಣಾಮ ಬೀರಿತು. ಸತತ ಮಳೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿತಂಡೊಡ್ಡಿತು.

ಇನ್ನೊಂದೆಡೆ ಮಲೆನಾಡಿನಲ್ಲಿ ಕಾಡಾನೆಗಳ ಉಟಪಳ ಹೆಚ್ಚಾಗಿತ್ತು. ಸಕಲೇಶಪುರ ಹಾಗೂ ಬೇಲೂರಿನಿಂದ ಆನೆಗಳು ತಂಡೋಪವಾಗಿ ಬಂದು ಬೆಳೆ ಹಾನಿ ಮಾಡಿ ಹೋಗಿವೆ. ಒಂಟಿ ಆನೆ ಜನರನ್ನು ಬಲಿ ಪಡೆದಿವೆ. ಕಾಫಿ ನಾಡು ಆನೆಗಳ ಬೀಡಾಗಿದೆ. ಇನ್ನು ರಾಜಕೀಯವಾಗಿಯೂ ಮಹತ್ತರ ಬದಲಾವಣೆ ಇರಲಿಲ್ಲ. ಸಿ.ಟಿ. ರವಿ ಅವರಿಗೆ ವಿಧಾನಪರಿಷತ್‌ ಸದಸ್ಯರಾಗುವ ಯೋಗ. ಒಟ್ಟಾರೆ ಕಾಫಿ ನಾಡಿಗೆ 2024 ಬ್ಯಾಡ್‌ ಇಯರ್‌.

ಜನವರಿ: 4- ಶ್ರೀರಾಮಮಂದಿರ ಕರಸೇವಕ ಹುಬ್ಬಳ್ಳಿಯ ಶ್ರೀಕಾಂತ್ ಪೂಜಾರಿ ಬಂಧನದ ಹಿನ್ನಲೆಯಲ್ಲಿ ನಾನು ಕರಸೇವಕ ನನ್ನನ್ನು ಬಂಧಿಸಿ ಎಂದು ಮಾಜಿ ಸಚಿವ ಸಿ.ಟಿ.ರವಿ ಚಿಕ್ಕಮಗಳೂರು ನಗರ ಠಾಣೆ ಮುಂಭಾಗ ಏಕಾಂಗಿಯಾಗಿ ಪ್ರತಿಭಟಿಸಿದರು. 13- ಚಿಕ್ಕಮಗಳೂರು ತಾಲೂಕು ಖಾಂಡ್ಯ ಹೋಬಳಿ ಮಾಗಲು ಗ್ರಾಮದ ರೌಡಿ ಶೀಟರ್‌ ಪೂರ್ಣೇಶ್ ಚಿಕಿತ್ಸೆ ವೇಳೆ ಆಸ್ಪತ್ರೆಯಿಂದ ಪರಾರಿ. 22 - ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶ್ರೀ ರಾಮನ ಭಾವಚಿತ್ರವಿರಿಸಿ, ಹೋಮ ಮಾಡುವ ಮಾಡಿ ಪ್ರತಿಭಟನೆ, ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿ ಬಿಡುಗಡೆ ಗೊಳಿಸಿದರು. 29 - ಬೀಟಮ್ಮ ಆ್ಯಂಡ್‌ ಗ್ಯಾಂಗ್‌ ಜಿಲ್ಲಾ ಕೇಂದ್ರದ ಸಮೀಪದಲ್ಲಿ ಓಡಾಟದಿಂದ ಆತಂಕದ ವಾತಾವರಣ ನಿರ್ಮಾಣ. ಕೆಲವು ಶಾಲೆ ಮತ್ತು ಕಾಲೇಜು ಗಳಿಗೆ ರಜೆ ನೀಡಲಾಗಿತ್ತು.ಫೆಬ್ರವರಿ: 8- ಜಿಲ್ಲೆಯ 7 ಜನರಲ್ಲಿ ಮಂಗನ ಕಾಯಿಲೆ ಪತ್ತೆ. ಶೃಂಗೇರಿ ತಾಲೂಕಿನ ಧರೆಕೊಪ್ಪದಲ್ಲಿ 79 ವರ್ಷ ವಯಸ್ಸಿನ ವ್ಯಕ್ತಿ ಬಲಿ. ಹಲವು ವರ್ಷಗಳ ಬಳಿಕ ಮೊದಲ ಸಾವು. 17- ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮೂಡಿಗೆರೆ ತಾಲೂಕು ಅಂಗಡಿ ಗ್ರಾಮದ ನಕ್ಸಲ್ ಸುರೇಶ್‌ ಕೇರಳ ರಾಜ್ಯದ ಕಣ್ಣೂರಿನಲ್ಲಿ ಪೊಲೀಸರಿಂದ ಬಂಧನ.ಮಾರ್ಚ್‌: 12- ಕಂದಾಯ ಭೂಮಿ ಒತ್ತುವರಿ ಮಾಡಿ ಕಾಫಿ, ರಬ್ಬರ್‌ ಬೆಳೆದಿದ್ದರೆ ಅಂತಹವರಿಗೆ ಗುತ್ತಿಗೆ ಆಧಾರದಲ್ಲಿ ಭೂಮಿ ನೀಡಲು ರಾಜ್ಯ ಸರ್ಕಾರದಿಂದ ಆದೇಶ. ಇದರಿಂದ ಕಾಫಿ ಬೆಳೆಗಾರರಲ್ಲಿ ಮಂದಹಾಸ. 22 - ಚಿಕ್ಕಮಗಳೂರು ತಾಲೂಕಿನ ಕಂಚೇನಹಳ್ಳಿಯಲ್ಲಿ ತಮಿಳುನಾಡು ಮೂಲದ ಶ್ರೀಧರ ಕೂಲಿ ಕೆಲಸಕ್ಕೆಂದು ತೋಟಕ್ಕೆ ತೆರಳುವಾಗ ಒಂಟಿ ಸಲಗ ದಾಳಿ, ಗಾಯಗೊಂಡ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವಪ್ಪಿದರು. ಏಪ್ರಿಲ್‌ : 5- ಚಿಕ್ಕಮಗಳೂರು ತಾಲೂಕಿನ ದೊಡ್ಡಮಾಗರವಳ್ಳಿ ಸಮೀಪದ ಕಂಚಿನಕಲ್‌ ದುರ್ಗಾದ ಕೆಸುವಿನಕಲ್‌ ಕಾಫಿ ಎಸ್ಟೇಟ್‌ ಬಳಿ ಕಾಡಾನೆ ದಾಳಿಗೆ ಆನಂದ ಪೂಜಾರಿ ಮೃತಪಟ್ಟರು. 26- ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಶೇ. 75.2 ರಷ್ಟು ಮತದಾನ. 28 - ಬಾಬಾಬುಡನ್‌ ಗಿರಿ ಪ್ರವಾಸಕ್ಕೆ ಬಂದಿದ್ದ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಆದಿವಾಲದ ಒಂದು ಕುಟುಂಬ ಸಂಚರಿಸುತ್ತಿದ್ದ 30 ಜನರು ಇರುವ ಮಿನಿ ಬಸ್‌ ಪಲ್ಟಿ. ಇದರಿಂದ ಹಲವು ಮಂದಿ ಗಾಯಗೊಂಡರು.

ಮೇ: 9- ಚಿಕ್ಕಮಗಳೂರು ನಗರದ ಜಯನಗರ ಬಡಾವಣೆಯಲ್ಲಿ ರಾತ್ರಿ ವೇಳೆ ಒಂಟಿ ಸಲಗ ಓಡಾಡಿದ್ದರಿಂದ ಜನರಲ್ಲಿ ಆತಂಕ ಎದುರಾಗಿತ್ತು. 12 - ಭಾರೀ ಮಳೆ ಮತ್ತು ಗಾಳಿಯಿಂದ ಎನ್‌.ಆರ್‌.ಪುರ ತಾಲೂಕಿನ ಕಟ್ಟಿನಮನೆ ಗ್ರಾಮದಲ್ಲಿ ಮರ ಬಿದ್ದು ಸವಿತ ಎಂಬುವವರು ಮೃತ. ಇತರೆ 3 ಮಂದಿ ಗಾಯಗೊಂಡಿದ್ದರು. 18 - ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದಲ್ಲಿ ಹೂತಿದ್ದ ಶವ ಮಳೆಗಾಗಿ ಹೊರ ತೆಗೆದು ಸುಟ್ಟು ಹಾಕಲಾಯಿತು. 24- ಮೂಡಿಗೆರೆ ತಾಲೂಕಿನ ಬಣಕಲ್ ಮತ್ತು ಕೊಟ್ಟಿಗೆಹಾರ ರಾ. ಹೆ.ಯಲ್ಲಿ ಮೆಸ್ಕಾಂ ಲಾರಿಗೆ ಓಮ್ನಿ ಮತ್ತು ಆಲ್ಟೋ ಕಾರು ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ಕು ಮಂದಿ ಸಾವನ್ನಪ್ಪಿದ ದುರ್ಘಟನೆ ನಡೆಯಿತು. ಜೂನ್‌: 4 - ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟ. ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿ ಜಯ. ಕಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶ್ರೇಯಸ್‌ ಪಟೇಲ್‌ ಗೆಲುವು. 12- ವಿಧಾನ ಪರಿಷತ್ ಚುನಾವಣೆಯಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಎಸ್.ಎಲ್.ಭೋಜೇಗೌಡ ಜಯಭೇರಿ ಬಾರಿಸಿದರೇ, ಮಾಜಿ ಸಚಿವ ಸಿ.ಟಿ.ರವಿ ಪರಿಷತ್‌ಗೆ ಅವಿರೋಧ ಆಯ್ಕೆಯಾಗಿದ್ದು ಕಾಫಿನಾಡಿಗೆ ಒಂದೇ ದಿನ ವಿಧಾನ ಪರಿಷತ್‌ನಲ್ಲಿ 2 ಸ್ಥಾನ ಗಿಟ್ಟಿಸುವ ಸುಯೋಗ. 19 - ತೆಪ್ಪ ಮುಳುಗಿ 3 ಜನರು ಸಾವನಪ್ಪಿರುವ ದಾರುಣ ಘಟನೆ ಜಿಲ್ಲೆಯ ನರಸಿಂಹರಾಜಪುರ ತಾಲೂಕು ಬೈರಾಪುರ ಗ್ರಾಮದಲ್ಲಿ ನಡೆಯಿತು. ಶಿವಮೊಗ್ಗದ ವಿದ್ಯಾನಗರದ ಆದೀಲ್, ಸಾಜೀದ್, ಅಫ್ದಾಖಾನ್ ಮೃತ ದುರ್ಧೈವಿಗಳು.

ಜುಲೈ: 16- ಮಲೆನಾಡಿನಲ್ಲಿ ಸುರಿದ ಭಾರೀ ಮಳೆಯಿಂದ ಹೊರನಾಡು- ಕಳಸ ಸಂಪರ್ಕದ ಹೆಬ್ಬಾಳೆ ಸೇತುವೆ ಭದ್ರಾ ನದಿ ನೀರಿನಲ್ಲಿ ಮುಳುಗಡೆ.ಆಗಸ್ಟ್‌: 5- ಮಳೆ ಹಾನಿ ಪ್ರದೇಶಕ್ಕೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಭೇಟಿ. 8- ಪ್ಯಾರಿಸ್‌ನಲ್ಲಿ ನಡೆದ ಪ್ಯಾರಾ ಒಲಂಪಿಕ್‌ನಲ್ಲಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಗುಡ್ನಹಳ್ಳಿಯ ಅಂಧ ಕ್ರೀಡಾ ಪ್ರತಿಭೆ ರಕ್ಷಿತಾ ರಾಜು 1500 ಮೀ. ಓಟದಲ್ಲಿ ಭಾಗವಹಿಸುವ ಮೂಲಕ ಜಿಲ್ಲೆಯ ಗರಿಮೆ ಹೆಚ್ಚಿಸಿ, ಪ್ರಧಾನಿ ನರೇಂದ್ರಮೋದಿಯವರ ಪ್ರಶಂಗೆ ಪಾತ್ರರಾದರು. 10- ಭಾರೀ ಮಳೆಯಿಂದ ಜಿಲ್ಲೆಯಲ್ಲಿ ಹಲವು ಪ್ರದೇಶಗಳಲ್ಲಿ ಭೂ ಕುಸಿತ ವಾಗಿರುವ ಹಿನ್ನಲೆಯಲ್ಲಿ ಕೇಂದ್ರದ ಸರ್ವೆಕ್ಷಣಾ ಇಲಾಖೆ ಅಧಿಕಾರಿಗಳ ತಂಡ ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಿತ್ತು. 22 - ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಬಿಜೆಪಿ ಬೆಂಬಲಿತ ಸುಜಾತಾ ಶಿವಕುಮಾರ್ ಅಧ್ಯಕ್ಷೆ - ಅನು ಮಧುಕರ್ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.27- ನಕಲಿ ಟ್ರಕ್ಕಿಂಗ್ ಟಿಕೆಟ್ ಮಾರಾಟ ಮಾಡಿ ಸರ್ಕಾರದ ಖಜಾನೆಗೆ ವಂಚನೆ ಆರೋಪದಡಿ ಕಳಸ ಅರಣ್ಯ ಇಲಾಖೆ ಡಿಆರ್‌ಎಫ್‌ಓ ಚಂದನ್‌ ಗೌಡ ದ್ಯಾಮನಗೌಡ್ರ ಅವರನ್ನು ಶಿಸ್ತು ಪ್ರಾಧಿಕಾರ ಹಾಗೂ ಚಿಕ್ಕಮಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಅಮಾನತ್ತು ಗೊಳಿಸಿದರು. 27 - ತೋಟದ ಬೇಲಿಗೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶದಿಂದ ಕಾಡಾನೆ ಮೃತಪಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ಕೊಳಗಾಮೆ ಗ್ರಾಮದಲ್ಲಿ ನಡೆದಿತ್ತು. ಸೆಪ್ಟಂಬರ್‌ : 1- ರಸ್ತೆ ಇಲ್ಲದೆ ಅನಾರೋಗ್ಯದಿಂದ ಮೃತಪಟ್ಟ ಯುವಕನ ಶವವನ್ನು ಸಂಬಂಧಿಕರು ಜೋಳಿಗೆಯಲ್ಲಿ ಕಟ್ಟಿ ಹೊತ್ತು ಸಾಗಿದ ಘಟನೆ ಕಳಸ ತಾಲೂಕು ಸಂಸೆ ಗ್ರಾಪಂ ವ್ಯಾಪ್ತಿಯ ಕೋಣೇಗೋಡು ಗ್ರಾಮದಲ್ಲಿ ನಡೆಯಿತು. 26- ಕಳಸ ತಾಲೂಕಿನ ನೆಲ್ಲಿಬೀಡು ಗ್ರಾಮದಲ್ಲಿ ಪರ್ಯಾಯ ರಸ್ತೆ ಇಲ್ಲದೆ ಅನಾರೋಗ್ಯ ಪೀಡಿತ ವೃದ್ದೆಯನ್ನು ಕುಟುಂಬಸ್ಥರು 3 ಕಿ.ಮೀ. ಹೊತ್ತು ಆಸ್ಪತ್ರೆಗೆ ಸೇರಿಸಿದ ಘಟನೆ.

ಅಕ್ಟೋಬರ್‌: 11 - ತೆಲಂಗಾಣ ರಾಜ್ಯದಿಂದ ಕಾಫಿನಾಡು ಪ್ರವಾಸಕ್ಕೆ ಬಂದಿದ್ದ ಐವರಿದ್ದ ಪ್ರವಾಸಿಗರ ಕಾರು ತಾಲೂಕಿನ ಮುಳ್ಳಯ್ಯ ನಗಿರಿ ಸಮೀಪದಲ್ಲಿ ಕಂದಕಕ್ಕೆ ಉರುಳಿ ಕಾರಿನಲ್ಲಿದ್ದ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದರು. 26 - ಬಿಜೆಪಿ ಮುಖಂಡ ಅನ್ವರ್‌ ಕೊಲೆ ತನಿಖೆಗಾಗಿ ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದ ತಂಡ ಚಿಕ್ಕಮಗಳೂರಿಗೆ ಆಗಮಿಸಿ ಮಾಹಿತಿ ಕಲೆ ಹಾಕಿತು. ಅನ್ವರ್‌ ಮೃತ ಪಟ್ಟು 6 ವರ್ಷವಾಗಿದೆ. 30- ಚಿಕ್ಕಮಗಳೂರು ಜಿಲ್ಲೆ ನಾಲ್ವರಿಗೆ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆಕಿತು. ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಿಲ್ಲೆಯ ಅಜ್ಜಂಪುರ ಎಸ್.ಜಿ.ಲಕ್ಷ್ಮೀದೇವಮ್ಮ, ಅಜ್ಜಂಪುರ ತಾಲೂಕು ಗಡಿಹಳ್ಳಿಯ ಭಾಗ್ಯಮ್ಮ (ಸುವರ್ಣ ಮಹೋತ್ಸವ ಪ್ರಶಸ್ತಿ) ಸಾಹಿತ್ಯ ಕ್ಷೇತ್ರದಿಂದ ಬಿ.ಟಿ.ಲಲಿತಾ ನಾಯಕ್ ಹಾಗೂ ಮಡ್ಡಿಕೆರೆ ಗೋಪಾಲ್ (ಸುವರ್ಣ ಮಹೋತ್ಸವ ಪ್ರಶಸ್ತಿ) ಪ್ರಶಸ್ತಿ ಸ್ವಿಕರಿಸಿದರು.

ನವೆಂಬರ್‌: 4- ಸ್ನೇಹಿತನೊಂದಿಗೆ ಪ್ರವಾಸಕ್ಕೆ ಬಂದಿದ್ದ ಛತ್ತೀಸ್‌ಘಡ ಮೂಲದ ಬೆಂಗಳೂರು ಟೆಕ್ಕಿ ಈಜಲು ತರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತರೀಕೆರೆ ತಾಲೂಕಿನ ಕೆಮ್ಮಣ್ಣಗುಂಡಿ ಸಮೀಪದ ಹೆಬ್ಬೆ ಜಲಪಾತದ ಬಳಿ ನಡೆಯಿತು. ಅಮಿತ್‌ಕುಮಾರ್‌ (30) ಮೃತ ದುರ್ದೈವಿ. 4- ಶ್ರೀರಾಮ ಸೇನೆ ನೇತೃತ್ವದ ದತ್ತಮಾಲಾ ಅಭಿಯಾನಕ್ಕೆ ಚಿಕ್ಕಮಗಳೂರಿನ ಶಂಕರಮಠದಲ್ಲಿ ಚಾಲನೆ. 9- ಕಾಡಾನೆ ಹಿಂಡು ಮತ್ತೆ ಜಿಲ್ಲೆಗೆ ಎಂಟ್ರಿ ಕೊಟ್ಟಿತ್ತು. ಈ ತಂಡದಲ್ಲಿದ್ದ ಆನೆಯೊಂದು ಆಲ್ದೂರಿನ ಪುರ ಬಳಿ ವಿದ್ಯುತ್‌ ತಂತಿ ಸ್ಪರ್ಶದಿಂದ ಮೃತಪಟ್ಟಿತು. 12 - ನಕ್ಸಲ್ ತಂಡದ ಮುಂಡಗಾರು ಲತಾ, ಜಯಣ್ಣ ಮತ್ತು ಇತರರು ಇದ್ದ ತಂಡ ಜಿಲ್ಲೆಯ ಜಯಪುರ ಸಮೀಪದ ಕಡೇಗುಂದಿ ಗ್ರಾಮದ ಅರಣ್ಯದಂಚಿನ ಸುಬ್ಬಗೌಡ ಎಂಬುವರ ಒಂಟಿ ಮನೆಗೆ ಬಂದು ಹೋಗಿತ್ತು. 28 - ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಸಕ್ತ ಸಾಲಿನ ಸಂಪ್ರದಾಯಿಕ ಶಿಲ್ಪ ಕಲೆ ಗೌರವ ಪ್ರಶಸ್ತಿಗೆ ಕಾಫಿನಾಡಿನ ಎಸ್. ಪಿ.ಪಣಿಯಾಚಾರ್ ಆಯ್ಕೆ. 30 - ನರಸಿಂಹರಾಜಪುರ ತಾಲೂಕಿನ ಸೀತೂರು ಗ್ರಾಮದ ಉಮೇಶ್ ಎಂಬುವರು ಗ್ರಾಮಕ್ಕೆ ದಾಳಿ ಇಟ್ಟಿದ್ದ ಕಾಡಾನೆ ಓಡಿಸಲು ಹೋಗಿ ಆನೆ ದಾಳಿಗೆ ಸಿಲುಕಿ ಮೃತಪಟ್ಟರು.

ಡಿಸೆಂಬರ್: 6- ವಿಶ್ವ ಹಿಂದೂ ಪರಿಷತ್ ಬಜರಂಗ ದಳದ ವತಿಯಿಂದ ಹಮ್ಮಿಕೊಂಡಿರುವ ದತ್ತಮಾಲಾ ಅಭಿಯಾನ ಮತ್ತು ದತ್ತಜಯಂತಿಗೆ ಚಾಲನೆ. 13- ದತ್ತಜಯಂತಿ ಹಿನ್ನಲೆ ನಡೆದ ಶೋಭಾ ಯಾತ್ರೆಯಲ್ಲಿ ಸಾವಿರಾರು ಜನ ಭಾಗಿ. 19 - ಕಾಡಾನೆ ದಾಳಿಗೆ ಸಿಲುಕಿ ಜಿಲ್ಲೆಯ ನರಸಿಂಹರಾಜಪುರದ ಮಡಬೂರು ಸಮೀಪದ ಎಕ್ಕಡಬೈಲು ಗ್ರಾಮದಲ್ಲಿ ನಡೆಯಿತು. ಕೆ.ಕೆ. ಎಲಿಯಾಸ್‌ (75) ಮೃತ ದುರ್ದೈವಿ. 19- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಅಸಭ್ಯ ಪದ ಬಳಕೆ ಮಾಡಿದ ಕಾರಣಕ್ಕಾಗಿ ಸಿ.ಟಿ. ರವಿ ನಿವಾಸಕ್ಕೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಮುತ್ತಿಗೆ ಇದೇ ದಿನದಂದು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಯತ್ನ

Share this article