ದಾವಣಗೆರೆ: ಜ್ಞಾನ ಮತ್ತು ಭಕ್ತಿ ಎರಡು ವಿಚಾರಗಳು ಶ್ರೀಮದ್ ಭಾಗವತ ಮಹಾಪುರಾಣಗಳಲ್ಲಿ ಸಮರ್ಥವಾಗಿ ಮೂಡಿ ಬಂದಿವೆ. ಇದರಲ್ಲಿ ವೇದ ವೇದಾಂತಗಳ ಸರ್ವಸ್ವವೂ ಅಡಗಿದೆ. ಭಾಗವತವು ವೇದವ್ಯಾಸರು ರಚಿಸಿದ 18 ಪುರಾಣಗಳಲ್ಲೇ ಇದು ಅತ್ಯಂತ ಶ್ರೇಷ್ಠವಾದುದು ಎಂದು ಪ್ರವಚನಕಾರ, ವೇದಬ್ರಹ್ಮ ಪಂಡಿತ ಶ್ರೀ ಗೋಪಾಲಾಚಾರ್ ಮಣ್ಣೂರ್ ಅಭಿಪ್ರಾಯಪಟ್ಟರು.
ಭಾನುವಾರ ಸಂಜೆ ನಗರದ ದೇವರಾಜ ಅರಸು ಬಡಾವಣೆ ಸಿ ಹಂತದಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನದ ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಶ್ರೀ ಕುದ್ದುಂಜಿ ಮಹಾಬಲರಾವ್ ಪುಣ್ಯಸ್ಮರಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಶ್ರೀಮದ್ ಭಾಗವತ ಪುರಾಣ ಪ್ರವಚನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಭಾಗವತವು ಶ್ರೀ ವೇದವ್ಯಾಸ ಋಷಿಗಳಿಂದ ಸಜ್ಜನರ ಹಾಗೂ ಭಗವತ್ ಭಕ್ತರ ಅನುಗ್ರಹಕ್ಕಾಗಿ ರಚಿತವಾದ ಅತ್ಯಂತ ಶ್ರೇಷ್ಠವಾದ ಪುರಾಣವೆಣಿಸಿದೆ. ಇದರ ಶ್ರವಣ ಮಾತ್ರದಿಂದ ಮನುಷ್ಯರು ಎಲ್ಲಾ ವಿಧವಾದ ಪಾಪಗಳಿಂದ ಮುಕ್ತರಾಗುತ್ತಾರೆ. ಅಷ್ಟೇ ಅಲ್ಲದೇ ಜೀವನದಲ್ಲಿ ತಮಗೆ ಅಪೇಕ್ಷಿತವಾದ ಎಲ್ಲಾ ಆಸೆಗಳನ್ನು ಪೂರೈಸಿಕೊಂಡು ಮುಂದೆ ಉತ್ತಮವಾದ ಸುಖಃಗಳನ್ನು ಕೊಡುವ ಲೋಕಕ್ಕೆ ಕೊಂಡೊಯ್ಯುತ್ತದೆ ಎಂದು ತಿಳಿಸಿದರು.ಶಾಪಗ್ರಸ್ತನಾದ ಪರೀಕ್ಷಿತ ಮಹಾರಾಜನು ಕೇವಲ 7 ದಿನದ ಒಳಗೆ ಸಾಯುವ ವಿಷಯ ತಿಳಿದಾಗ ಭಾಗವತದ ಪ್ರಭಾವದಿಂದ ಅವನಿಗೆ ಸದ್ಗತಿ ದೊರೆತ ಪುಣ್ಯಕಥಾ ಭಾಗವಾದ ಭಾಗವತವು ಸೃಷ್ಠಿ, ಸ್ಥಿತಿ, ಲಯ ಇವೆಲ್ಲವುಗಳ ಪಾಠವನ್ನು ತಿಳಿಸಬಲ್ಲ ನಮ್ಮ ಇಂದಿನ ಬದುಕಿಗೂ ಹತ್ತಿರದ ಅನೇಕ ಸಂಗತಿಗಳು ಉತ್ತಮ ಬದುಕನ್ನು ರೂಪಿಸುವಲ್ಲಿ ಭಾಗವತವು ಪ್ರಭಾವ ಬೀರುತ್ತದೆ ಎಂದು ಅವರು, ಭಾಗವತದ ಉಗಮ, ಅದರ ಉದ್ದೇಶ, ಅದರಿಂದ ಮನುಕುಲಕ್ಕೆ ಆಗುವ ಪ್ರಯೋಜನಗಳನ್ನು ಕಥಾರೂಪಕವಾಗಿ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಕುಟುಂಬ ಪ್ರಬೋಧನಾ ದಾವಣಗೆರೆ ವರ್ಗದ ಸಂಚಾಲಕಿ ಗೀತಕ್ಕ ಮತ್ತು ಸದಸ್ಯರು ಭಾಗವಹಿಸಿ ದೇವರ ನಾಮ ಹಾಡಿದರು. ಸಂವೇದಿತಾ ಪ್ರಾರ್ಥನೆ ಮಾಡಿದರೆ, ಯೋಗ ತಜ್ಞ ಡಾ.ರಾಘವೇಂದ್ರ ಗುರೂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಆಶಾ ಪ್ರದೀಪ್, ಮಂಜುನಾಥ್ ಎಚ್.ಪ್ರದೀಪ್, ರೇಖಾ ಕಲ್ಲೇಶ್, ಸಾವಿತ್ರಮ್ಮ, ಶಾಂತಮ್ಮ, ಯೋಗ ವಿದ್ಯಾರ್ಥಿಗಳಾದ ಕಾವ್ಯ, ವಿ.ಕೆ.ರಾಹುಲ್ ಇತರರಿಗೆ ಅಭಿನಂದಿಸಲಾಯಿತು. ಭಾಗವತ ಪ್ರವಚನ ಸಪ್ತಾಹ ಬರುವ 2025ರ ಜನವರಿ 5 ರ ವರೆಗೆ ಪ್ರತಿದಿನ ಸಂಜೆ 6.30 ರಿಂದ 8 ಗಂಟೆವರೆಗೆ ನಡೆಯಲಿದ್ದು, ಪ್ರತಿದಿನವು ನೇರ ಪ್ರಸಾರಗೊಳ್ಳಲಿದೆ. ಯೂಟೂಬ್ ಲಿಂಕ್‌ಗಾಗಿ 94484-22829 ಸಂಪರ್ಕಿಸಬಹುದಾಗಿದೆ.