ಕಳಚಿ ಬಿತ್ತು ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್‌ : ಈ ವರ್ಷದ ಅತಿ ದೊಡ್ಡ ಆತಂಕ

KannadaprabhaNewsNetwork |  
Published : Dec 31, 2024, 01:01 AM ISTUpdated : Dec 31, 2024, 01:17 PM IST
30ಎಚ್‌ಪಿಟಿ2- ಹೊಸಪೇಟೆಯ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ ಕಳಚಿ ಬಿದ್ದಿರುವುದನ್ನು ವೀಕ್ಷಣೆ ಮಾಡಲು ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು. | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ ಆ.10ರ ರಾತ್ರಿ ಕಳಚಿ ಬಿದ್ದು, ರೈತರಲ್ಲಿ ಆತಂಕ ತಂದೊಡ್ಡಿತ್ತು.

ಕೃಷ್ಣ ಲಮಾಣಿ

ಹೊಸಪೇಟೆ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ ಆ.10ರ ರಾತ್ರಿ ಕಳಚಿ ಬಿದ್ದು, ರೈತರಲ್ಲಿ ಆತಂಕ ತಂದೊಡ್ಡಿತ್ತು. ಇದು ಈ ವರ್ಷದ ಅತಿ ದೊಡ್ಡ ಆತಂಕವಾಗಿ ರೈತರನ್ನು ಕಾಡಿತ್ತು.

ಗೇಟ್‌ ಕಳಚಿ ಬಿದ್ದಿದ್ದರಿಂದ ಬರೋಬ್ಬರಿ 40 ಟಿಎಂಸಿಯಷ್ಟು ನೀರು ನದಿ ಪಾಲಾಗಿತ್ತು. ಈ ಗೇಟ್‌ಗೆ ಪರಿಣತ ತಜ್ಞ ಕನ್ನಯ್ಯ ನಾಯ್ಡು ಸ್ಟಾಪ್‌ ಲಾಗ್‌ ಗೇಟ್‌ ಅಳವಡಿಕೆ ಮಾಡುವ ಆತಂಕ ದೂರ ಮಾಡಿದರು. ತುಂಗಭದ್ರಾ ಜಲಾಶಯ ಮತ್ತೆ ಭರ್ತಿಯಾದ ಬಳಿಕ ಸೆ. 22ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಲಾಶಯಕ್ಕೆ ಆಗಮಿಸಿ ಬಾಗಿನ ಅರ್ಪಿಸಿದರು. ಜಲಾಶಯದ ಸ್ಟಾಪ್‌ ಲಾಗ್‌ ಗೇಟ್‌ ಅಳವಡಿಕೆಗೆ ಶ್ರಮಿಸಿದ ಕಾರ್ಮಿಕರು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಿದರು. ಈಗ ತುಂಗಭದ್ರಾ ಜಲಾಶಯದ ಗೇಟ್‌ಗಳನ್ನು ಬದಲಿಸಲು ಹೊಸದಿಲ್ಲಿಯ ಪರಿಣತರ ತಂಡ ಕೂಡ ಆಗಮಿಸಿ ಪರಿಶೀಲನೆ ನಡೆಸಿದೆ. ಜಲಾಶಯದ ಎಲ್ಲ 33 ಗೇಟ್‌ಗಳನ್ನು ಬದಲಿಸಲು ತುಂಗಭದ್ರಾ ಮಂಡಳಿ ಕೂಡ ಮುಂದಾಗಿದೆ.

ಸಿದ್ದರಾಮಯ್ಯರಿಂದ ಕೆಡಿಪಿ ಸಭೆ:

ನೂತನ ವಿಜಯನಗರ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು. ಜಿಲ್ಲಾ ಉಸ್ತುವಾರಿ ಮಂತ್ರಿ ಜಮೀರ್‌ ಅಹಮದ್ ಖಾನ್‌, ಜಿಲ್ಲೆಯ ಶಾಸಕರು, ಸಂಸದರು ಇದ್ದರು. ವಿಜಯನಗರ ಜಿಲ್ಲೆಗೆ ಖನಿಜ ನಿಧಿಯಿಂದ ಇನ್ನೂ ₹218 ಕೋಟಿ ಕಳೆದ ವರ್ಷದ ಹಣ ಬಾಕಿ ಇದೆ. ಈ ಹಣ ಬಿಡುಗಡೆಗೂ ಖನಿಜ ಇಲಾಖೆಯ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಡಿಎಂಎಫ್ ಅನುದಾನದಲ್ಲಿ ಬಳ್ಳಾರಿಗೆ ಶೇ.72 ಮತ್ತು ವಿಜಯನಗರ ಜಿಲ್ಲೆಗೆ ಶೇ.28ರಷ್ಟು ಅನುದಾನ ಹಂಚಿಕೆ ಆಗಿದೆ. ಬಳ್ಳಾರಿ ಜಿಲ್ಲೆಯ ಶಾಸಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೆಲ್ಲ ಬಗೆಹರಿಸಲಾಗುವುದು. ವಿಜಯನಗರ ಜಿಲ್ಲೆಗೆ ಡಿಎಂಎಫ್ ಅನುದಾನ ಪ್ರತಿ ವರ್ಷ ದೊರೆಯುವಂತೆ ಕ್ರಮ ವಹಿಸಲಾಗುವುದು ಎಂದು ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು.

ಹಂಪಿ ಉತ್ಸವ; ಜನೋತ್ಸವ:

ಈ ಬಾರಿ ಹಂಪಿ ಉತ್ಸವಕ್ಕೆ ಭಾರೀ ಪ್ರಮಾಣದಲ್ಲಿ ಜನರ ದಂಡು ಹರಿದು ಬಂದಿತು. ಮೂರು ದಿನಗಳ ಉತ್ಸವದಲ್ಲಿ ಜನರು ತಂಡೋಪತಂಡವಾಗಿ ಆಗಮಿಸಿ ವೀಕ್ಷಣೆ ಮಾಡಿದರು. ವಿಜಯನಗರದ ಗತವೈಭವ ಸಾರುವ ಉತ್ಸವ ಜನಾಕರ್ಷಣೆ ಉತ್ಸವವಾಗಿ ಗಮನ ಸೆಳೆಯಿತು.

ಎಸ್ಸೆಸ್ಸೆಲ್ಸಿಯಲ್ಲಿ ಫಲಿತಾಂಶ ಕುಸಿತ:

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಹತ್ತನೇ ಸ್ಥಾನದಲ್ಲಿದ್ದ ವಿಜಯನಗರ ಜಿಲ್ಲೆ ಶೇ.65.60ರ ಫಲಿತಾಂಶದೊಂದಿಗೆ ಹತ್ತನೇ ಸ್ಥಾನದಿಂದ 27ನೇ ಸ್ಥಾನಕ್ಕೆ ಕುಸಿಯಿತು. ಎಸ್ಸೆಸ್ಸೆಲ್ಸಿ ಕಳಪೆ ಫಲಿತಾಂಶ ಪ್ರದರ್ಶನದ ಹಿನ್ನೆಲೆಯಲ್ಲಿ ಕೆಡಿಪಿ ಸಭೆಯಲ್ಲಿ ಡಿಡಿಪಿಐ ಯುವರಾಜ ನಾಯ್ಕ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಮಾನತು ಮಾಡಿದರು. ವಿಜಯನಗರ ಜಿಲ್ಲೆಯಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಮೀನುಗಾರಿಕೆ ಸಚಿವ ಮಂಕಾಳ ಎಸ್‌. ವೈದ್ಯ ಆಗಮಿಸಿ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಸಚಿವರು, ಸಹಕಾರ ಸಚಿವರು, ಗೃಹ ಸಚಿವರು ಜಿಲ್ಲೆಗೆ ಭೇಟಿ ನೀಡಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ