4ರಂದು ಬಳ್ಳಾರಿಯಲ್ಲಿ ಶ್ರೀಚರಂತಪ್ಪಜ್ಜ ಮಹಾಸ್ವಾಮಿಗಳ 21ನೇ ಪುಣ್ಯಸ್ಮರಣೋತ್ಸವ

KannadaprabhaNewsNetwork |  
Published : Jun 03, 2025, 12:26 AM IST
ಶ್ರೀಚರಂತಪ್ಪಜ್ಜ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ ಸಮಾರಂಭ ಕುರಿತು ನಂದೀಪುರಮಠದ ಡಾ.ಮಹೇಶ್ವರ ಸ್ವಾಮಿ ಹಾಗೂ ಕಮ್ಮರಚೇರು ಮಠದ ಶ್ರೀ ಕಲ್ಯಾಣಸ್ವಾಮಿಗಳುಬಳ್ಳಾರಿಯಲ್ಲಿ ಭಾನುವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.  | Kannada Prabha

ಸಾರಾಂಶ

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೆರೆ-ನಂದೀಪುರದ ಶ್ರೀ ಚರಂತಪ್ಪಜ್ಜ ಮಹಾಸ್ವಾಮಿಗಳ 21ನೇ ಪುಣ್ಯಸ್ಮರಣೋತ್ಸವ ಸಮಾರಂಭ ಜೂ. 4ರಂದು ಬೆಳಗ್ಗೆ 10 ಗಂಟೆಗೆ ನಗರದ ಬಸವಭವನದಲ್ಲಿ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೆರೆ-ನಂದೀಪುರದ ಶ್ರೀ ಚರಂತಪ್ಪಜ್ಜ ಮಹಾಸ್ವಾಮಿಗಳ 21ನೇ ಪುಣ್ಯಸ್ಮರಣೋತ್ಸವ ಸಮಾರಂಭ ಜೂ. 4ರಂದು ಬೆಳಗ್ಗೆ 10 ಗಂಟೆಗೆ ನಗರದ ಬಸವಭವನದಲ್ಲಿ ಆಯೋಜಿಸಲಾಗಿದೆ ಎಂದು ನಂದಿಪುರ ಪುಣ್ಯಕ್ಷೇತ್ರದ ಶ್ರೀಡಾ.ಮಹೇಶ್ವರಸ್ವಾಮಿ ಹಾಗೂ ಕಮ್ಮರಚೇರಡು ಕಲ್ಯಾಣ ಮಠದ ಶ್ರೀ ಕಲ್ಯಾಣಸ್ವಾಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀಗುರು ದೊಡ್ಡಬಸವೇಶ್ವರ ಅವತಾರವಾಗಿ ನಂದಿಪುರ ಪುಣ್ಯಕ್ಷೇತ್ರದಲ್ಲಿ ನೆಲೆಸಿ, ನಡೆದಾಡುವ ದೇವರು ಎಂದೇ ಎಂದು ಭಕ್ತ ಸಮೂಹದಿಂದ ಪೂಜಿಸಲ್ಪಡುತ್ತಿದ್ದ ಶ್ರೀಚರಂತಪ್ಪಜ್ಜ ಮಹಾಸ್ವಾಮಿಗಳು ತಮ್ಮ ತಪಃ ಶಕ್ತಿಯಿಂದ ಭಕ್ತರನ್ನು ಸದಾಕಾಲ ಪೊರೆದು ಪೋಷಿಸಿದ ವರಗುರು ಎಂದೇ ಪ್ರಸಿದ್ಧಿಯಾಗಿದ್ದವರು. ಶ್ರೀಗಳ 21ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಈ ಬಾರಿ ಬಳ್ಳಾರಿಯಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿಸಲು ಭಕ್ತರು ನಿರ್ಧರಿಸಿದ್ದಾರೆ ಎಂದರು.

ಪುಣ್ಯಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯವನ್ನು ಉಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ್ವರ ಡಾ. ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿ, ಕೊಟ್ಟೂರುಸ್ವಾಮಿ ಮಠದ ಹಂಪಿ ಹೇಮಕೂಟ ಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿ ಹಾಗೂ ಉತ್ತಂಗಿಯ ಶ್ರೀ ಸೋಮಶೇಖರ ಮಹಾಸ್ವಾಮಿಗಳು ವಹಿಸುವರು. ಜಿಲ್ಲೆಯ ವಿವಿಧ ಮಠಾಧೀಶರು ಉಪಸ್ಥಿತರಿರುವರು.

ಸಮಾರಂಭದಲ್ಲಿ ನಾಡಿನ ಹಿರಿಯ ಲೇಖಕ ಎಸ್‌.ವಿ. ಪಾಟೀಲ್ ಗುಂಡೂರವರ ಸಂಪಾದಿತ "ನಡೆದಾಡುವ ದೇವರು " ಕೃತಿ ಹಾಗೂ ಡಾ.ಎಂ. ಶಿವಮೂರ್ತಿ ಅವರ "ದಿವ್ಯಪ್ರಕಾಶ " ಕೃತಿ ಸಮಾರಂಭದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಇದೇವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿಯರನ್ನು ಗುರು ಚರಂತಾರ್ಯ ಶ್ರೀ ಪ್ರಶಸ್ತಿ ಪ್ರದಾನ ಜರುಗಲಿದೆ. ಹಿರಿಯ ವಕೀಲ ಹಾಗೂ ರಾಜಕೀಯ ಮುತ್ಸದ್ಧಿ ಎನ್.ತಿಪ್ಪಣ್ಣ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಜ್ಯೋತಿಷ್ಯ ಪಂಡಿತ ಪಂಪಯ್ಯಶಾಸ್ತ್ರಿ, ಮಾಜಿ ಶಾಸಕ ಬಾಣಾಪುರ ಶಿವರಾಮರೆಡ್ಡಿ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಒ.ಎಂ.ಚನ್ನಬಸಯ್ಯ, ಕರಿಡೀಶ ಕಲ್ಯಾಣ ಟ್ರಸ್ಟ್, ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಆನೆ ಗಂಗಣ್ಣ, ಅರವಿ ಬಸವನಗೌಡ, ಸಹಕಾರ ಕ್ಷೇತ್ರದ ಧುರೀಣ ಚೊಕ್ಕಬಸವನಗೌಡ, ಕುಪ್ಪಗಲ್ ಅಯ್ಯಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ಚೋರನೂರು ಕೊಟ್ರಪ್ಪ ಅವರಿಗೆ ಈ ಬಾರಿ ಪ್ರಶಸ್ತಿ ನೀಡಲಾಗುವುದು. ಎಸ್‌.ವಿ. ಪಾಟೀಲ್ ಗುಂಡೂರವರ 575 ಪುಸ್ತಕಗಳ ಪ್ರದರ್ಶನವಿದ್ದು ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕುಲಸಚಿವ ರುದ್ರೇಶ್ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕೋಗಳಿ ಕೊಟ್ರೇಶ್ ಅವರಿಂದ ಹಾಸ್ಯ ಕಾರ್ಯಕ್ರಮವಿರುತ್ತದೆ. ಪೂಜಾ ಶ್ರೀಕಾಂತ್ ಅವರಿಂದ ವಚನ ಗಾಯನ, ಬಿ.ರೇಖಾ ಅವರಿಂದ ಸಿತಾರ ವಾದನ ಇರಲಿದೆ. ಕಾರ್ಯಕ್ರಮ ಶುರುಮುನ್ನ ಶ್ರೀ ಚರಂತಾರ್ಯ ಮಹಾಸ್ವಾಮಿಗಳ ಭಾವಚಿತ್ರ ಮೆರವಣಿಗೆ ಇರಲಿದೆ. ಕನಕ ದುರ್ಗಮ್ಮ ದೇವಸ್ಥಾನದಿಂದ ಆರಂಭಗೊಳ್ಳುವ ಮೆರವಣಿಗೆ, ಬಸವಭವನವರೆಗೆ ಸಾಗಿ ಬರಲಿದೆ. ಡೊಳ್ಳು, ಡೋಲು, ನಂದಿಕೋಲು ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದು ವಿವರಿಸಿದರು.

ಜಂಗಮಹೊಸಹಳ್ಳಿ ಮಠದ ಅಜಾತ ಶಂಭುಲಿಂಗ ಶಿವಾಚಾರ್ಯ ಸ್ವಾಮಿ, ಬೆಣ್ಣೆಹಳ್ಳಿಯ ಶ್ರೀ ಪಂಚಾಕ್ಷರಿ ಶಿವಾಚಾರ್ಯಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಬಿಚ್ಚುಗಲ್ಲು ಪಂಚಾಕ್ಷರಪ್ಪ, ವೀರಶೈವ ಸಮಾಜದ ಪ್ರಮುಖರಾದ ಮಹಾಲಿಂಗಯ್ಯ (ರಾಜಣ್ಣ), ಅಂಗಡಿ ಶಂಕರ್ ಡಿ.ಕಗ್ಗಲ್, ಬಿ.ಎಂ.ಎರಿಸ್ವಾಮಿ, ಬಲಗುಡ್ಡ ಹೊನ್ನನಗೌಡ, ಮಲ್ಲನಗೌಡ, ದುರುಗೇಶ ಉಪ್ಪಾರ ಸುದ್ದಿಗೋಷ್ಠಿಯಲ್ಲಿದ್ದರು.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ