ರಾಮನಗರ: ನೆಟ್ಕಲ್ ಯೋಜನೆ ಅಡಿಯಲ್ಲಿ ಎರಡು ವಾರ್ಡುಗಳಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾಗಿರುವ ಮನೆಗಳಿಗೆ ದಿನದ 24 ಗಂಟೆಯೂ ಕಾವೇರಿ ನೀರು ಪೂರೈಸುವ ಕಾರ್ಯವನ್ನು ನಗರದ ಎಲ್ಲ ವಾರ್ಡುಗಳಿಗೂ ವಿಸ್ತರಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.
ನಗರದ 27ನೇ ವಾರ್ಡಿನ ವ್ಯಾಪ್ತಿಗೆ ಬರುವ ವಿವೇಕಾನಂದ ನಗರ ಮತ್ತು ರಾಯರದೊಡ್ಡಿ ಬಡಾವಣೆಯಲ್ಲಿ ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು. ಅಲ್ಲಿ ಯಶಸ್ವಿಯಾದ ಬಳಿಕ 25ನೇ ವಾರ್ಡಿನ ಮಂಜುನಾಥನಗರ ಮತ್ತು ಕೋಡಿಪುರ ಬಡಾವಣೆಗಳಲ್ಲಿ ನಡೆಸಿದ ಪ್ರಾಯೋಗಿಕ ಪರೀಕ್ಷೆಯೂ ಯಶಸ್ವಿಯಾಗಿದೆ ಎಂದರು.
ಕಡ್ಡಾಯ ನೀರಿನ ಬಿಲ್ ಪಾವತಿಸಿ:ಎರಡು ವಾರ್ಡಿನ ಜನರು ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿರುವುದಕ್ಕೆ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ದಿನದ 24 ಗಂಟೆಯೂ ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನು ಎಲ್ಲ ವಾರ್ಡುಗಳಿಗೂ ವಿಸ್ತರಿಸಲು ಉದ್ದೇಶಿಸಲಾಗಿದೆ. ಇದರ ಹಿಂದೆ ಜಲಮಂಡಳಿ ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಲ ಮಂಡಳಿ ಎಇಇ ಪುಟ್ಟಯ್ಯ ಮಾತನಾಡಿ, ಈ ಭಾಗದಲ್ಲಿ ಸುಮಾರು 2 ಸಾವಿರ ಮನೆಗಳಿದ್ದು, 1100 ಕೊಳಾಯಿ ಸಂಪರ್ಕಗಳಿದ್ದವು. ಇಲ್ಲಿಗೆ 40 ಲಕ್ಷ ಲೀಟರ್ ನೀರಿನ ಅವಶ್ಯಕತೆ ಇತ್ತು. ಆದರೀಗ ನೆಟ್ಕಲ್ ಯೋಜನೆ ಅನುಷ್ಠಾನಗೊಂಡು ಪ್ರತಿ ಮನೆಗೆ ಕೊಳಾಯಿ ಸಂಪರ್ಕ ಕಲ್ಪಿಸಿದ ಬಳಿಕ 20 ಲಕ್ಷ ಲೀಟರ್ ನೀರು ಸಾಕಾಗಿದೆ. ಪೋಲಾಗುತ್ತಿದ್ದ ಸುಮಾರು 20 ಲಕ್ಷ ಲೀಟರ್ ನೀರನ್ನು ಉಳಿತಾಯ ಮಾಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮುತ್ತುರಾಜ್, ಆಯುಕ್ತ ಜಯಣ್ಣ, ಜಲಮಂಡಳಿ ಜೆಇ ಶಿವರಾಜ್ ಮತ್ತಿತರರು ಹಾಜರಿದ್ದರು.
ರಾಮನಗರದ ಮಂಜುನಾಥನಗರ ಬಡಾವಣೆಯಲ್ಲಿ ದಿನದ 24ಗಂಟೆ ಕುಡಿಯುವ ನೀರು ಪೂರೈಕೆಯನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮತ್ತು ಜಲಮಂಡಳಿ ಎಇಇ ಪುಟ್ಟಯ್ಯ ಪರಿವೀಕ್ಷಣೆ ಮಾಡಿದರು.