ಕನ್ನಡಪ್ರಭವಾರ್ತೆ ತೀರ್ಥಹಳ್ಳಿತಾಲೂಕಿನ ಸರ್ಕಾರಿ ಜೆಸಿ ಆಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 220 ಮಂದಿ ಸಿಬ್ಬಂದಿ ಪೈಕಿ 113 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 62 ಸಿಬ್ಬಂದಿ ಕೊರತೆ ಇದ್ದು 32 ಹೊರಗುತ್ತಿಗೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಅನಿಕೇತನ್ ತಿಳಿಸಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಹಾರ್ಟ್ ಅಟ್ಯಾಕ್‍ನಂತ ತುರ್ತು ಚಿಕಿತ್ಸೆ ಅಗತ್ಯದ ಸಂದರ್ಭಗಳಲ್ಲಿ ರೋಗಿಯ ಜೀವ ರಕ್ಷಣೆಗೆ ಪ್ರಾಶಸ್ತ್ಯ ನೀಡುವ ಸಲುವಾಗಿ ಸರ್ಕಾರಿ ಆಸ್ಪತ್ರೆಯ ಆ್ಯಂಬುಲೆನ್ಸ್ ವಾಹನಗಳ ಕೆಲವೊಂದು ನಿಬಂಧನೆಗಳನ್ನು ಸರ್ಕಾರ ಸಡಿಲಗೊಳಿಸಬೇಕು. ಗ್ರಾಮೀಣ ಭಾಗದಲ್ಲಿ ಕುಡಿವ ನೀರಿನ ಗುಣಮಟ್ಟದ ತಪಾಸಣೆ ಬಗ್ಗೆ ಗ್ರಾಪಂ ಪಿಡಿಒಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರು ಆದೇಶಿಸಿದರು. ಕಳಪೆ ದರ್ಜೆ ನೀರನ್ನು ಬಳಸಿ ಐಸ್ ಕ್ರೀಮ್ ಮಾರಾಟ ಮಾಡುವವರ ಬಗ್ಗೆ ಗಮನ ಹರಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಆ್ಯಂಬುಲೆನ್ಸ್ ನಿಯಮ ಸಡಿಲ ಅಗತ್ಯ:ಆ್ಯಂಬುಲೆನ್ಸ್ ವಾಹನಗಳಿಗೆ ವ್ಯಾಪ್ತಿ ನಿಗದಿ ಪಡಿಸಿದ ಫಲವಾಗಿ ಈಚೆಗೆ ಹೊಸನಗರ ತಾಲೂಕಿನ ನಗರದ ಓರ್ವ ರೋಗಿ ಸಕಾಲಕ್ಕೆ ಆಸ್ಪತ್ರೆ ತಲುಪಲಾಗದೇ ದಾರಿ ಮಧ್ಯೆ ಮೃತನಾದ ಘಟನೆ ನಡೆಯುತ್ತಿದೆ. ಹಾರ್ಟ್ ಅಟ್ಯಾಕ್‍ನಂತ ತುರ್ತು ಚಿಕಿತ್ಸೆ ಅಗತ್ಯದ ಸಂದ ರ್ಭಗಳಲ್ಲಿ ರೋಗಿಯ ಜೀವ ರಕ್ಷಣೆಗೆ ಪ್ರಾಶಸ್ತ್ಯ ನೀಡುವ ಸಲುವಾಗಿ ಸರ್ಕಾರಿ ಆಸ್ಪತ್ರೆಯ ಆ್ಯಂಬುಲೆನ್ಸ್ ವಾಹನಗಳ ಕೆಲವೊಂದು ನಿಬಂಧನೆಗಳನ್ನು ಸರ್ಕಾರ ಸಡಿಲಗೊಳಿಸಬೇಕಿದೆ ಎಂದು ತಿಳಿಸಿದರು.
ಶಿಕ್ಷಕರ ಕೊರತೆ ನೀಗಿಸಿ: ತಾಲೂಕಿನಲ್ಲಿ ಪ್ರಾಥಮಿಕ ತರಗತಿಗಳಲ್ಲಿ 105, ಪ್ರೌಡಶಾಲೆಗಳಿಗೆ 41 ಶಿಕ್ಷಕರ ಕೊರತೆ ಇದೆ. ಜೈಪುರ ಮಳಲಿ ಸೇರಿ 3 ಕಿರಿಯ ಪ್ರಾಥಮಿಕ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಸಾಧ್ಯತೆಯಿದೆ. ಸಮವಸ್ತ್ರ ಪೂರೈಕೆಯಾಗಿದ್ದು ಶೇ.85 ರಷ್ಟು ಪಠ್ಯ ಪುಸ್ತಕ ಬಂದಿದೆ. ಶಿಕ್ಷಣ ಕ್ಷೇತ್ರ ಸಂಪನ್ಮೂಲ ಕಚೇರಿ ಯಾವುದೇ ಕ್ಷಣದಲ್ಲಿ ಬೀಳುವ ಸ್ಥಿತಿಯಲ್ಲಿದೆ. ಇಲಾಖೆಗೆ ವಾಹನದ ತೀರಾ ಅಗತ್ಯವಿದೆ ಎಂದು ಬಿಇಒ ವೈ.ಗಣೇಶ್ ತಿಳಿಸಿದರು. ತಾಲೂಕಿನಲ್ಲಿ ಗಾಂಜಾ ಸೇವನೆ ಹೆಚ್ಚುತ್ತಿದ್ದು ವಿದ್ಯಾರ್ಥಿಗಳು ಮತ್ತು ಯುವಕರು ಹೆಚ್ಚು ವ್ಯಸನಿಗಳಾಗುತ್ತಿದ್ದಾರೆ ಎಂದು ಇನ್ಸ್‌ಪೆಕ್ಟರ್ ಅಶ್ವಥ್‍ಗೌಡ ತಿಳಿಸಿದರು. ಗೃಹಜ್ಯೋತಿ ಯೋಜನೆಯಲ್ಲಿ ಮೇ 24 ರವರೆಗೆ 1,08,75,984 ರೂ ಸಬ್ಸಿಡಿ ನೀಡಲಾಗಿದೆ ಎಂದು ಮೆಸ್ಕಾಂ ಎಇಇ ಪ್ರಶಾಂತ್ ತಿಳಿಸಿದರು. ವೇದಿಕೆಯಲ್ಲಿ ತಾಪಂ ಆಡಳಿತಧಿಕಾರಿ ಗಣೇಶ್, ಇಒ ಎಂ.ಶೈಲಾ, ತಹಸೀಲ್ದಾರ್ ಜಕ್ಕನಗೌಡರ್ ಇದ್ದರು.