ಡಿ.23, 24ಕ್ಕೆ ಲಿಂಗಾಯತ ಮಹಾಸಭಾದ 24ನೇ ಅಧಿವೇಶನ

KannadaprabhaNewsNetwork | Published : Oct 7, 2023 2:16 AM

ಸಾರಾಂಶ

ದಾವಣಗೆರೆಯ ಎಂಬಿಎ ಕಾಲೇಜು ಮೈದಾನದಲ್ಲಿ ಆಯೋಜನೆ: ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

* ದಾವಣಗೆರೆಯ ಎಂಬಿಎ ಕಾಲೇಜು ಮೈದಾನದಲ್ಲಿ ಆಯೋಜನೆ: ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ೨೪ನೇ ಮಹಾ ಅಧಿವೇಶನ ಡಿ. 23 ಮತ್ತು 24 ರಂದು ದಾವಣಗೆರೆಯ ಎಂಬಿಎ ಕಾಲೇಜು ಮೈದಾನದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಸಚಿವ ಈಶ್ವರ್ ಖಂಡ್ರೆ ಹೇಳಿದರು.

ಎಂಬಿಎ ಕಾಲೇಜು ಆವರಣದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಡಿಸೆಂಬರ್‌ನಲ್ಲಿ ನಡೆಯಬೇಕಿರುವ 24 ನೇ ಮಹಾ ಅಧಿವೇಶನ ಕಳೆದ ವರ್ಷವೇ ನಡೆಯಬೇಕಿತ್ತು. ಆದರೆ, ಕೋವಿಡ್ ಮತ್ತು ಸಾರ್ವತ್ರಿಕ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಜರುಗಲಿಲ್ಲ. ಈಗ ಡಿ. 23 ಮತ್ತು 24 ಕ್ಕೆ ಹಮ್ಮಿಕೊಳ್ಳಲು ಶುಕ್ರವಾರ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಹಾಸಭಾ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಪದಾಧಿಕಾರಿಗಳು, ಮುಖಂಡರೆಲ್ಲರೂ ಸೇರಿ ಚರ್ಚೆ ನಡೆಸಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಈ ಬಾರಿ 2 ದಿನಕ್ಕೆ ಸೀಮಿತ:

ಪ್ರತಿ 5 ವರ್ಷಕ್ಕೊಮ್ಮೆ ಮಹಾಸಭಾದ ಮಹಾ ಅಧಿವೇಶನ ನಡೆಸಲಾಗುತ್ತದೆ. ಪ್ರಪಂಚಾದಾದ್ಯಂತ ಇರುವ ಎಲ್ಲಾ ವೀರಶೈವ ಲಿಂಗಾಯತ ಸಮಾಜದವರು ಒಂದು ಕಡೆ ಸೇರಿಸಿ ಒಂದುಗೂಡಿಸಿ, ಸ್ವಾಮೀಜಿಗಳಿಗೂ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರಿಗೂ ಮಹಾ ಅಧಿವೇಶನಕ್ಕೆ ಆಹ್ವಾನಿಸಲಾಗುತ್ತದೆ. ಪ್ರತಿ ಬಾರಿಯೂ 3 ದಿವಸ ಅಧಿವೇಶನ ನಡೆಯುತ್ತಿತ್ತು. ಈ ಬಾರಿ ಎರಡು ದಿನಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ಹೇಳಿದರು.

ರೈತ, ಯುವ ಅಧಿವೇಶನ:

ಮಹಾ ಅಧಿವೇಶನ ಯಶಸ್ವಿಗೊಳಿಸಲು ಈಗಾಗಲೇ ವಿವಿಧ ಸಮಿತಿಗಳ ರಚಿಸಲು ತೀರ್ಮಾನಿಸಿದ್ದೇವೆ. ಮಹಿಳಾ ಗೋಷ್ಠಿ, ಯುವ ಅಧಿವೇಶನ, ರೈತರ ಅಧಿವೇಶನ ಸೇರಿ ಇತರೆ ವಿಚಾರಗಳು ಅಧಿವೇಶನದಲ್ಲಿ ಚರ್ಚೆಗೊಳಪಡುತ್ತವೆ. ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಸೇರಿ ಕೆಲವು ನಿರ್ಣಯಗಳ ಅಂಗೀಕಾರ ಮಾಡಲು ನಿರ್ಧರಿಸಲಾಗುವುದು. ವೀರಶೈವ ಲಿಂಗಾಯತರು ಅಧಿವೇಶನದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಅಧಿವೇಶನದಲ್ಲಿ ಕೈಗೊಂಡ ನಿರ್ಣಯಗಳನ್ನು ಸರ್ಕಾರಕ್ಕೂ ಸಲ್ಲಿಸಲಾಗುವುದು. ಹಿಂದೆ ಆಗಿರುವ ನಿರ್ಣಯಗಳಲ್ಲಿ ಬಹುತೇಕ ಜಾರಿಗೆ ಬಂದಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಉಪಾಧ್ಯಕ್ಷರಾದ ಎನ್‌.ತಿಪ್ಪಣ್ಣ, ಅಥಣಿ ವೀರಣ್ಣ, ಮಹಾಸಭಾದ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್, ಎಸ್‌.ಎಸ್‌.ಗಣೇಶ, ಬಿ.ಸಿ.ಉಮಾಪತಿ, ಅಣಬೇರು ರಾಜಣ್ಣ, ವಿನಯ್‌ ಕುಲಕರ್ಣಿ, ಸೇರಿ ಸಮಾಜದ ಮುಖಂಡರು, ಪಾಲ್ಗೊಂಡಿದ್ದರು.

Share this article