ದ.ಕ. ಜಿಲ್ಲೆಗೆ 10 ಮೊಂಟೆಸರಿ ಸೇರಿ 25 ಅಂಗನವಾಡಿ: ಹೆಬ್ಬಾಳ್ಕರ್‌

KannadaprabhaNewsNetwork | Published : Jul 14, 2024 1:33 AM

ಸಾರಾಂಶ

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಸಕ್ತ ಸಾಲಿನ ರಾಜ್ಯ ಪ್ರಶಸ್ತಿಯನ್ನು ಕರಾವಳಿ ಲೇಖಕಿಯರ ವಾಚಕಿಯರ ಸಂಘಕ್ಕೆ ನೀಡುವುದಾಗಿಯೂ ಸಚಿವೆ ಈ ಸಂದರ್ಭ ಘೋಷಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಜಿಲ್ಲೆಗೆ 10 ಸರ್ಕಾರಿ ಮೊಂಟೆಸರಿ ಸೇರಿದಂತೆ 25 ಅಂಗನವಾಡಿಗಳನ್ನು ಮಂಜೂರು ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್‌ ಹೇಳಿದ್ದಾರೆ.

ನಗರದ ಉರ್ವಾಸ್ಟೋರ್‌ ನಲ್ಲಿ ಶನಿವಾರ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ನವೀಕೃತ ಸಾಹಿತ್ಯ ಸದನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಸಕ್ತ ಸಾಲಿನ ರಾಜ್ಯ ಪ್ರಶಸ್ತಿಯನ್ನು ಕರಾವಳಿ ಲೇಖಕಿಯರ ವಾಚಕಿಯರ ಸಂಘಕ್ಕೆ ನೀಡುವುದಾಗಿಯೂ ಈ ಸಂದರ್ಭ ಘೋಷಿಸಿದರು.

ಜಿಲ್ಲೆಗೆ 14 ಹೊಸ ಅಂಗನವಾಡಿ ಘೋಷಣೆಯಾಗಿದೆ. ಒಟ್ಟು 25 ಅಂಗನವಾಡಿಗಳನ್ನು ಜಿಲ್ಲೆಗೆ ಘೋಷಿಸುತ್ತಿದ್ದು, ಅದರಲ್ಲಿ 10 ಮೊಂಟೆಸರಿಗಳು ಸೇರಿದ್ದು, ಅಂಗನವಾಡಿಯೊಂದಕ್ಕೆ ತಲಾ 20 ಲಕ್ಷ ರು. ನೀಡಲಾಗುತ್ತದೆ ಎಂದರು.ಕರಾವಳಿ ಲೇಖಕಿಯರು ಮತ್ತು ವಾಚಕಿಯರ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಅವರು, ಮಹಿಳಾ ಲೇಖಕಿಯರ ಜೊತೆ ವಾಚಕಿಯರನ್ನು ಸೇರಿಸಿಕೊಂಡು ಸಂಘ ಮಾಡಿದ್ದು ಕಂಡು ವಿಶೇಷ ಎನ್ನಿಸಿತು ಎಂದರು.

ಮಹಿಳೆ ಎಂದರೆ ಸಂಘರ್ಷ. ಮಹಿಳೆಯರು ತಮ್ಮ ಅಸ್ತಿತ್ವಕ್ಕೆ ಹೋರಾಟ ಮಾಡುವುದು ಸ್ವಾತಂತ್ರ ಬಂದು ಇಷ್ಟುವರ್ಷಗಳ ನಂತರವೂ ಮುಂದುವರಿದಿದೆ. ಸಾಮೂಹಿಕ ಅತ್ಯಾಚಾರ, ಬಾಲಗರ್ಭಿಣಿ, ದೌರ್ಜನ್ಯ ಇದೆಲ್ಲವನ್ನೂ ಸಮಾಜದಲ್ಲಿ ನಾವು ಕಾಣುತ್ತಿದ್ದೇವೆ. ಆದರೆ ಮಹಿಳೆ ಮಾನಸಿಕ ಸದೃಢತೆ ಹೊಂದಿರುವವಳು. ಅದರಿಂದಾಗಿಯೇ ಒಲಿಂಪಿಕ್ಸ್‌, ಶಿಕ್ಷಣದಲ್ಲಿ ಮಹಿಳೆ ಮುಂದೆ ಇದ್ದಾಳೆ. ಹಾಗಿದ್ದರೂ ರಾಜಕೀಯದಲ್ಲಿ ನಮ್ಮ ಹಾಜರಾತಿಗೆ ಇನ್ನೂ ಒತ್ತು ಹೇಳುವ ಪ್ರಸಂಗ ಇನ್ನೂ ಸಮಾಜದಲ್ಲಿದೆ. ಆ ನಿಟ್ಟಿನಲ್ಲಿ ಇಂತಹ ಸಂಘಗಳ ಕಾರ್ಯಾಚರಣೆಗಳು ಪೂರಕ ಎಂದರು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಅಂಗನವಾಡಿಗಳ ಬಾಡಿಗೆ ಕಟ್ಟದಲ್ಲಿವೆ. ನಗರ ವ್ಯಾಪ್ತಿಯಲ್ಲಿ 30 ಅಂಗನವಾಡಿಗಳ ಬಾಡಿಗೆ ಕಟ್ಟದಲ್ಲಿವೆ. ಆರು ಕಟ್ಟಡಗಳ ಕಾಮಗಾರಿ ನಡೆಯುತ್ತಿದೆ. ಈ ಬಗ್ಗೆ ಗಮನ ಹರಿಸುವಂತೆ ಆಗ್ರಹಿಸಿದರು.ಸಂಸದ ಕ್ಯಾ. ಬ್ರಿ ಜೇಶ್‌ ಚೌಟ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಡಾ. ಶ್ರೀನಾಥ್‌ ಎಂ. ಪಿ. , ಎಂಆರ್‌ಪಿಎಲ್‌ ಅಧಿಕಾರಿ ಮೀನಾಕ್ಷಿ , ಪಾಲಿಕೆ ಸದಸ್ಯ ಗಣೇಶ್‌, ಸಂಘದ ಅಧ್ಯಕ್ಷೆ ಜ್ಯೋತಿ ಚೇಳೆಯಾರು, ಇಂದಿರಾ ಹಾಲಂಬಿ ಮತ್ತಿತರರಿದ್ದರು.ಡಾ. ಸುಧಾರಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುಳಾ ನಾಯಕ್‌ ನಿರೂಪಿಸಿದರು............................ಮಹಿಳೆಯನ್ನು ಸಶಕ್ತಗೊಳಿಸಲು ಗ್ರಹಲಕ್ಷ್ಮಿ, ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ. ಗೃಹಲಕ್ಷ್ಮೀ ರಾಜಕೀಯ ದುರುದ್ದೇಶಕ್ಕಾಗಿ ಎಂದಿಗೂ ಬಳಕೆಯಾಗದು.

-ಲಕ್ಷ್ಮೀ ಹೆಬ್ಬಾಳ್ಕರ್‌, ಸಚಿವೆ

Share this article