ಸರ್ಕಾರಿ ಅಧಿಕಾರಿಗಳು ಕಾಂಗ್ರೆಸ್ ಕೈಗೊಂಬೆ ಅಲ್ಲ: ಶಾಸಕ ಭೀಮಣ್ಣ ನಾಯ್ಕ

KannadaprabhaNewsNetwork | Published : Jul 14, 2024 1:33 AM

ಸಾರಾಂಶ

ಸರ್ಕಾರಿ ಅಧಿಕಾರಿಗಳು ಕಾಂಗ್ರೆಸ್‌ನ ಕೈಗೊಂಬೆಯಾಗಿದ್ದಾರೆ. ಅಧಿಕಾರದಲ್ಲಿ ಕಾಂಗ್ರೆಸ್‌ನ ಮರಿಪುಡಾರಿಗಳು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದು, ಸಂಸದರಾಗಿ, ರಾಜ್ಯದ ಹಿರಿಯ ರಾಜಕಾರಿಣಿಯಾಗಿ ಅವರ ಹೇಳಿಕೆ ಶೋಭೆತರುವುದಿಲ್ಲ.

ಕನ್ನಡಪ್ರಭ ವಾರ್ತೆ ಶಿರಸಿ

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸರ್ಕಾರದಲ್ಲಿ ಮಂತ್ರಿಯಾಗಿದ್ದವರು. ಹಿರಿಯ ರಾಜಕಾರಿಣಿಯಾಗಿ ಇಲ್ಲಸಲ್ಲದ ಆರೋಪ ಮಾಡುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಸರ್ಕಾರಿ ಅಧಿಕಾರಿಗಳು ಕಾಂಗ್ರೆಸ್ ಕೈಗೊಂಬೆಯಾಗಿಲ್ಲ. ಅವರ ಹೇಳಿಕೆಯು ಸರ್ಕಾರಿ ನೌಕರರಿಗೆ ಅವಮಾನ ಮಾಡಿದಂತಾಗಿದೆ. ನೀಡಿದ ಹೇಳಿಕೆಯನ್ನು ವಾಪಸ್ ಪಡೆದು ಕ್ಷಮೆ ಯಾಚಿಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಶನಿವಾರ ನಗರದ ಶಾಸಕರ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.

ಸರ್ಕಾರಿ ಅಧಿಕಾರಿಗಳು ಕಾಂಗ್ರೆಸ್‌ನ ಕೈಗೊಂಬೆಯಾಗಿದ್ದಾರೆ. ಅಧಿಕಾರದಲ್ಲಿ ಕಾಂಗ್ರೆಸ್‌ನ ಮರಿಪುಡಾರಿಗಳು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದು, ಸಂಸದರಾಗಿ, ರಾಜ್ಯದ ಹಿರಿಯ ರಾಜಕಾರಿಣಿಯಾಗಿ ಅವರ ಹೇಳಿಕೆ ಶೋಭೆತರುವುದಿಲ್ಲ. ಶಿಕ್ಷಣ ಮಂತ್ರಿಗಳಾಗಿ ಜಿಲ್ಲೆಯನ್ನು ಪತಿನಿಧಿಸಿದ್ದ ಕ್ಷೇತ್ರದಲ್ಲಿ ಶಾಲೆಯ ಪರಿಸ್ಥಿತಿ ಯಾವ ರೀತಿಯಲ್ಲಿದೆ ಎಂಬುದನ್ನು ವಿಶ್ವೇಶ್ವರ ಹೆಗಡೆ ನೋಡಲಿ. ಈಗ ಶಾಲೆಯ ಕಟ್ಟಡ ದುರಸ್ತಿಗೆ ಶಾಸಕರ ಅನುದಾನ ಬಳಕೆ ಮಾಡಲಾಗುತ್ತಿದೆ. ಶೌಚಾಲಯಗಳ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನೊಬ್ಬರ ಕುರಿತು ಟೀಕೆ ಮಾಡುವ ಮೊದಲು ವಿಚಾರ ಮಾಡಬೇಕಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಕಳೆದ ಅವಧಿಯಲ್ಲಿ ೫ ವರ್ಷ ಅಧಿಕಾರ ನಡೆಸಿ, ಕಪ್ಪು ಚುಕ್ಕೆ ಇಲ್ಲದ ಮುಖ್ಯಮಂತ್ರಿ ಎಂದು ಜನರು ಹೇಳಿದ್ದಾರೆ. ಈ ಕಾರಣದಿಂದ ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅತ್ಯಧಿಕ ಸ್ಥಾನ ನೀಡಿದ್ದಾರೆ ಎಂದು ಹೇಳಿದರು.

ಮುಡಾದ ವ್ಯವಹಾರ ನಡೆಯುವ ಸಂದರ್ಭದಲ್ಲಿ ಯಾವ ಸರ್ಕಾರ ಇತ್ತು ಎಂಬುದನ್ನು ಅರಿತು ಪ್ರತಿಭಟನೆ ಮಾಡಬೇಕು. ಕಾಂಗ್ರೆಸ್ ಸರ್ಕಾರ ಮತ್ತು ಸಿದ್ಧರಾಮಯ್ಯ ವಿರುದ್ಧ ಪ್ರತಿಭಟನೆ ಮಾಡುವ ನೈತಿಕೆತೆ ಬಿಜೆಪಿಗೆ ಇಲ್ಲ. ಅಧಿಕಾರ ಹಾಗೂ ಹಣದ ದಾಹಕ್ಕಾಗಿ ಎಂತೆಂಥ ಹಗರಣ ಮಾಡಿದ್ದಾರೆ. ಯಡಿಯೂರಪ್ಪ ಜೈಲಿಗೆ ಹೋಗಿಲ್ವ? ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ತನಿಖೆಯ ನಂತರ ಸತ್ಯಾಂಶ ಹೊರಬರಲಿದೆ. ಅನಾವಶ್ಯಕವಾಗಿ ಇಲ್ಲಸಲ್ಲದ ಆರೋಪ ಮಾಡುವುದನ್ನು ಬಿಡಲಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಶಿರಸಿ ಹಳೆ ಬಸ್ ನಿಲ್ದಾಣದ ಕಟ್ಟಡ ಕಾಮಗಾರಿಯನ್ನು ಗುತ್ತಿಗೆ ಪಡೆದ ಕಂಪೆನಿಗೆ ಹಣ ಬಿಡುಗಡೆಯಾಗದ ಕಾರಣ ನನೆಗುದಿದೆ ಬಿದ್ದಿತ್ತು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಳಿ ತೆರಳಿ, ಅನುದಾನ ಒದಗಿಸುವಂತೆ ವಿನಂತಿಸಿದ ಮೇರೆಗೆ ಹಣ ನೀಡಿ, ಕಾಮಗಾರಿ ಆರಂಭಿಸಲಾಗಿದೆ. ಒಳಾಂಗಣ ಕ್ರೀಡಾಂಗಣಕ್ಕೆ ₹೫ ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಪಂಡಿತ ಸಾರ್ವಜನಿಕ ಆಸ್ಪತ್ರೆಗೂ ಹಣ ಒದಗಿಸಿದ್ದೇನೆ ಎಂದ ಅವರು, ಕುಮಟಾ-ಶಿರಸಿ, ಹಾವೇರಿ-ಶಿರಸಿ ರಸ್ತೆಯ ಸಮಸ್ಯೆ ಬಗೆಹರಿಸುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿಯಾಗಿ ವಿನಂತಿಸಿದ್ದೇನೆ. ನಮ್ಮ ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿವೆ. ಅದನ್ನು ಲೋಕಸಭಾ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಗಮನಸೆಳೆಯಲಿ ಜಿಪಿಎಸ್ ಆಗಿಸುವ ಅತಿಕ್ರಮಣ ಭೂಮಿ ಮಾಲೀಕರಿಗೆ ರಕ್ಷಣೆ ಹಾಗೂ ಮಂಜೂರಿಗೆ ಧ್ವನಿ ಎತ್ತಿ ಎಂದು ವಿನಂತಿ ಮಾಡಿದ್ದೇನೆ ಎಂದರು.

ಬೆಲೆ ಏರಿಕೆ, ಕೇಂದ್ರದ ಬಿಜೆಪಿ ಸರ್ಕಾರದ ದರ್ಪದಿಂದ ಕಾಂಗ್ರೆಸ್ ಪರ ಜನರು ಮತ ಚಲಾಯಿಸಿ, ಪ್ರಬಲ ವಿರೋಧ ಪಕ್ಷವನ್ನಾಗಿ ಮಾಡಿದ್ದಾರೆ. ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಸೋಲಿನ ಹೊಣೆಯನ್ನು ನಾವೇ ಹೊರಬೇಕಾಗಿದೆ. ಮುಂದಿನ ದಿನ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಸಭೆಯಲ್ಲಿ ಭರವಸೆ ನೀಡಿದ್ದೇನೆ. ಜನ ನೀಡಿದ ತೀರ್ಮಾನಕ್ಕೆ ನಾವು ತಲೆಬಾಗಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ, ಪ್ರಮುಖರಾದ ಎಸ್.ಕೆ.ಭಾಗ್ವತ್, ಅಬ್ಬಾಸ ತೋನ್ಸೆ, ದೀಪಕ ಹೆಗಡೆ ದೊಡ್ಡೂರು, ಜ್ಯೋತಿ ಪಾಟೀಲ ಇದ್ದರು.ಅಭಿವೃದ್ಧಿಗೆ ಬದ್ಧ

ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಬದ್ಧನಿದ್ದೇನೆ. ನನ್ನ ಕ್ಷೇತ್ರದಲ್ಲಿ ಯಾರ ಹಸ್ತಕ್ಷೇಪಕ್ಕೂ ಅವಕಾಶವಿಲ್ಲ. ಅವಕಾಶ ನೀಡುವುದೂ ಇಲ್ಲ.

ಭೀಮಣ್ಣ ನಾಯ್ಕ, ಶಾಸಕ

Share this article