
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕಳೆದ ಮೇ 16 ರಂದು ಕಸಾಪ ತಾಲೂಕು ಮಹಿಳಾ ಘಟಕ ಬೆಂಗಳೂರಿನ ವೈದೇಹಿ ಆಸ್ಪತ್ರೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 14 ವರ್ಷದೊಳಗಿನ ಮಕ್ಕಳಿಗೆ ಆಯೋಜಿಸಿದ್ದ ಹೃದಯ ಆರೋಗ್ಯ ತಪಾಸಣಾ ಶಿಬಿರಕ್ಕೆ ಜಿಲ್ಲೆಯೂ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಮಕ್ಕಳನ್ನು ಮಕ್ಕಳ ತಜ್ಞರು ಮತ್ತು ಹೃದ್ರೋಗ ತಜ್ಞ ಡಾ. ಗೋವಿಂದರಾಜ್ ನೇತೃತ್ವದ ತಂಡ ನಿರಂತರ ಪರಿಶೀಲನೆ ನಡೆಸಿದಾಗ ಸುಮಾರು 35ಕ್ಕೂ ಹೆಚ್ಚು ಹೃದ್ರೋಗವಿರುವ ಮಕ್ಕಳು ಪತ್ತೆಯಾಗಿದ್ದರು.
ಹೃದ್ರೋಗದಿಂದ ಬಳಲುತ್ತಿರುವ ಮಕ್ಕಳ ಪೋಷಕರನ್ನು ಸಂಪರ್ಕಿಸಿ ಅವರ ಚಿಕಿತ್ಸೆ ಮಾಹಿತಿಯನ್ನು ಕಸಾಪ ತಂಡ ನೀಡಿತ್ತು. ಇದರೊಂದಿಗೆ ತಪಾಸಣೆ ಜವಾಬ್ದಾರಿ ಹೊತ್ತಿದ್ದ ವೈದೇಹಿ ಆಸ್ಪತ್ರೆಯವರನ್ನು ಸಂಪರ್ಕಿಸಿ ಜಿಲ್ಲೆಯ ಅಷ್ಟೂ ಮಕ್ಕಳಿಗೆ ಹೃದ್ರೋಗಕ್ಕೆ ಉಚಿತ ಹೆಚ್ಚಿನ ಶಸ್ತ್ರಚಿಕಿತ್ಸೆ ಹಾಗೂ ಹಲವು ಬಗೆಯ ಚಿಕಿತ್ಸೆ ಕೊಡಿಸಲು ಮನವೊಲಿಸಿದ್ದರು.ಆ ಹಿನ್ನೆಲೆಯಲ್ಲಿ ಶನಿವಾರ ನಗರದ ಮಲ್ಲೆಗೌಡ ಸರ್ಕಾರ ಆಸ್ಪತ್ರೆ ಮಕ್ಕಳ ವಿಭಾಗದ ಆವರಣದಲ್ಲಿ 9 ತಿಂಗಳ ಹಸುಗೂಸಿನಿಂದ ಹಿಡಿದು 14 ವರ್ಷವರೆಗಿನ ಸುಮಾರು ಹೃದ್ರೋಗ ಇರುವ 25 ಮಕ್ಕಳನ್ನು ಪೋಷಕರ ಜತೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಯಿತು.