ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವಕ್ಕೆ ₹25 ಕೋಟಿ ಹಣ: ಎಚ್.ಕೆ. ಪಾಟೀಲ

KannadaprabhaNewsNetwork |  
Published : Nov 06, 2024, 01:19 AM IST
ಪಾಟೀಲ | Kannada Prabha

ಸಾರಾಂಶ

ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಆಚರಣೆಗೆ ಸರ್ಕಾರ ₹25 ಕೋಟಿ ನೀಡಲಿದ್ದು, ಅಗತ್ಯಬಿದ್ದರೆ ಹೆಚ್ಚುವರಿ ಅನುದಾನ ಕೂಡ ನೀಡಲಿದೆ ಎಂದು ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಆಚರಣೆಗೆ ಸರ್ಕಾರ ₹25 ಕೋಟಿ ನೀಡಲಿದ್ದು, ಅಗತ್ಯಬಿದ್ದರೆ ಹೆಚ್ಚುವರಿ ಅನುದಾನ ಕೂಡ ನೀಡಲಿದೆ ಎಂದು ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನ ಆಚರಣೆ ಮೂಲಕ ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಇನ್ನಷ್ಟು ಪ್ರಚುರಪಡಿಸಲು ಹಾಗೂ ಮನೆ ಮನೆಗೆ ಗಾಂಧೀಜಿ ಸಿದ್ಧಾಂತಗಳನ್ನು ತಲುಪಿಸುವ ಉದ್ದೇಶ ಗಾಂಧೀ ಭಾರತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದನ್ನು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಿಸಲು ಬೆಳಗಾವಿಯಲ್ಲಿ ಜಂಟಿ ಅಧಿವೇಶನ ನಡೆಸಲು ಹಾಗೂ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ಗಾಂಧೀಜಿ ತತ್ವಾದರ್ಶಗಳ ಬಗ್ಗೆ ಅಪಾರ ಹೆಮ್ಮೆ ಹೊಂದಿರುವ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಅವರನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಬರಾಕ್ ಒಬಾಮಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರವನ್ನೂ ಬರೆದಿದ್ದಾರೆ. ಅವರು ಬರುವ ದಿನಾಂಕ ನೋಡಿಕೊಂಡು ಜಂಟಿ ಅಧಿವೇಶನದ ದಿನಾಂಕ ಫಿಕ್ಸ್‌ ಮಾಡಲಾಗುವುದು ಎಂದು ಹೇಳಿದರು. ಅಲ್ಲದೆ, ಅಧಿವೇಶನಕ್ಕೆ ಸಾಕ್ಷಿಯಾದ ಸ್ಥಳಗಳಿಗೆ ಭೇಟಿ ನೀಡಿ, ವಿಸ್ತೃತವಾಗಿ ಚರ್ಚಿಸಿದ ಬಳಿಕ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಗಡಿ ವಿವಾದ ಮುಗಿದ ಅಧ್ಯಾಯ:

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯವಾಗಿದೆ. ಗಡಿ ವಿವಾದವೇ ಇಲ್ಲ. ಗಡಿ ವಿವಾದ ಇದೆ ಎಂದು ಯಾರು ಹೇಳ್ತಾರೆ. ಬಿಜೆಪಿಗರಿಗೆ ಹೇಗೆ ಚುನಾವಣೆ ಬಂದಾಗ ವಕ್ಫ್‌, ರಾಮಮಂದಿರ ನೆನಪಾಗುತ್ತದೆಯೋ ಅದೇ ರೀತಿ ಚುನಾವಣೆ ಬಂದಾಗ ಮಹಾರಾಷ್ಟ್ರ ನಾಯಕರು ಗಡಿ ವಿವಾದ ಬಗ್ಗೆ ಮಾತನಾಡುತ್ತಾರೆ. ಎಂಇಎಸ್‌ನವರು ಕರಾಳ ದಿನ ಮಾಡುತ್ತಾರೆ ಎಂದರೆ ಗಡಿ ವಿವಾದ ಇದೆ ಎಂಬ ಅರ್ಥವಲ್ಲ ಎಂದು ತಿಳಿಸಿದರು.

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ನೋಟಿಸ್ ನೀಡಿದ್ದು, ಅ.6ರಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲಿದ್ದಾರೆ. ತನಿಖೆ ನಡೆಸುವಂತೆ ಕೋರ್ಟ್ ಆದೇಶ ನೀಡಿದೆ. ಬಿಜೆಪಿಯವರಿಗೆ ಕೋರ್ಟ್ ‌ಹಾಗೂ ಲೋಕಾಯುಕ್ತರ ಮೇಲೆ ವಿಶ್ವಾಸ ಇಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ , ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್. ಶಂಕರ, ಸದಸ್ಯ ಎನ್.ಆರ್. ವಿಶುಕುಮಾರ್, ಶಾಸಕ ಆಸಿಫ್(ರಾಜು) ಸೇಠ್ ಮತ್ತಿತರರು ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ