ಕನ್ನಡದ ಜತೆ ಕೊಂಕಣಿಯೂ ಬೆಳೆಯಲಿ: ಮಮತಾ ಸಾಗರ್‌

KannadaprabhaNewsNetwork | Published : Nov 6, 2023 12:46 AM

ಸಾರಾಂಶ

ಕನ್ನಡದ ಜತೆ ಕೊಂಕಣಿಯೂ ಬೆಳೆಯಲಿ: ಮಮತಾ ಸಾಗರ್ರ್‌

ಕನ್ನಡಪ್ರಭ ವಾರ್ತೆ ಮಂಗಳೂರು

ಭಾಷೆ ಎನ್ನುವುದು ಒಂದು ಸಂಸ್ಕೃತಿ, ಪರಂಪರೆಯಾಗಿರುವುದರಿಂದ ಕರ್ನಾಟಕದಲ್ಲಿ ಕನ್ನಡ ಭಾಷೆಯ ಜತೆಗೆ ಕೊಂಕಣಿ ಭಾಷೆಯನ್ನು ಕೂಡ ಬೆಳೆಸಬೇಕು ಎಂದು ಎಂದು ಹಿರಿಯ ಸಾಹಿತಿ ಮಮತಾ ಜಿ. ಸಾಗರ್‌ ಹೇಳಿದ್ದಾರೆ.

ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಅಖಿಲ ಭಾರತೀಯ ಕೊಂಕಣಿ ಪರಿಷತ್‌ ವತಿಯಿಂದ ಆಯೋಜಿಸಲಾಗಿರುವ 25ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ‘ಸಾಹಿತ್ಯ ಮತ್ತು ಸಾಮಾಜಿಕ ಜವಾಬ್ದಾರಿ’ ಎನ್ನುವ ವಿಚಾರದ ಕುರಿತು ಅವರು ಮಾತನಾಡಿದರು.

ಭಾರತೀಯ ಭಾಷೆಗಳಲ್ಲಿ ವೈವಿಧ್ಯತೆಗಳು ಇರುವುದರಿಂದಲ್ಲೇ ಏಕತೆ ಹುಟ್ಟಿದೆ. ವೈವಿಧ್ಯತೆ ಇಲ್ಲದಿರುತ್ತಿದ್ದರೆ ಏಕತೆ ಇರಲು ಸಾಧ್ಯವಿಲ್ಲ ಎಂದ ಅವರು, ಇತರ ಭಾಷೆಗಳ ಸಾಹಿತ್ಯಕ್ಕಿಂತ ಕೊಂಕಣಿ ಸಾಹಿತ್ಯ ಬಹಳಷ್ಟು ಭಿನ್ನವಾಗಿದೆ. ಕೊಂಕಣಿಯನ್ನು ಒಂದೊಂದು ರಾಜ್ಯದಲ್ಲಿ ಒಂದೊಂದು ಲಿಪಿ, ಭಾಷೆಯಲ್ಲಿ ಮಾತನಾಡುತ್ತಾರೆ ಹಾಗೂ ಸಾಹಿತ್ಯ ಬರೆಯುತ್ತಾರೆ. ಗೋವಾ, ಕರ್ನಾಟಕ, ಕೇರಳದಲ್ಲಿ ಕೊಂಕಣಿ ಸಾಹಿತ್ಯದಲ್ಲಿ ವೈವಿಧ್ಯಮಯ ಲಿಪಿಯಿಂದ ಹಿಡಿದು ಸ್ಥಳೀಯ ಭಾಷೆಯ ಪ್ರಭಾವ ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ ಎಂದರು.

ಗೋವಾ ಕೊಂಕಣಿಯಲ್ಲಿ ಅಲ್ಲಿನ ಸಂಸ್ಕೃತಿ, ಪೋಚ್‌ರ್ಗೀಸರ ಇತಿಹಾಸದ ಛಾಪು, ಪ್ರವಾಸೋದ್ಯಮದಿಂದಾಗಿ ಅಲ್ಲಿನ ಕೊಂಕಣಿ ಸಾಹಿತ್ಯ ಕೊಂಚ ಭಿನ್ನಹಾದಿಯಲ್ಲಿದ್ದರೆ, ಕೇರಳ ಭಾಗದಲ್ಲಿ ಎಡಪಂಥೀಯ ಸಿದ್ಧಾಂತ, ಅಲ್ಲಿನ ರಾಜಕೀಯ ಬೆಳವಣಿಗೆಗಳು ಕೊಂಕಣಿಯ ಸಾಹಿತ್ಯದ ಮೇಲೆ ಪ್ರಭಾವ ಬೀರಿವೆ. ಇದೇ ರೀತಿ ಕರ್ನಾಟಕದಲ್ಲಿ ಬೇರೆಯೇ ರೀತಿಯ ಪ್ರಭಾವ ಕೊಂಕಣಿ ಸಾಹಿತ್ಯದ ಮೇಲೆ ಬಿದ್ದಿದೆ ಎಂದು ಮಮತಾ ಜಿ. ಸಾಗರ್ ಹೇಳಿದರು.

ಸಮ್ಮೇಳನದ ಅಧ್ಯಕ್ಷೆ ಹೇಮಾ ನಾಯ್ಕ್‌ ಮಾತನಾಡಿ, ಕಳೆದ ಎರಡು ದಿನಗಳಲ್ಲಿ ನಡೆದ ಕೊಂಕಣಿ ಸಮ್ಮೇಳನದಲ್ಲಿ ಯುವ ಜನತೆ ಜಾಸ್ತಿಯಾಗಿ ಕಾಣಿಸಿಕೊಳ್ಳುವ ಮೂಲಕ ಕೊಂಕಣಿ ಸಾಹಿತ್ಯ ಮತ್ತಷ್ಟು ಸಮೃದ್ಧವಾಗಿ ಬೆಳೆಯುತ್ತದೆ ಎನ್ನುವ ನಂಬಿಕೆ ಬಲವಾಗಿದೆ. ಕೊಂಕಣಿ ಭಾಷೆ, ಸಾಹಿತ್ಯವನ್ನು ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯ ಎಂದರು.

ಈ ಸಂದರ್ಭ ಡಾ.ಕಸ್ತೂರಿ ಮೋಹನ್‌ ಪೈ (ಕೊಂಕಣಿ ಶಿಕ್ಷಣ), ರೋನ್‌ ರೋಚ್‌ ಕಾಸಿಯಾ (ಕೊಂಕಣಿ ಸಾಹಿತ್ಯ) ಹಾಗೂ ಕುಮಟಾದ ಡಾ. ಶಿವರಾಮ ಕಾಮತ್‌ (ಕೊಂಕಣಿ ಚಳವಳಿ) ಅವರನ್ನು ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು.

ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಮೈಕಲ್‌ ಡಿಸೋಜ, ಉಪಾಧ್ಯಕ್ಷ ಗೋಕುಲ್‌ ದಾಸ್‌ ಪ್ರಭು, ಅಖಿಲ ಭಾರತ ಕೊಂಕಣಿ ಪರಿಷತ್‌ನ ಕಾರ್ಯಾಧ್ಯಕ್ಷ ಚೇತನ್‌ ಆಚಾರ್ಯ, ಖಜಾಂಚಿ ಶೀರಿಸ್‌ ಪೈ ಇದ್ದರು. ಸಮ್ಮೇಳನ ಸ್ವಾಗತ ಸಮಿತಿ ಕಾರ್ಯದರ್ಶಿ ಟೈಟಸ್‌ ನೊರೊನ್ಹಾ ವಂದಿಸಿದರು. ಮನೋಜ್‌ ಫರ್ನಾಂಡೀಸ್‌ ನಿರೂಪಿಸಿದರು.

Share this article