ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ನಿರಂತವಾಗಿ ಅನ್ಯಾಯವಾಗುತ್ತಿರುವುದನ್ನು ವಿರೋಧಿಸಿ ಪ್ರತ್ಯೇಕ ರಾಜ್ಯದ ಬಗ್ಗೆ ಶಾಸಕರಾದ ರಾಜು ಕಾಗೆ ರಾಷ್ಟ್ರಪತಿಗಳಿಗೆ ಬರೆದಿರುವ ಪತ್ರ ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿ ಮಾಡಿತ್ತು. ಅದರ ಮುಂದುವರಿದ ಭಾಗವಾಗಿ ಇದೀಗ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಶಾಸಕರು ಪಕ್ಷಾತೀತವಾಗಿ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಲು ಮುಂದಾಗಿದ್ದಾರೆ ಎಂದು ತಿಳಿಸಿದರು.
ಈ 26 ಶಾಸಕರು ಡಿ.8ರಂದು ಒಂದು ಸಭೆ ಮಾಡಲಿದ್ದು, ಈಗಾಗಲೇ 11 ಜನ ಪ್ರತ್ಯೇಕ ರಾಜ್ಯದ ಪರ ಧ್ವನಿ ಎತ್ತುವುದಾಗಿ ಹೇಳಿದ್ದಾರೆ. ಉಳಿದವರು ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಅನ್ಯಾಯವಾಗುತ್ತಿರುವ ಬಗ್ಗೆ ಮಾತನಾಡಲಿದ್ದಾರೆ. ಆದರೆ, ಡಿ.8ರ ಸಭೆಯಲ್ಲಿ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡಲು ಮುಂದೆ ಬರುವವರ ಸಂಖ್ಯೆ ಹೆಚ್ಚಳವಾಗಬಹುದು. ಇವರೆಲ್ಲ ಡಿ.11ರಂದು ಸದನದಲ್ಲಿ ಧ್ವನಿ ಎತ್ತಲಿದ್ದಾರೆ. ಹೀಗೆಯೇ ಅನೇಕ ವಿಧಾನ ಪರಿಷತ್ ಸದಸ್ಯರು ಸಹ ಈ ಹೊರಾಟ ಬೆಂಬಲಿಸಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.ಈಗಾಗಲೇ ನಾವು ಉತ್ತರ ಕರ್ನಾಟಕ ಭಾಗದಲ್ಲಿ ಜನಾಭಿಪ್ರಾಯ ಸಂಗ್ರಹಿಸಿದ್ದೇವೆ. ನ.20ರವರೆಗೆ ಒಟ್ಟು 1,48,91,346 ಜನ ಪ್ರತ್ಯೇಕ ರಾಜ್ಯದ ಪರವಾಗಿ ಲಿಖಿತವಾಗಿ ಬೆಂಬಲ ವ್ಯಕ್ತಪಡಿಸಿ ಸಹಿ ಮಾಡಿದ್ದಾರೆ. ನಮ್ಮ ಭಾಗಕ್ಕೆ ಪತ್ಯೇಕ ರಾಜ್ಯ ಕೇಳುತ್ತಿರುವುದು ರಾಜ್ಯ ವಿರೋಧಿ ಚಟುವಟಿಕೆಯಲ್ಲ. ನಮಗೆ ಆಗುತ್ತಿರುವ ಅನ್ಯಾಯದಿಂದ ಸಿಡಿದೆದ್ದು ನಾವು ಕೇಳುತ್ತಿರುವ ಹಕ್ಕು ಇದಾರೆ. ಮೊದಲು ಉಮೇಶ ಕತ್ತಿ ಪ್ರತ್ಯೇಕ ರಾಜ್ಯದ ಅಭಿಪ್ರಾಯ ಹೊಂದಿದ್ದರು. ಈಗ ರಾಜು ಕಾಗೆ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.
ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಹತ್ತು ಕಚೇರಿಗಳನ್ನು ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸುವಂತೆ ಹತ್ತು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. 2019ರಲ್ಲೇ ಸ್ಥಳಾಂತರಕ್ಕೆ ಆದೇಶವಾಗಿದೆ. ಆದರೆ, ಒಂದೇ ಒಂದು ಕಚೇರಿಯೂ ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರವಾಗಿಲ್ಲ. ಅಧಿಕಾರಿ ಸ್ಥಳಾಂತರ ಮಾಡದೇ ಹೋದಲ್ಲಿ ಮುಂದೆ ನಾವು ಬೆಂಗಳೂರಿನ ವಿಧಾನಸೌಧ ದ್ವಂಸಗೊಳಿಸಿದರೆ ಕಚೇರಿ ಸ್ಥಳಾಂತರ ಮಾಡಬಹುದೇನೋ? ಇಷ್ಟು ಕ್ರೂರವಾದ ಉಗ್ರ ಹೋರಾಟದ ನಿರ್ಧಾರ ಮಾಡುವ ಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.