ಕನ್ನಡಪ್ರಭ ವಾರ್ತೆ ನಾಗಮಂಗಲ
ಪ್ರತಿ ವರ್ಷ ಜರುಗುವ ಸರ್ವಾಲಂಕೃತ ವೈಭವಯುಕ್ತ ಲಕ್ಷದೀಪೋತ್ಸವದ ಅಂಗವಾಗಿ ಶುಕ್ರವಾರ ಬೆಳಗಿನಿಂದ ಪಟ್ಟಣದ ಶ್ರೀಸೌಮ್ಯಕೇಶವಸ್ವಾಮಿಗೆ ವಿಶೇಷ ಅಲಂಕಾರ, ತೋಮಾಲೆ ಸೇವೆ, ಅಷ್ಟೋತ್ತರ, ಸಹಸ್ರನಾಮ ಸೇವೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು.
ಸಂಜೆ 7ಗಂಟೆಗೆ ದೇವಸ್ಥಾನದ ಮುಂಭಾಗದಲ್ಲಿನ 48 ಅಡಿ ಎತ್ತರದ ಗರುಡ ಕಂಭಕ್ಕೆ ದೀಪ ಹಚ್ಚುವ ಮೂಲಕ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ದೀಪ ಹಚ್ಚುವ ಮೂಲಕ ಶ್ರೀಸೌಮ್ಯಕೇಶವನಿಗೆ ತಮ್ಮ ಭಕ್ತಿ ಭಾವ ಸಮರ್ಪಿಸಿದರು. ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ:
ಗುಜರಾತ್‌ನಲ್ಲಿರುವ ಸೋಮನಾಥ, ನಾಗೇಶ್ವರ, ಆಂಧ್ರಪ್ರದೇಶದಲ್ಲಿರುವ ಮಲ್ಲಿಕಾರ್ಜುನ, ಮಧ್ಯಪ್ರದೇಶದ ಮಹಾಂಕಾಳೇಶ್ವರ ಮತ್ತು ಓಂಕಾರೇಶ್ವರ, ಉತ್ತಾರಾಖಂಡದ ಖೇದಾರನಾಥ, ಮಹಾರಾಷ್ಟ್ರದ ಭೀಮಾಶಂಕರ, ತ್ರಯಂಬಕೇಶ್ವರ ಮತ್ತು ದರ್ಶನೇಶ್ವರ, ಉತ್ತರಪ್ರದೇಶದ ವಿಶ್ವನಾಥ, ಜಾರ್ಖಂಡ್‌ನ ವೈದ್ಯನಾಥ, ತಮಿಳುನಾಡಿನ ರಾಮೇಶ್ವರ ಜ್ಯೋತಿರ್ಲಿಂಗಗಳನ್ನು ಸಹಸ್ರಾರು ಮಂದಿ ದರ್ಶನ ಮಾಡಿ ಭಕ್ತಿಭಾವ ಸಮರ್ಪಿಸಿದರು.
ಮಹಾ ಶಿವರಾತ್ರಿ ಪ್ರಯುಕ್ತ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಶಿವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ, ಶಿವನಾಮ ಸ್ಮರಣೆಯೊಂದಿಗೆ ಭಜನೆ ಹಾಗೂ ಅನ್ನಸಂತರ್ಪಣಾ ಕಾರ್ಯಕ್ರಮ ಜರುಗಿದವು.
ತಾಲೂಕಿನ ಆದಿಚುಂಚನಗಿರಿಯ ಶ್ರೀಕಾಲಭೈರವೇಶ್ವರಸ್ವಾಮಿ ಸೇರಿದಂತೆ ಪಡುವಲಟ್ಟಣ ಗ್ರಾಮದ ಶ್ರೀ ಕಾನನ ಬ್ರಹ್ಮಲಿಂಗೇಶ್ವರ, ದೊಡ್ಡಜಕ್ಕನಹಳ್ಳಿಯ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನ, ಕಲ್ಲಿನಾಥಪುರ ಗ್ರಾಮದ ಶ್ರೀ ಕಲ್ಲೇಶ್ವರಸ್ವಾಮಿ, ದಂ.ಜಕ್ಕನಹಳ್ಳಿ ಗ್ರಾಮದ ಶ್ರೀ ಮಹಾಗುರು ಶನೇಶ್ವರ, ಅರಕೆರೆ ಗ್ರಾಮದ ಶ್ರೀ ಶನೇಶ್ವರ, ವಜ್ರಮುನೇಶ್ವರ, ಲಕ್ಷ್ಮೀದೇವಿ ದೇವಸ್ಥಾನ, ದಾಸಗೋಳಪುರ ಗ್ರಾಮದ ಶ್ರೀ ಶನಿದೇವರ ದೇವಸ್ಥಾನ ಮತ್ತು ಬೀರೇಶ್ವರಪುರ ಗ್ರಾಮದ ಶ್ರೀ ದೊಡ್ಡಯ್ಯಸ್ವಾಮಿ, ಹುಲ್ಲೇಕೆರೆ, ತೊಳಲಿ, ಬೆಟ್ಟದಮಲ್ಲೇನಹಳ್ಳಿ, ಕರಡಹಳ್ಳಿ, ಹೊಣಕೆರೆ, ತಟ್ಟಹಳ್ಳಿ, ದೇವಲಾಪುರ, ಬಿಂಡಿಗನವಿಲೆ, ಬೆಳ್ಳೂರು ಮತ್ತು ಬೋಗಾದಿಯ ಈಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮತ್ತು ಭಜನಾ ಕಾರ್ಯಕ್ರಮ ನಡೆದವು.