ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 27 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ತಾಲೂಕಿನ ಇ. ಬೇವಿನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದಿದೆ.ಶಾಲೆಯಲ್ಲಿ ಮಕ್ಕಳು ಮಧ್ಯಾಹ್ನ ಬಿಸಿಯೂಟ ಸೇವನೆ ಮಾಡುವಾಗ ವಿದ್ಯಾರ್ಥಿಯೊಬ್ಬರ ತಟ್ಟೆಯಲ್ಲಿ ಹಲ್ಲಿ ಕಾಣಿಸಿಕೊಂಡಿದೆ. ಆಗ ವಿದ್ಯಾರ್ಥಿ ಅಡುಗೆ ಸಿಬ್ಬಂದಿಗೆ ತಿಳಿಸಿದ್ದಾನೆ. ತಕ್ಷಣ ಮಕ್ಕಳಿಗೆ ಊಟ ಮಾಡದಂತೆ ತಿಳಿಸಿದ್ದಾರೆ. ಆಗಲೇ ಮಕ್ಕಳು ಎರಡ್ಮೂರು ತುತ್ತು ಊಟ ಮಾಡಿದ್ದರು ಎನ್ನಲಾಗಿದೆ.
ಊಟದ ಬಳಿಕ ಮಕ್ಕಳು ಅಸ್ವಸ್ಥರಾಗಿರುವುದು ಗ್ರಾಮದ ಪೋಷಕರ ಗಮನಕ್ಕೆ ಬಂದಿದೆ. ಆಗ ಶಾಲೆಗೆ ಭೇಟಿ ನೀಡಿ ಘಟನೆ ಬಗ್ಗೆ ವಿಚಾರಿಸಿದಾಗ ಗೊತ್ತಾಗಿದೆ. ಗಾಬರಿಗೊಂಡ ಪೋಷಕರು ಕೂಡಲೇ ಮಕ್ಕಳನ್ನು ಹಲುವಾಗಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದ್ಯೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.ಅಸ್ವಸ್ಥಗೊಂಡ 27 ವಿದ್ಯಾರ್ಥಿಗಳ ಪೈಕಿ 3 ಮಕ್ಕಳಿಗೆ ವಾಂತಿಯಾಗಿದೆ. ಅವರನ್ನು ಆಸ್ಪತ್ರೆಯಲ್ಲಿ ಉಳಿಸಿಕೊಂಡು ಉಳಿದವರಿಗೆ ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಕಳಿಸಲಾಗಿದೆ ಎಲ್ಲರೂ ಗುಣಮುಖವಾಗಿದ್ದಾರೆ ಎಂದು ವೈದ್ಯ ಹೇಮಂತ ತಿಳಿಸಿದ್ದಾರೆ.
ಡಿವೈಡರ್‌ಗೆ ಬೈಕ್ ಡಿಕ್ಕಿ- ಇಬ್ಬರ ಸಾವು, ಒಬ್ಬರಿಗೆ ಗಾಯ:ಸಂಡೂರು ತಾಲೂಕಿನ ವಡ್ಡು ಗ್ರಾಮದ ಬಳಿಯಲ್ಲಿ ಬುಧವಾರ ರಾತ್ರಿ ಬೈಕ್ ಸ್ಕಿಡ್ ಆಗಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್‌ನಲ್ಲಿದ್ದ ಕುರೆಕುಪ್ಪ ಗ್ರಾಮದ ತ್ರಿವಿಕ್ರಮ (೧೯) ಹಾಗೂ ತೋರಣಗಲ್ಲು ಗ್ರಾಮದ ರವಿತೇಜ (೧೯) ಎಂಬ ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಬೈಕ್‌ನಲ್ಲಿದ್ದ ಮತ್ತೊಬ್ಬ ಸವಾರ ಕುರೆಕುಪ್ಪ ಗ್ರಾಮದ ಬಸವನಗೌಡ (೧೯)ನಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಜಿಂದಾಲ್ ಸಿಆರ್‌ಎಂ ಪ್ಲಾಂಟ್‌ನಲ್ಲಿ ವಾಹನದ ಟೈರ್ ಸ್ಪೋಟ, ಕಾರ್ಮಿಕ ಸಾವು:
ಸಂಡೂರು ತಾಲೂಕಿನ ತೋರಣಗಲ್ಲಿನಲ್ಲಿರುವ ಜಿಂದಾಲ್ ಸಿಆರ್‌ಎಂ-೨ ಪ್ಲಾಂಟ್‌ನಲ್ಲಿ ಕಬ್ಬಿಣದ ರೋಲ್ ಮಿಷನ್ ದುರಸ್ತಿ ಮಾಡುವ ಸಂದರ್ಭದಲ್ಲಿ ವಾಹನದ ಟೈರ್ ಸ್ಪೋಟಗೊಂಡ ಪರಿಣಾಮ, ಕಾರ್ಮಿಕ ಸಯ್ಯದ್ ಅಸ್ಲಾಂ (೪೦) ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ನಡೆದಿದೆ.ಮೃತ ವ್ಯಕ್ತಿಯ ಸಹೋದರ ಮಹಮ್ಮದ್ ಗೌಸ್ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.