ಹಂಪಿ ವಿವಿಯಿಂದ ಸ್ಥಳೀಯ ಚರಿತ್ರೆ ಕುರಿತು ವಿಚಾರ ಸಂಕಿರಣ
ಕೂಡ್ಲಿಗಿ ತಾಲೂಕಿನಲ್ಲಿ ಸಂಶೋಧನೆಗೆ ಸಾಕಷ್ಟು ಅವಕಾಶಗಳಿವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ.ವಿ. ಪರಮಶಿವಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಎಸ್‌ಎವಿಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ವಿಭಾಗದಿಂದ ಆಯೋಜಿಸಿದ್ದ ಕೂಡ್ಲಿಗಿ ತಾಲೂಕಿನ ಸ್ಥಳೀಯ ಚರಿತ್ರೆ ವಿವಿಧ ಆಯಾಮಗಳು ಕುರಿತಾದ ರಾಜ್ಯಮಟ್ಟದ ಒಂದು ದಿನದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೂಡ್ಲಿಗಿ ತಾಲೂಕಿನಲ್ಲಿ ಆದಿಮಾನವ ವಾಸಿಸುತ್ತಿದ್ದ ಶಿಲಾಯುಗ ಕಾಲದ, ಸಹಸ್ರಾರು ವರ್ಷಗಳ ಇತಿಹಾಸ ಹುದುಗಿದೆ. ಇದಕ್ಕೆ ಕುಮತಿ ಮತ್ತು ಹುಲಿಕುಂಟೆ ಗುಡೇಕೋಟೆ ಸುತ್ತಮುತ್ತ ದೊರೆತಿರುವ ಆದಿಮಾನವನ ಸಮಾಧಿ ಕಲ್ಲುಗಳು, ಗುಹೆಗಳೇ ಸಾಕ್ಷಿಯಾಗಿವೆ ಎಂದು ಹೇಳಿದರು.ಕೂಡ್ಲಿಗಿ ತಾಲೂಕಿನಲ್ಲಿ ಗುಡೇಕೋಟೆ, ಜರ್ಮಲಿ ಹಾಗೂ ಬೀರಲಗುಡ್ಡ (ವೀರನದುರ್ಗ) ಮೂರು ಪಾಳೇಗಾರರು ಆಳ್ವಿಕೆ ನಡೆಸಿದ್ದಾರೆ. ಪಾಳೇಗಾರರ ಇತಿಹಾಸದ ಜತೆಗೆ ತಾಲೂಕಿನಲ್ಲಿ ಬುಡಕಟ್ಟು ಸಮುದಾಯ ಜನತೆಯ ಅನೇಕ ಸಂಸ್ಕೃತಿಗಳು ಸಹ ಇತಿಹಾಸ ಹೇಳುತ್ತವೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಮಾತನಾಡಿ, ಕೂಡ್ಲಿಗಿ ತಾಲೂಕು ಅಭಿವೃದ್ಧಿಯಲ್ಲಿ ಹಿಂದುಳಿದಿರಬಹುದು. ಆದರೆ ಐತಿಹಾಸಿಕವಾಗಿ ಶ್ರೀಮಂತವಾಗಿದೆ. ತಾಲೂಕಿನ ಪ್ರತಿಯೊಬ್ಬರೂ, ಅದರಲ್ಲೂ ವಿದ್ಯಾರ್ಥಿಗಳು ಸ್ಥಳೀಯ ಇತಿಹಾಸ ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದರು.