ನಿಸರ್ಗ ಸಂಸ್ಥೆಯ 28ನೇ ವರ್ಷದ ವಾರ್ಷಿಕೋತ್ಸವ

KannadaprabhaNewsNetwork |  
Published : Jul 09, 2025, 12:25 AM IST
50 | Kannada Prabha

ಸಾರಾಂಶ

ವನ್ಯಜೀವಿ ಸಂರಕ್ಷಣೆ ಕಾಯ್ದೆ-1972 ಕಾಯ್ದೆ ಜಾರಿಯಿಂದ ಅರಣ್ಯದಲ್ಲಿ ವಾಸಮಾಡುತ್ತಿದ್ದ ಆದಿವಾಸಿ ಜನರನ್ನು ಬಲವಂತವಾಗಿ ಹೊರಹಾಕಿದ ನಂತರ ಅವರಿಗೆ ಯಾವುದೇ ಪುನರ್ವಸತಿಗಳನ್ನು ಒದಗಿಸಿಕೊಡದೆ ಘೋರ ಅನ್ಯಾಯ

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ

ನಿಸರ್ಗ ಫೌಂಡೇಷನ್ ಸಂಸ್ಥೆಯ 28ನೇ ವಾರ್ಷಿಕೋತ್ಸವವು ಸಂಸ್ಥೆಯ ಆವರಣದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಪ್ರಭು ನಂಜುಂಡಯ್ಯ ಮಾತನಾಡಿ, ಸಂಸ್ಥೆಯ ಸಂಸ್ಥಾಪಕರಾದ ದಿವಂಗತ ನಂಜುಂಡಯ್ಯ ಅವರನ್ನು ಸ್ಮರಿಸುತ್ತಾ, ಸಂಸ್ಥೆಯು 28 ವರ್ಷಗಳನ್ನೂ ಪೂರ್ಣಗೊಳಿಸುವಲ್ಲಿ ಸಂಸ್ಥೆಯ ಸಂಸ್ಥಾಪಕರ ಪಾತ್ರದೊಂದಿಗೆ ನಮ್ಮ ಆದಿವಾಸಿ ಜನರ ಪಾತ್ರ ಅಪಾರವಾದದ್ದು. ಸಂಸ್ಥೆ ಇಷ್ಟು ವರ್ಷ ಬೆಳೆಯಲು ಅನೇಕ ಕಾರ್ಯಕರ್ತರು ಕಾರಣೀಭೂತರಾಗಿದ್ದಾರೆ. ಅವರೆಲ್ಲರನ್ನು ಸ್ಮರಿಸಿಕೊಳ್ಳಬೇಕೆಂದು ತಿಳಿಸಿದರು.

ವನ್ಯಜೀವಿ ಸಂರಕ್ಷಣೆ ಕಾಯ್ದೆ-1972 ಕಾಯ್ದೆ ಜಾರಿಯಿಂದ ಅರಣ್ಯದಲ್ಲಿ ವಾಸಮಾಡುತ್ತಿದ್ದ ಆದಿವಾಸಿ ಜನರನ್ನು ಬಲವಂತವಾಗಿ ಹೊರಹಾಕಿದ ನಂತರ ಅವರಿಗೆ ಯಾವುದೇ ಪುನರ್ವಸತಿಗಳನ್ನು ಒದಗಿಸಿಕೊಡದೆ ಘೋರ ಅನ್ಯಾಯವೆಸಗಿದರು. ನಂತರ ಆದಿವಾಸಿಗಳು ಹಾಗೂ ಸಂಘ ಸಂಸ್ಥೆಗಳ ಹೋರಾಟದ ಫಲವಾಗಿ ಸರ್ಕಾರವು 2006ರಲ್ಲಿ ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೆ ತರಲಾಯಿತು. ಈ ಕಾಯ್ದೆ ಜಾರಿಯಾಗಿ 19 ವರ್ಷ ಕಳೆದರೂ ಅವರಿಗೆ ಸಿಗಬೇಕಾದ ಹಕ್ಕುಗಳು ದೊರಕಿರುವುದಿಲ್ಲ. ಈ ಹಕ್ಕುಗಳನ್ನು ಪಡೆಯಬೆಕಾದರೆ ಎಲ್ಲ ಆದಿವಾಸಿಗಳು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಈ ಹಿನ್ನೆಲೆ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣವಂತರಾಗಿ ಮಾಡಿದರೆ ಮಾತ್ರ ಹಾಡಿಗಳು ಬದಲಾವಣೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಸಂಸ್ಥೆಯು ಆದಿವಾಸಿಗಳೊಟ್ಟಿಗೆ ನಿರಂತರವಾಗಿ ಕೆಲಸ ನಿರ್ವಹಿಸಲಿದ್ದು, ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಗಳನ್ನು ಪಡೆಯಲು ಒಗ್ಗಟ್ಟಿನಿಂದ ಹೊರಾಟಮಾಡಿ ನಿಸರ್ಗ ಫೌಂಡೇಷನ್ ಸಂಸ್ಥೆಯ ಸಂಸ್ಥಾಪಕರಾದ ದಿವಂಗತ ನಂಜುಂಡಯ್ಯರವರ ಕನಸನ್ನು ನನಸು ಮಾಡೋಣ ಎಂದು ಅವರು ತಿಳಿಸಿದರು.

ಬುಡಕಟ್ಟು ಕೃಷಿಕರ ಸಂಘದ ಕಾರ್ಯದರ್ಶಿಗಳಾದ ಡಿ.ಎಂ. ಬಸವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.

ವನವಾಸಿ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ಮಾರನಹಾಡಿ ದೇವಮ್ಮ ಮಾತನಾಡಿ, ನಂಜುಂಡಯ್ಯ ಅವರೊಂದಿಗೆ ಆದಿವಾಸಿಗಳ ಹಕ್ಕುಗಳಿಗಾಗಿ ಹಳ್ಳಿಯಿಂದ ದೆಹಲಿಯವರೆಗೂ ಹೋರಾಟದ ಫಲವಾಗಿ ಅರಣ್ಯಹಕ್ಕು ಕಾಯ್ದೆ ಜಾರಿಯಾಯಿತು ಎಂದರು.

ಮುಖ್ಯಅತಿಥಿಯಾಗಿ ನಿವೃತ್ತ ಡಿ.ಜಿ.ಎಂ. ರಾಮಕೃಷ್ಣ ಮಾತನಾಡಿದರು.

ನಿಸರ್ಗ ಸಂಸ್ಥೆಯಿಂದ ಕುಂಟೇರಿ ಹಾಡಿಯಲ್ಲಿ ನಡೆಯುತ್ತಿರುವ ನಿಸರ್ಗ ಚಿಗುರುಶಾಲೆಯ ಮಕ್ಕಳು ಭಾಗವಹಿಸಿ ಆದಿವಾಸಿಗಳ ಕಲೆ-ಸಂಸ್ಕೃತಿ ಬಿಂಬಿಸುವ ಕೋಲಾಟವನ್ನು ಪ್ರದರ್ಶನ ಮಾಡಿದರು. ನಂತರ ಎಲ್ಲ ಮಕ್ಕಳಿಗೂ ವಾರ್ಷಿಕೋತ್ಸವದ ಅಂಗವಾಗಿ ಕಲಿಕಾ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು. ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷರಾದ ಭೀಮನಹಳ್ಳಿ ರಾಜಣ್ಣ, ಜವರಮ್ಮ, ದೇವಮ್ಮ, ಪಾಪಣ್ಣ, ಕೆಂಪಯ್ಯ, ಉಮೇಶ, ಸಣ್ಣಪ್ಪ, ತಾಯಮ್ಮ, ನಿಸರ್ಗ ಸಂಸ್ಥೆಯ ಚಿಕ್ಕತಿಮ್ಮನಾಯ್ಕ, ಬೈರನಾಯಕ, ಜ್ಯೋತಿ, ರೇಷ್ಮಾ, ತಂಝಿಲಾ ನಾಜ್, ಕನ್ಯಾಕುಮಾರಿ, ಶೃತಿ, ಜಾನಕಿ, ಚಿಗುರು ಶಾಲೆಯ ಮಕ್ಕಳು ಸೇರಿದಂತೆ 40ಕ್ಕೂ ಹೆಚ್ಚು ಆದಿವಾಸಿ ಮುಖಂಡರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ