ಕೊಟ್ಟೂರು: ಪಟ್ಟಣದ ಮುದುಕನಕಟ್ಟೆ, ರೇಣುಕಾ ಬಡಾವಣೆಯಲ್ಲಿನ ಮೂರು ಮನೆಗಳಿಗೆ ಶುಕ್ರವಾರ ಮಧ್ಯರಾತ್ರಿ ಕಳ್ಳರು ಕಳ್ಳತನ ಮಾಡಿ ಪರಾರಿಯಾದರೆ, ಇನ್ನು ಪ್ರತ್ಯೇಕ ಮೂರು ಕಡೆ ಕಳವು ಯತ್ನ ನಡೆದಿದೆ.
ಇದೇ ರಾತ್ರಿ ರಾಜು ಎಂಬುವರ ಮನೆಯಲ್ಲಿನ ₹40 ಸಾವಿರ ಮತ್ತಿತರ ಸಾಮಗ್ರಿಗಳನ್ನು ಅಪಹರಿಸಲಾಗಿದೆ. ಪಟ್ಟಣದ ರೇಣುಕಾ ಬಡಾವಣೆಯಲ್ಲಿನ ಶೀಲವಂತರ ಮಂಜುನಾಥ ಎಂಬವರು ಕುಟುಂಬ ಸಮೇತರಾಗಿ ಬೆಂಗಳೂರಿಗೆ ತೆರಳಿದ್ದ ಅವಧಿಯಲ್ಲಿ ಅವರ ಮನೆಯ ಬೀಗವನ್ನು ಹೊಡೆದು ಮನೆಯಲ್ಲಿನ ಅಲ್ಮಾರದಲ್ಲಿನ 1 ತೊಲೆ ಬಂಗಾರ, ಬೆಳ್ಳಿ ಸಾಮಗ್ರಿ ಮತ್ತು ₹30 ಸಾವಿರ ನಗದನ್ನು ಅಪಹರಿಸಿ ತೆರಳಿದ್ದಾನೆ ಎಂದು ಹೇಳಲಾಗಿದೆ. ಪಟ್ಟಣದ ಈ ಎರಡು ಪ್ರದೇಶದಲ್ಲಿನ ಮತ್ತೆ ಮೂರು ಮನೆಗಳ ಕಳ್ಳತನಕ್ಕೆ ಯತ್ನ ನಡೆದಿದೆ. ಕಳ್ಳತನ ನಡೆದಿರುವ ಮನೆಗಳಲ್ಲಿನ ನಿವಾಸಿಗಳು ಮನೆಗೆ ಬೀಗ ಜಡಿದು ಹೊರ ಹೋದದ್ದನ್ನು ಅರಿತು ಈ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ.
ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿವೈಎಸ್‌ಪಿ ಮಲ್ಲೇಶ್ ದೊಡ್ಡನಾಯ್ಕ, ಸಿಪಿಐ ದುರ್ಗಪ್ಪ, ಪಿಎಸ್‌ಐ ಗೀತಾಂಜಲಿ ಸಿಂಧೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಸಿದರು. ಜಿಲ್ಲಾ ಕೇಂದ್ರದಿಂದ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿದ್ದಾರೆ.ಅನುಮಾನಾಸ್ಪದವಾಗಿ ಕಂಡರೆ ದೂರು ನೀಡಿ:
ಪಟ್ಟಣದ ನಾಗರಿಕರು ಅಪರಿಚಿತರು ತಮ್ಮ ಪ್ರದೇಶಗಳಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದರೆ ಮತ್ತು ಕಳ್ಳತನದ ಮಾಹಿತಿ ದೊರೆತರೆ ಕೂಡಲೇ ಪೊಲೀಸ್ ಸಹಾಯವಾಣಿ 112 ಮತ್ತು 9480805700ಗೆ ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಡಿವೈಎಸ್ಪಿ ಮಲ್ಲೇಶ್ ದೊಡ್ಡನಾಯ್ಕ ಕರೆ ನೀಡಿದ್ದಾರೆ. ಪ್ರಕರಣದಿಂದ ನಾಗರಿಕರು ಭೀತಿಗೊಂಡಿದ್ದಾರೆ.