ಭದ್ರಾ ನೀರು ಹರಿಸೋ ಯೋಜನೆ ಕೈಬಿಡಿ: ಹರೀಶ್‌

KannadaprabhaNewsNetwork |  
Published : Jun 22, 2025, 01:18 AM IST
21ಕೆಡಿವಿಜಿ21-ದಾವಣಗೆರೆಯಲ್ಲಿ ಶನಿವಾರ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ ಜಿಲ್ಲೆಯ ಜೀವನಾಡಿ ಭದ್ರಾ ಬಲದಂಡೆ ನಾಲೆಯನ್ನೇ ಸೀಳಿ ಚಿಕ್ಕಮಗಳೂರು, ತರೀಕೆರೆ, ಹೊಸದುರ್ಗಕ್ಕೆ ಕುಡಿಯುವ ಉದ್ದೇಶಕ್ಕೆ 30 ಕ್ಯುಸೆಕ್ ನೀರು ಹರಿಸುವ ಯೋಜನೆಯನ್ನು ತಕ್ಷಣ‍ವೇ ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ ಒತ್ತಾಯಿಸಿದ್ದಾರೆ.

- ಚಿಕ್ಕಮಗಳೂರು, ತರೀಕೆರೆ, ಹೊಸದುರ್ಗಕ್ಕೆ ನೀರು ಪೂರೈಕೆಗೆ ಆಕ್ಷೇಪ । ಭದ್ರಾ ಬಲದಂಡೆ ನಾಲೆ ಸೀಳಾದರೆ ರೈತರಿಗೆ ಅನ್ಯಾಯ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಜಿಲ್ಲೆಯ ಜೀವನಾಡಿ ಭದ್ರಾ ಬಲದಂಡೆ ನಾಲೆಯನ್ನೇ ಸೀಳಿ ಚಿಕ್ಕಮಗಳೂರು, ತರೀಕೆರೆ, ಹೊಸದುರ್ಗಕ್ಕೆ ಕುಡಿಯುವ ಉದ್ದೇಶಕ್ಕೆ 30 ಕ್ಯುಸೆಕ್ ನೀರು ಹರಿಸುವ ಯೋಜನೆಯನ್ನು ತಕ್ಷಣ‍ವೇ ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಂತ ಗುಪ್ತವಾಗಿ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಈ ಬಗ್ಗೆ ಜೂ.23ರಂದು ಚಿಕ್ಕಮಗಳೂರು ಜಿಪಂ ಕಚೇರಿಯಲ್ಲಿ ಹೊಸದುರ್ಗ, ತರೀಕೆರೆ ಶಾಸಕರ ನೇತೃತ್ವದ ಸಭೆ ಕರೆದಿದ್ದಾರೆ ಎಂದರು.

ವಾಸ್ತವವಾಗಿ ಭದ್ರಾ ನಾಲೆ ವ್ಯಾಪ್ತಿಯ ಶಾಸಕರ ಸಭೆ ಕರೆದು, ಅಭಿಪ್ರಾಯ ಕೇಳಬೇಕಾಗಿತ್ತು. ಆದರೆ, ಸರ್ಕಾರ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಗುಪ್ತವಾಗಿ ಸಕಲ ಕಾರ್ಯ ನಡೆಸಿದೆ. ಭದ್ರಾ ಡ್ಯಾಂನ ಬಫರ್ ಝೋನ್‌ನಲ್ಲೇ ಭದ್ರಾ ಬಲದಂಡೆ ನಾಲೆಯನ್ನೇ ಸೀಳುವ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಅವರು ದೂರಿದರು.

ಹೊನ್ನಾಳಿ, ಹರಪನಹಳ್ಳಿ, ದಾವಣಗೆರೆ, ಚನ್ನಗಿರಿ ಭಾಗದ ಭದ್ರಾ ನಾಲಾ ಅಚ್ಚುಕಟ್ಟು ಕಡೆಯ ಭಾಗದ ರೈತರು ನೀರಿಗಾಗಿ ಹಪಾಹಪಿಸುವ ಸ್ಥಿತಿ ಇದೆ. 2 ದಶಕದಿಂದ ಕೊನೆಯ ಭಾಗದ ರೈತರು ಭದ್ರಾ ನಾಲೆ ನೀರನ್ನೇ ಮರೆಯುವಂತಾಗಿದೆ. ಇಂತಹ ಸ್ಥಿತಿಯಲ್ಲಿ ರಾಜ್ಯ ಸರ್ಕಾರ 30 ಕ್ಯುಸೆಕ್ ನೀರನ್ನು ತರೀಕೆರೆ, ಚಿಕ್ಕಮಗಳೂರು, ಹೊಸದುರ್ಗ ಭಾಗಕ್ಕೆ ಒಯ್ಯಲು ಅನುಮತಿ ನೀಡಿದೆ ಎಂದು ಆರೋಪಿಸಿದರು.

ಈಗಾಗಲೇ ಶೇ.40ರಷ್ಟು ಅಚ್ಚುಕಟ್ಟು ಪ್ರದೇಶ ಕಳೆದುಕೊಂಡ ರೈತರು ಕ್ರಮೇಣ ಹರಪನಹಳ್ಳಿ, ದಾವಣಗೆರೆ, ಹರಿಹರ ತಾಲೂಕಿನ ಜಮೀನುಗಳಿಗೆ ಭದ್ರಾ ನೀರು ಕಣ್ಣೀರಾಗುವುದರಲ್ಲಿ ಯಾವುದೇ ಅನುಮಾನವೂ ಇಲ್ಲ. ಯಾವುದೇ ಕಾರಣಕ್ಕೂ ಭದ್ರಾ ನಾಲೆ ನೀರು ಒಯ್ಯಲು ನಾವು ಬಿಡುವುದಿಲ್ಲ. ಭದ್ರಾವತಿ ಭಾಗದ ರೈತರಿಂದ ಬಂದ ಮಾಹಿತಿ ಆಧರಿಸಿ, ಈ ವಿಷಯ ಎಲ್ಲ ರೈತರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ರೈತರು ಸಭೆ ನಡೆಯುವ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ತಿಳಿಸಿದರು.

ಈಗಾಗಲೇ ಹರಪನಹಳ್ಳಿ, ಹರಿಹರ ತಾಲೂಕಿನ ಅಚ್ಚುಕಟ್ಟು ರೈತರಲ್ಲಿ ಭಯ ಶುರುವಾಗಿದೆ. ಎರಡೂ ತಾಲೂಕಿನ ರೈತರು ಹೋರಾಟದ ಬಗ್ಗೆ ಚರ್ಚೆ ನಡೆಸಿದ್ದಾರೆ. ಹಾಗಾಗಿ ಮೂರೂ ತಾಲೂಕಿನ ರೈತರು ಎಚ್ಚರದಿಂದ ಇರಬೇಕಾಗಿದೆ. ಭದ್ರಾ ಭಾಗದ ರೈತ ಪರ ಹೋರಾಟಗಾರರಾದ ಪ್ರೊ. ಸಿ.ನರಸಿಂಗಪ್ಪ, ಎಸ್.ಎ.ರವೀಂದ್ರನಾಥ ಸೇರಿದಂತೆ ರೈತ ಸಂಘಟನೆಗಳ ಜೊತೆಗೆ ಚರ್ಚಿಸಿ, ಸರ್ಕಾರದ ಯೋಜನೆ ವಿರುದ್ಧ ಬಲವಾದ ಹೋರಾಟ ರೂಪಿಸಲಾಗುವುದು. ಕಡೇ ಭಾಗದ ರೈತರ ಪರಿಸ್ಥಿತಿಯನ್ನು ಸರ್ಕಾರ ಅವಲೋಕಿಸಲಿ. ಎಲ್ಲಾ ವಿಚಾರಗಳನ್ನು ಖುದ್ದಾಗಿ ಪರಿಶೀಲಿಸಿ, ಈ ಭಾಗದ ರೈತರಿಗೆ ನ್ಯಾಯ ಒದಗಿಸಲಿ ಎಂದು ಬಿ.ಪಿ.ಹರೀಶ ಒತ್ತಾಯಿಸಿದರು.

ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಹರಿಹರ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಲಿಂಗರಾಜ ಇತರರು ಇದ್ದರು.

- - -

(ಕೋಟ್‌ ) 2020ರಲ್ಲಿ ಸರ್ಕಾರ ಮಾಡಿದ್ದ ಇಂತಹ ನಿರ್ಧಾರದಿಂದ ಇಂದು ನಮ್ಮ ರೈತರಿಗೆ ತೊಂದರೆಯಾಗುತ್ತಿದೆ. ಸರ್ಕಾರದ ಇಂತಹ ನಿರ್ಧಾರ ರೈತ ವಿರೋಧಿಯಾಗಿದೆ. ಬಲದಂಡೆ ನಾಲೆ ಬಳಿಯೇ ಇಂತಹ ಕಾಮಗಾರಿ ಕೈಗೊಂಡಿದ್ದರಿಂದ ಭದ್ರಾ ಡ್ಯಾಂಗೂ ಅಪಾಯವಾಗಲಿದೆ. ತಕ್ಷಣ‍ವೇ ಈ ಕಾಮಗಾರಿ ಕೈಬಿಡಬೇಕು.

- ಶಾಬನೂರು ಲಿಂಗರಾಜ, ಅಧ್ಯಕ್ಷ, ಭಾರತೀಯ ರೈತ ಒಕ್ಕೂಟ.

- - -

(ಟಾಪ್‌ ಕೋಟ್‌)

ಭದ್ರಾ ಅಚ್ಚುಕಟ್ಟು ರೈತರ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ದಾವಣಗೆರೆ ಬಂದ್‌ಗೆ ಕರೆ ನೀಡಲಾಗುವುದು. ಯಾವುದೇ ಕಾರಣಕ್ಕೂ ಬಲದಂಡೆ ಭಾಗಕ್ಕೆ ನೀರೊಯ್ಯಲು ನಾವು ಬಿಡುವುದಿಲ್ಲ. ಶೀಘ್ರವೇ ರೈತರ ಜೊತೆಗೆ ಚರ್ಚಿಸಿ, ಬಂದ್‌ಗೆ ಕರೆ ನೀಡುವ ಕೆಲಸ ಮಾಡುತ್ತೇವೆ. ಜಿಲ್ಲಾ ಸಚಿವರು, ಸಂಸದರು, ಶಾಸಕರು ಈ ಭಾಗದ ರೈತರ ಹಿತಾಸಕ್ತಿ ಕಾಪಾಡಲು ಮುಂದಾಗಲಿ.

- ಎಸ್.ಎಂ.ವೀರೇಶ ಹನಗವಾಡಿ, ನಿಕಟ ಪೂರ್ವ ಜಿಲ್ಲಾಧ್ಯಕ್ಷ, ಬಿಜೆಪಿ

- - -

-21ಕೆಡಿವಿಜಿ21: ದಾವಣಗೆರೆಯಲ್ಲಿ ಶನಿವಾರ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ