ಗೌರಿ-ಗಣೇಶ ಹಬ್ಬದ ಆಚರಣೆ ವೇಳೆ ರಾಜಧಾನಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸರು ಬಿಗಿ ಬಂದೋಬಸ್ತ್ ಜತೆಗೆ ಕೆಲ ಕಠಿಣ ನಿಯಮಗಳನ್ನು ಜಾರಿ ಮಾಡಿದ್ದು, ಹೆಚ್ಚುವರಿಯಾಗಿ 3000 ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.
-ಅಹಿತಕರ ಘಟನೆ ತಡೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ । ಮದ್ಯಪಾನ ಮಾಡಿ ತೊಂದರೆ ಮಾಡಿದ್ರೆ ಬೀಳುತ್ತೆ ಕೇಸ್
-ವಿಸರ್ಜನೆ ವೇಳೆ ಆರ್‌ಎಎಫ್, ಕೆಎಸ್‌ಆರ್‌ಪಿ ತುಕಡಿ ನಿಯೋಜನೆ । ಹೆಚ್ಚಿನ ಶಬ್ದದಲ್ಲಿ ಡಿಜೆ, ದ್ವನಿವರ್ಧಕ ಬಳಸಿದ್ರೆ ಕ್ರಮ
ಕನ್ನಡಪ್ರಭ ವಾರ್ತೆ ಬೆಂಗಳೂರು
ಗೌರಿ-ಗಣೇಶ ಹಬ್ಬದ ಆಚರಣೆ ವೇಳೆ ರಾಜಧಾನಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸರು ಬಿಗಿ ಬಂದೋಬಸ್ತ್ ಜತೆಗೆ ಕೆಲ ಕಠಿಣ ನಿಯಮಗಳನ್ನು ಜಾರಿ ಮಾಡಿದ್ದು, ಹೆಚ್ಚುವರಿಯಾಗಿ 3000 ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.
ನಗರದ ಎಲ್ಲ ಡಿಸಿಪಿ ವ್ಯಾಪ್ತಿಯಲ್ಲಿ 10 ಸಾವಿರ ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿವೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ, ಮೆರವಣಿಗೆ ವೇಳೆ ಹಾಗೂ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚುವರಿ ಸಿಸಿ ಕ್ಯಾಮೆರಾ ಅಳವಡಿಸಿ ಕಣ್ಗಾವಲು ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪ್ರಮುಖವಾಗಿ 3 ದಿನ, 5 ದಿನ ಹಾಗೂ 7 ದಿನ ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಹೆಚ್ಚುವರಿಯಾಗಿ ಆರ್‌ಎಎಫ್, ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಗಣೇಶ ಪ್ರತಿಷ್ಠಾಪನೆ, ಮಹಾಮಂಡಳಿ ಸೇರಿ ಗಣೇಶ ಮೂರ್ತಿ ಆಯೋಜಕರು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಗಣೇಶ ಮೂರ್ತಿ ವಿಸರ್ಜನೆ ವೇಳೆ ಜಿಬಿಎ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಲವು ಕಡೆ ಕಲ್ಯಾಣಿ, ನೀರಿನ ಟ್ಯಾಂಕ್‌ಗಳ ವ್ಯವಸ್ಥೆ ಮಾಡಲಾಗಿದೆ.
ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಆಯೋಜಕರು ಕಡ್ಡಾಯವಾಗಿ ಸಂಬಂಧಿತ ಇಲಾಖೆಗಳ ಅನುಮತಿ ಪಡೆಯಬೇಕು. ಹಬ್ಬದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಡಿಜೆ ಬಳಕೆಗೆ ಅವಕಾಶವಿಲ್ಲ. ಆದರೆ ನಿಯಮಾನುಸಾರ ನಿಗದಿತ ಡೆಸಿಬಲ್ ಮಿತಿಯೊಳಗೆ ಧ್ವನಿವರ್ಧಕ ವ್ಯವಸ್ಥೆ ಬಳಸಲು ಅವಕಾಶವಿದೆ. ನಿಯಮ ಉಲ್ಲಂಘಿಸಿ ಹೆಚ್ಚಿನ ಶಬ್ದದಲ್ಲಿ ಡಿಜೆ ಬಳಸಿದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ನಗರದ ಪ್ರಮುಖ ಸೂಕ್ಷ್ಮ ಪ್ರದೇಶಗಳು, ಮೆರವಣಿಗೆ ಮಾರ್ಗಗಳು ಹಾಗೂ ಗಣೇಶ ವಿಸರ್ಜನಾ ಸ್ಥಳಗಳ ಮೇಲೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ. ಮೆರವಣಿಗೆಯ ಪ್ರಮುಖ ಜಂಕ್ಷನ್‌ಗಳು ಮತ್ತು ವಿಸರ್ಜನಾ ಸ್ಥಳಗಳಲ್ಲಿ ಹೆಚ್ಚುವರಿ ಸಿಸಿ ಕ್ಯಾಮೆರಾಗಳ ಅಳವಡಿಸಲಾಗಿದ್ದು, ಡ್ರೋನ್‌ಗಳ ಮೂಲಕ ಕಣ್ಗಾವಲು ಇರಿಸಲಾಗುತ್ತದೆ. ಗಣೇಶ ಮೂರ್ತಿಯ ವಿಸರ್ಜನೆಯ ಸಮಯದಲ್ಲಿ ಮಾರ್ಗದ ಕುರಿತು ಮೊದಲೇ ಪೊಲೀಸರಿಗೆ ತಿಳಿಸಬೇಕು ಎಂದು ಸೂಚಿಸಲಾಗಿದೆ.
ವಿಸರ್ಜನಾ ಸ್ಥಳಗಳಾದ ಕಲ್ಯಾಣಿ ಹಾಗೂ ಕೆರೆಗಳ ಬಳಿ ಸೂಕ್ತ ವಿದ್ಯುತ್ ದೀಪಗಳು, ಸಿಸಿ ಕ್ಯಾಮೆರಾಗಳು, ನುರಿತ ಈಜುಗಾರರು ಮತ್ತು ಲೈಫ್ ಜಾಕೆಟ್‌ಗಳ ವ್ಯವಸ್ಥೆ ಮಾಡಲಾಗಿದೆ. ಗಣೇಶ ಪೆಂಡಾಲ್‌ಗಳಲ್ಲಿ ಅಶ್ಲೀಲ ಪ್ರದರ್ಶನಗಳು ಇರಬಾರದು ಮತ್ತು ವಿಸರ್ಜನಾ ಮೆರವಣಿಗೆಗೆ ಯಾರೂ ಮದ್ಯಪಾನ ಮಾಡಿ ಬರಬಾರದು. ಒಂದು ವೇಳೆ ಬಂದು ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಆ ವ್ಯಕ್ತಿ ಜತೆ ಆಯೋಜಕರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ.
ಆಯಾ ಠಾಣಾ ವ್ಯಾಪ್ತಿಯಲ್ಲಿ ಮಫ್ತಿ ಪೊಲೀಸರು, ಹೊಯ್ಸಳ ಸಿಬ್ಬಂದಿ ನಿರಂತರವಾಗಿ ಗಸ್ತು ತಿರುಗಲಿದ್ದಾರೆ. ಪೆಂಡಾಲ್‌ಗಳಲ್ಲಿ ಜೋರು ಶಬ್ಧ ಮಾಡುವ ಧ್ವನಿವರ್ಧಕಗಳನ್ನು ಹಾಕಿಕೊಂಡರೆ ಅವರ ವಿರುದ್ಧವೂ ಕ್ರಮಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
--
ಗೌರಿ-ಗಣೇಶ ಹಬ್ಬದ ನಿಮಿತ್ತ ನಗರದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ನಗರದಲ್ಲಿ ಹೆಚ್ಚುವರಿಯಾಗಿ 3,000 ಸಿಸಿ ಕ್ಯಾಮರಾಗಳನ್ನು ಅಳವಡಿಕೆ ಮಾಡಲಾಗಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ, ಮೆರವಣಿಗೆ ಸಂದರ್ಭದಲ್ಲಿ ಹಾಗೂ ಸೂಕ್ಷ್ಮ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಣ್ಗಾವಲು ಇರಿಸಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.