ಏಕಾಲಕ್ಕೆ 307 ಮಕ್ಕಳಿಂದ ದೇಶಭಕ್ತಿ ಗೀತ ಗಾಯನ

KannadaprabhaNewsNetwork |  
Published : Aug 15, 2026, 02:15 AM IST
ತಿರಂಗಾ 1 | Kannada Prabha

ಸಾರಾಂಶ

307 children sing patriotic songs at a time

-ಎನ್‌ವಿ ಶಿಕ್ಷಣ ಸಂಸ್ಥೆಯ ಮಕ್ಕಳಿಂದ ವಂದೆ ಮಾತರಂ । ಜನಗಣ ಮನ, ಝಂಡಾ ಉಂಚಾ ರಹೇ ಹಮಾರಾ ಗೀತೆಗಳ ಗಾಯನ

--

ಕನ್ನಡಪ್ರಭ ವಾರ್ತೆ ಕಲಬುರಗಿ

ಕೋಟಿಕೋಟಿ ಕಂಠ ಕಲರವ ನಿನಾದ-ಕರವಾಲೇ, ಕೋಟಿ ಕೋಟಿ ಭುಜೈರ್ಧೃತ-ಖರ-ಕರವಾಲೇ

ಅಬಲಾ ಕೇಯನೋ ಮಾ ಏತೋ ಬಲೇ, ಬಹುಬಲ ಧಾರಿಣೀಂ ನಮಾಮಿ ತಾರಿಣೀಂ, ರಿಪುದಲ-ವಾರಿಣೀಂ ಮಾತರಾಮ್.

ಎಂದು ಸೇರಿದ್ದ 307 ಮಕ್ಕಳು ಏಕಕಾಲಕ್ಕೆ ಒಕ್ಕೊರಲಿನಿಂದ, ತುಂಬ ಶಿಸ್ತಿನಿಂದ ತಬಲಾ, ಹಾರ್ಮೋನಿಯಂ ತಾಳಕ್ಕೆ ತಕ್ಕಂತೆ ಸುಶ್ರಾವ್ಯವಾಗಿ ಹಾಡು ಹೇಳಲು ಶುರು ಮಾಡಿದಾಗ ಸೇರಿದ್ದವರ ಮೈ ರೋಮಾಂಚನ.

ಜನಗಣ ಮನ ಅಧಿ ನಾಯಕ ಜಯ ಹೇ... ರಾಷ್ಟ್ರಗೀತೆ ಹೇಳುವಾಗ, ಝಂಢಾ ಉಂಚಾ ರಹ ಹಮಾರಾ, ವಿಜಯಿ ವಿಶ್ವ ತಿರಂಗಾ ಪ್ಯಾರಾ. ಹಾಡುವಾಗ ಸೇರಿದ್ದವರೆಲ್ಲರು ಗೌರವಭಾವದಿಂದ ಭಾರತ ಮಾತೆಯನ್ನು ನಮಿಸಿದರು.

ಶತಮಾನ ಕಂಡ ನೂತನ ವಿದ್ಯಾಲಯ ಶಾಲಾ ಆವರಣ ಈ ದೇಶಭಕ್ತಿ ಸಾರುವಂತಹ ನೋಟಗಳಿಗೆ ಸಾಕ್ಷಿಯಾಯಿತು. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಶಾಲೆಯ ಧ್ವಜಾರೋಹಣದಲ್ಲಿ 307 ಮಕ್ಕಳ ಸಮೂಹ ಗಾಯನಕ್ಕೆ ವೇದಿಕೆ ಸಿದ್ಧವಾಗಿದ್ದು, ಇದು ಶಾಲಾ ಇತಿಹಾಸದಲ್ಲೇ ವಿನೂತನ ಪ್ರಯೋಗವಾಗಿ ಹೊರಹೊಮ್ಮಿದೆ.

ನೂತನ ವಿದ್ಯಾಲಯ ಶಿಕ್ಷಣಗೆ ಇದೀಗ 122 ವರ್ಷ. ಈ ಸಂಸ್ಥೆಯಡಿ ವಿವಿಧ ಶಾಲೆ, ಕಾಲೇಜುಗಳ 307 ಮಕ್ಕಳು ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ವಂದೇ ಮಾತರಂ, ಜನ ಗಣ ಮನ ಹಾಗೂ ಝಂಡಾ ಉಂಚಾ ರಹೇ ಹಮಾರಾ ರಾಷ್ಟ್ರೀಯ ಗೀತೆಗಳನ್ನು ಮೈದಾನದಲ್ಲಿ ನಾಳೆ ಬೆ. 7 ಗಂಟೆಗೆ ಹಾಡುವ ಮೂಲಕ ಸರ್ವರ ಗಮನ ಸೆಳೆಯಲಿದ್ದಾರೆ.

ಆ. 15 ರಂದು ಶಾಲಾವರಣದಲ್ಲಿ ಬೆ.7ಕ್ಕೆ ನಡೆವ ಧ್ವಜಾರೋಹಣದಲ್ಲಿ ಪಾಲ್ಗೊಳ್ಳಲಿರುವ 307 ಮಕ್ಕಳು ತಮ್ಮ ಮಧುರ ಕಂಠದಿಂದ ಏಕಕಾಲಕ್ಕೆ ರಾಷ್ಟ್ರೀಯ ಭಕ್ತಿ ಸ್ಫುರಿಸುವ ಗೀತೆಗಳಿಗೆ ಕಂಠ ನೀಡಲಿದ್ದಾರೆ. ಹೀಗಾಗಿ ಈ ಬಾರಿಯ ಸ್ವಾತಂತ್ರ್ಯ ದಿನೋತ್ಸವದಂದು ವಂದೆ ಮಾತರಂ, ಜನಗಣ ಮನ ಗೀತೆಗಳು ಎಲ್ಲರ ಕಿವಿಗಳಲ್ಲಿ, ಮನದಲ್ಲಿ ಅನುರಣಿಸಲಿವೆ.

ಗ್ರ್ಯಾಂಡ್‌ ರಿಹರ್ಸಲ್‌: ಎನ್‌ವಿ ಕಾಲೇಜಿನ ಸಂಗೀತ ವಿಭಾಗದಿಂದ ಎಲ್ಲಾ ಮಕ್ಕಳಿಗೆ ಕಳೆದ 1 ವಾರದಿಂದ ಗೀತೆಗಳ ಗಾನದ ತರಬೇತಿ ನೀಡಲಾಗಿದೆ. ಸಂಗೀತ ವಿಭಾಗದ ಮುಖ್ಯಸ್ಥ ಮಹೇಶ ಬಡಿಗೇರ ಹಾಗೂ ತಂಡದವರು ಈ ತರೇತಿಯಲ್ಲಿ ಪಾಲ್ಗೊಂಡು ಮಕ್ಕಳು ಹೇಗೆ ಉಚ್ಛಾರಣೆ ಮಾಡಬೇಕು, ಹೇಗೆ ಒಕ್ಕೊರಲಿನಿಂದ ಗೀತೆಗಳಿಗೆ ಧ್ವನಿಯಾಗಬೇಕು ಎಂಬುದನ್ನೆಲ್ಲಾ ವಿವರಿಸಿದ್ದಾರೆ.

ಎನ್‌ವಿ ಪದವಿ ಕಾಲೇಜಿನ ದೇಶಮುಖ ಸಭಾಂಗಣಲ್ಲಿ ಈ ಮಕ್ಕಳನ್ನು ಸೇರಿಸಿ ಸಂಗೀತ ಸಾಥ್‌ ಜೊತೆ ಗಣ್ಯರ ಸಮ್ಮುಖದಲ್ಲಿ ರಾಷ್ಟ್ರಗೀತೆ, ವಂದೇ ಮಾತರಂ ಸೇರಿದಂತೆ ದೇಶಭಕ್ತಿಯ ಗೀತೆಗಳ ಗಾಯನದ ಗ್ರ್ಯಾಂಡ್‌ ರಿಹರ್ಸಲ್‌ ಯಶಸ್ವಿಯಾಯಿತು.

1ನೇ ತರಗತಿಯಿಂದ ಹಿಡಿದು ಬಿಎಡ್‌ ಕಾಲೇಜುವರೆಗಿನ ಆಯ್ದೆ 307 ಬಾಲಕ, ಬಾಲಕಿಯರು, ಯುವಕ, ಯುವತಿಯರು ಒಂದರ ಮೇಲೊಂದರಂತೆ ನಿರಂತರ ಗೀತೆಗಳನ್ನು ಪ್ರಸ್ತುತಪಡಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಎನ್‌ವಿ ಸಂಗೀತ ವಿಭಾಗದ ಮಹೇಶ ಬಡಿಗೇರ, ಡಾ. ಗುರುರಾಜ ದಂಡಾಪೂರ, ಡಾ. ರವೀಂದ್ರ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ನಿಖಿಲ್‌ ಕೊಲ್ಹಾರಕರ್‌, ಶೃತಿ ವಿ ಸಗರ್‌, ಗಂಗಾಂಬಿಕಾ ಮಠಪತಿ ಕಳೆದೊಂದು ವಾರದಿಂದ ಮಕ್ಕಳನ್ನು ಕಲೆಹಾಕಿ ವಂದಾ ಮಾತರಂ ಸೇರಿದಂತೆ 3 ಗೀತೆಗಳ ಸಮೂಹ ಗಾಯನಕ್ಕೆ ಅಣಿಗೊಳಿಸುವಲ್ಲಿ ಶ್ರಮಿಸಿದರು. ಎನ್‌ವಿ ಆಡಳಿತ ಮಂಡಳಿಯ ಸದಸ್ಯರಾದ ಡಾ. ಸದಾಶಿವ ಜಿಡಗೇಕರ್‌ ಮಾತನಾಡಿ, ದೇಶಭಕ್ತಿ ಸ್ಫುರಿಸುವ ಎನ್‌ವಿ ಮಕ್ಕಳ ಈ ಗಾಯನ ಸ್ವಾತಂತ್ರ್ಯೋತ್ಸವದ ಹೆಮ್ಮೆ ಎಂದರು.

..ಬಾಕ್ಸ್‌..

ಅಕ್ಷರ ಜತೆ ಎನ್‌ವಿ ಯಿಂದ ದೇಶಭಕ್ತಿ ಪಾಠ

ಗೀತ ಗಾಯನದಲ್ಲಿ ಪತ್ರಕರ್ತ ಶೇಷಮೂರ್ತಿ ಅವಧಾನಿ, ಲೋಕಮಾನ್ಯ ಬಾಲ ಗಂಗಾಧರ ತಿಲಕರ ದೇಶಭಕ್ತಿಯ ಪ್ರಭಾವ, ಸ್ಫೂತಿಯೊಂದಿಗೆ ವಿಠ್ಠಲರಾವ್‌ ದೇವುಳಗಾಂವ್ಕರ್‌ ಅನೇಕ ಹಿರಿಯರು ಕೂಡಿಕೊಂಡು ಈ ಶಾಲೆಯನ್ನು 122 ವರ್ಷಗಳ ಹಿಂದೆ ಸ್ಥಾಪಿಸಿದ್ದು ಗಾಂಧೀಜಿ ಭೇಟಿ ನೀಡಿರುವುದು ಹೆಗ್ಗಳಿಕೆ ಎನ್‌ವಿ ಶಾಲೆಗಿದೆ. ಅಕ್ಷರದ ಜೊತೆ ಮಕ್ಕಳಲ್ಲಿ ದೇಶಭಕ್ತಿ, ದೇಶಪ್ರೇಮ ತುಂಬುವ ಕೆಲಸ ನಿರಂತರ ಸಾಗಲೆಂದು ಹಾರೈಸಿದರು.

ಪತ್ರಕರ್ತ ರಾಮಕೃಷ್ಣ ಬಡಶೇಷಿ, ಜಯತೀರ್ಥ ಪಾಟೀಲ್‌, ಸಂಗಮನಾಥ ರೇವತಗಾಂವ್‌, ಕಾಲೇಜಿನ ಪ್ರಮುಖರಾದ ಡಾ. ಗೋವಿಂದ ಪೂಜಾರ್‌, ಜಾಹ್ನವಿ ಸೇರಿದಂತೆ ಹಲವರಿದ್ದರು.

ಫೋಟೋ:

ತಿರಂಗಾ 1, ತಿರಂಗಾ 2 ಮತ್ತು ತಿರಂಗಾ 3

ಕಲಬುರಗಿಯಲ್ಲಿರುವ ಎನ್‌ವಿ ಶಿಕ್ಷಣ ಸಂಸ್ಥೆಯ 307 ಮಕ್ಕಳು ವಂದೇ ಮಾತರಂ, ಜನಗಣ ಮನ ಸೇರಿದಂತೆ 3 ದೇಶಭಕ್ತಿ ಗೀತೆಗಳನ್ನು ಒಕ್ಕೊರಲಿನಿಂದ ಪ್ರಸ್ತುತ ಪಡಿಸಿ ಸಮೂಹ ಗಾಯನಕ್ಕೆ ಸಿದ್ಧರೆಂದು ಸಾರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಹಾರ ವಿತರಣೆಯಲ್ಲಿ ಲೋಪ ಕಂಡರೆ ಶಿಸ್ತು ಕ್ರಮ
ಪಿಯುಸಿ ವಿದ್ಯಾರ್ಥಿ ಜೀವನದ ಮುಖ್ಯ ಘಟ್ಟ: ಬಸವರಮಾನಂದ ಸ್ವಾಮೀಜಿ