ಬಿರುನಾಣಿ ವ್ಯಾಪ್ತಿಗೆ 33 ಕೆವಿ ವಿದ್ಯುತ್ ಸರಬರಾಜು ಉಪಕೇಂದ್ರ ಪ್ರಸ್ತಾವನೆ

KannadaprabhaNewsNetwork |  
Published : Jul 30, 2024, 12:35 AM IST
ಚಿತ್ರ : 28ಎಂಡಿಕೆ1 : ಶಾಸಕ ಎ.ಎಸ್. ಪೊನ್ನಣ್ಣ ಅವರು ಜಿಲ್ಲೆಯ ಗಡಿಪ್ರದೇಶ ಬಿರುಣಾಣಿ ವ್ಯಾಪ್ತಿಗೆ ಭೇಟಿ ನೀಡಿ ಮಳೆ ಹಾನಿ ಪರಿಶೀಲಿಸಿದರು.  | Kannada Prabha

ಸಾರಾಂಶ

ಹೆಚ್ಚು ದಿನಗಳಿಂದ ವಿದ್ಯುತ್ ಸಮಸ್ಯೆಯನ್ನು ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ 5 ಗ್ರಾಮದ ಜನರು ಎದುರಿಸುತ್ತಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ವಿದ್ಯುತ್‌ ಕಡಿತ ಉಂಟಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ 33 ಕೆ.ವಿ. ಉಪ ವಿದ್ಯುತ್ ಸರಬರಾಜು ಕೇಂದ್ರ ಸ್ಥಾಪಿಸಲು ಲಭ್ಯ ಇರುವ ಜಾಗ ಗುರುತಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ತಿಳಿಸಿದರು.

ಭಾನುವಾರ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳನ್ನು ಪರಿಶೀಲಿಸಿ ಗ್ರಾಮಸ್ಥರ ಅಹವಾಲು ಆಲಿಸಿದ ಶಾಸಕರಿಗೆ, ಬಿರುನಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಕುಪ್ಪಣಮಾಡ ಪ್ರೀತಂ ಅವರು, ಕಳೆದ 20 ದಿನಕ್ಕೂ ಹೆಚ್ಚು ದಿನಗಳಿಂದ ವಿದ್ಯುತ್ ಸಮಸ್ಯೆಯನ್ನು ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ 5 ಗ್ರಾಮದ ಜನರು ಎದುರಿಸುತ್ತಿದ್ದಾರೆ. ಪ್ರತಿವರ್ಷ ಮಳೆಗಾಲದಲ್ಲಿ ವಿದ್ಯುತ್ ಕಡಿತ ಹಲವು ವಾರಗಳು ಉಂಟಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮನವಿ ಮಾಡಿದರು.

ಜಿಲ್ಲೆಯಲ್ಲಿ ಮಳೆಗಾಲದಲ್ಲಿ ವಿದ್ಯುತ್ ಅಡಚಣೆ ಉಂಟಾಗುವ ಸ್ಥಳಗಳಿಗೆ ಹಾಗೂ ವಿದ್ಯುತ್ ಸರಬರಾಜು ಕೇಂದ್ರಗಳಿಂದ ದೂರವಿರುವ ಪ್ರದೇಶಕ್ಕೆ ಉಪ ವಿದ್ಯುತ್ ಸರಬರಾಜು ಕೇಂದ್ರ ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಆದ್ದರಿಂದ ಬಿರುನಾಣಿ ವ್ಯಾಪ್ತಿಗೆ ಉಪ ವಿದ್ಯುತ್ ಸರಬರಾಜು ಕೇಂದ್ರದ ಬೇಡಿಕೆ ಹಲವಾರು ವರ್ಷಗಳಿಂದ ಇದ್ದು, ಈ ಬಗ್ಗೆ ಲಭ್ಯವಿರುವ ಜಾಗವನ್ನು ಗ್ರಾಮಸ್ಥರ ಸಲಹೆ ಪಡೆದು ಗುರುತಿಸಿ ಉಪ ವಿದ್ಯುತ್ ಸರಬರಾಜು ಕೇಂದ್ರ ಸ್ಥಾಪಿಸುವ ಪ್ರಕ್ರಿಯೆ ನಡೆಸಲಾಗುವುದು. ಈ ಬಗ್ಗೆ ಶಾಸಕರ ಕರ್ತವ್ಯ ಅಧಿಕಾರಿ ಬಿ.ಎ. ಮುತ್ತಣ್ಣ ಅವರೊಂದಿಗೆ ಸಂಪರ್ಕದಲ್ಲಿರುವಂತೆ ಗ್ರಾಮಸ್ಥರಿಗೆ ತಿಳಿಸಿದರು.

ಬಿರುನಾಣಿಯ ಕಳಕೂರು ಗ್ರಾಮದಲ್ಲಿ ರಸ್ತೆ ಕುಸಿತ ಸೇರಿದಂತೆ ಬರೆ ಕುಸಿತ ಪ್ರದೇಶಗಳನ್ನು ಶಾಸಕರು ವೀಕ್ಷಿಸಿ, ರಸ್ತೆ ಸಂಚಾರಕ್ಕೆ ಅಡಚಣೆಯಾಗದಂತೆ ತಕ್ಷಣ ತಾತ್ಕಾಲಿಕ ಕಾಮಗಾರಿ ಹಾಗೂ ಮಳೆಗಾಲ ಕಳೆದ ನಂತರ ಹಾನಿಯಾಗಿರುವ ಜಾಗಗಳಿಗೆ ಶಾಶ್ವತ ಕಾಮಗಾರಿ ಕೈಗೊಳ್ಳುವಂತೆಯೂ ಸೂಚಿಸಿದರು.

ಈ ವ್ಯಾಪ್ತಿಯ ಮಳೆ ಹಾನಿಯ ಬಗ್ಗೆ ಗ್ರಾಮಸ್ಥರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಡಿಸಿಸಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಬಿರುನಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಕುಪ್ಪಣಮಾಡ ಪ್ರೀತಂ, ಪ್ರಮುಖರಾದ ಕರ್ತಮಾಡ ನಂದಾ, ಕಾಳಿಮಾಡ ರಸಿಕ್, ಬೊಟ್ಟಂಗಡಪ್ರತಾಪ್, ಚೋನಿರ ಜೀವನ್, ಅಣ್ಣೀರ ವಿಜು ಪೂಣಚ್ಚ, ಕಾಳಿಮಾಡ ಪ್ರಶಾಂತ್, ಮುಕ್ಕಾಟಿರ ಸಂದೀಪ್, ಪೊನ್ನಂಪೇಟೆ ತಾಲೂಕು ತಹಸೀಲ್ದಾರ್ ಮೋಹನ್ ಕುಮಾರ್, ಅಧಿಕಾರಿಗಳಾದ ಪಿಡಬ್ಲ್ಯೂಡಿ -ಇಇ ಸಿದ್ದೇಗೌಡ, ಎ.ಇ.ಇ. ಲಿಂಗರಾಜು, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ, ಶ್ರೀಮಂಗಲ ಉಪ ನಿರೀಕ್ಷಕ ಶಿವಾನಂದ್ ಮತ್ತಿತರರು ಹಾಜರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ