ಮುಂದಿನ ಚುನಾವಣೆಯಲ್ಲಿ ಶೇ.೩೩ ಮಹಿಳಾ ಮೀಸಲು ಲಭ್ಯ: ಸಿಆರ್‌ಎಸ್

KannadaprabhaNewsNetwork |  
Published : Apr 09, 2026, 01:30 AM IST
೮ಕೆಎಂಎನ್‌ಡಿ-೩ಮಂಡ್ಯದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ‌್ಯಕ್ರಮದಲ್ಲಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಅರ್ಹ ಫಲಾನುಭವಿಗಳಿಗೆ ಸವಲತ್ತು ವಿತರಿಸಿದರು. | Kannada Prabha

ಸಾರಾಂಶ

ಸದ್ಯ ನಾವು ಬದಲಾವಣೆಯ ಕಾಲಘಟ್ಟದಲ್ಲಿದ್ದೇವೆ. ಮಹಿಳೆಯರು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತ ಎಂಬುದು ಬದಲಾಗಿದ್ದು, ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಅದ್ವಿತೀಯ ಸಾಧನೆ ಮಾಡುತ್ತಿದ್ದಾರೆ. ಅದೇ ರೀತಿ ದೇಶದ ಆಡಳಿತ ಮತ್ತು ಕಾನೂನು ಮಾಡುವ ಕ್ಷೇತ್ರದಲ್ಲೂ ಸಹ ಮಹತ್ತರ ಪಾತ್ರ ವಹಿಸುವಂತಾಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಂಬರುವ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.೩೩ರಷ್ಟು ಮೀಸಲಾತಿ ಲಭ್ಯವಾಗಲಿದ್ದು, ದೇಶದ ಆಡಳಿತ ವ್ಯವಸ್ಥೆಯಲ್ಲಿ ಪಾಲುದಾರಿಕೆ ಪಡೆಯಲು ಸರ್ವ ಸನ್ನದ್ಧರಾಗಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಸಲಹೆ ನೀಡಿದರು.

ಜಿಲ್ಲಾಡಳಿತ ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ಲೋಕಸಭೆಯಲ್ಲಿ ಶೇ.೫೦ರಷ್ಟು ಮಹಿಳೆಯರಿಗೆ ಮೀಸಲಾತಿ ಸಿಗಬೇಕು ಎಂಬ ಚರ್ಚೆ ನಡೆದಿದ್ದು, ನಂತರ ಶೇ. ೩೩ರಷ್ಟು ಮೀಸಲಾತಿ ನೀಡಲಾಗಿದೆ. ಮುಂಬರುವ ಚುನಾವಣೆಗಳಲ್ಲಿ ಅದು ಜಾರಿಗೆ ಬರಲಿದೆ. ಹಾಗಾಗಿ ಮುಂದಿನ ಗ್ರಾಮ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲೂ ಸಹ ಗ್ರಾಮಗಳ ಅಭ್ಯುದಯ ಮತ್ತು ಆಡಳಿತ ವ್ಯವಸ್ಥೆಯಲ್ಲಿ ನಿಪುಣತೆ ಹೊಂದಿರುವಂತಹ ಮಹಿಳೆಯರು ಆಯ್ಕೆಯಾಗುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.

ಸದ್ಯ ನಾವು ಬದಲಾವಣೆಯ ಕಾಲಘಟ್ಟದಲ್ಲಿದ್ದೇವೆ. ಮಹಿಳೆಯರು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತ ಎಂಬುದು ಬದಲಾಗಿದ್ದು, ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಅದ್ವಿತೀಯ ಸಾಧನೆ ಮಾಡುತ್ತಿದ್ದಾರೆ. ಅದೇ ರೀತಿ ದೇಶದ ಆಡಳಿತ ಮತ್ತು ಕಾನೂನು ಮಾಡುವ ಕ್ಷೇತ್ರದಲ್ಲೂ ಸಹ ಮಹತ್ತರ ಪಾತ್ರ ವಹಿಸುವಂತಾಗಬೇಕು ಎಂದರು.

ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸ್ತ್ರೀಶಕ್ತಿ ಸಂಘಟನೆಗಳನ್ನು ಅಸ್ತಿತ್ವಕ್ಕೆ ತಂದರು. ನಂತರ ಧರ್ಮಸ್ಥಳ ಕ್ಷೇತ್ರದವರೂ ಸಹ ಇದನ್ನು ಹೆಚ್ಚಾಗಿ ಬೆಳೆಸುವುದರೊಂದಿಗೆ ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆಗೆ ಅಗತ್ಯವಾದ ನಿಟ್ಟಿನಲ್ಲಿ ಆರ್ಥಿಕ ಚಟುವಟಿಕೆಗಳನ್ನು ಮಾಡಿಕೊಳ್ಳಲು ಸಾಧ್ಯವಾಗುವಷ್ಟರ ಮಟ್ಟಿಗೆ ಮುಂದುವರೆದಿದ್ದಾರೆ. ಸ್ತ್ರೀಶಕ್ತಿ ಸಂಘಟನೆಗಳ ಉತ್ಪನ್ನಗಳಿಗೂ ಉತ್ತಮ ಮಾರುಕಟ್ಟೆ ಅಗತ್ಯವಾಗಿದೆ ಎಂಬುದನ್ನು ಅರಿತು ಮುಂದಿನ ದಿನಗಳಲ್ಲಿ ಮಂಡ್ಯದಲ್ಲೂ ಸಹ ೧೦೦*೧೦೦ ಅಡಿ ಅಳತೆಯ ನಿವೇಶನ ಕೊಟ್ಟು ಅದರಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಉತ್ಪನ್ನಗಳನ್ನು ರಫ್ತು ಮಾಡುವುದು, ತಮ್ಮ ಉತ್ಪನ್ನಗಳನ್ನು ತಾವೇ ಮಾರುವಂತಹ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಪ್ರತಿ ವರ್ಷ ೧.೩೦ ಲಕ್ಷ ಕೋಟಿ ರು. ಖರ್ಚು ಮಾಡುತ್ತಿದೆ. ಆದರೆ, ಈ ಬಗ್ಗೆ ನಾವು ಫಲಾನುಭವಿಗಳನ್ನು ಪ್ರಶ್ನಿಸಿದರೆ, ನಮಗೆ ಗ್ಯಾರಂಟಿ ಯೋಜನೆ ತಲುಪುತ್ತಿವೆ. ನಮ್ಮ ಗಂಡ ಮತ್ತು ಮಕ್ಕಳಿಗೆ ಸಿಗುತ್ತಿಲ್ಲ ಎನ್ನುತ್ತಾರೆ. ಒಂದು ಕುಟುಂಬ ಎಂದರೆ ಕೇವಲ ಸ್ತ್ರೀ ಮಾತ್ರ ಅಲ್ಲ, ಅದರಲ್ಲಿ ಗಂಡ ಮತ್ತು ಮಕ್ಕಳು ಇದ್ದರಷ್ಟೇ ಪರಿಪೂರ್ಣ ಕುಟುಂಬವಾಗಲು ಸಾಧ್ಯ. ಈ ಬಗ್ಗೆ ಮಹಿಳೆಯರು ತಮ್ಮ ಮನೋಭಾವವನ್ನು ಬದಲಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಿಂದೆ ಆಡಳಿತ ನಡೆಸಿದ ಬಿಜೆಪಿ, ಜೆಡಿಎಸ್‌ನವರು ಮಹಿಳೆಯರಿಗೆ ನೇರವಾಗಿ ಯೋಜನೆ ರೂಪಿಸಲಿಲ್ಲ. ಈಗ ನಮ್ಮ ಗ್ಯಾರಂಟಿ ಯೋಜನೆಯಿಂದಾಗಿ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮಿಲೆಟ್ ಹಬ್:

ಬೆಂಗಳೂರಿನ ಹೆಬ್ಬಾಳದಲ್ಲಿ ೨೦ ಕೋಟಿ ರು. ವೆಚ್ಚದಲ್ಲಿ ಮಿಲೆಟ್ ಹಬ್ ನಿರ್ಮಿಸಲಾಗುತ್ತಿದ್ದು, ಈಗಾಗಲೇ ಶೇ. ೫೦ರಷ್ಟು ಕೆಲಸ ಪೂರ್ಣವಾಗಿದೆ. ಶೀಘ್ರದಲ್ಲೇ ಅದನ್ನು ಲೋಕಾರ್ಪಣೆ ಮಾಡುವುದರೊಂದಿಗೆ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು. ಅದೇ ರೀತಿ ಕೃಷಿ ಇಲಾಖೆಯಲ್ಲಿ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದೇವೆ ಎಂದರು.

ಶಾಸಕ ಪಿ. ರವಿಕುಮಾರ್, ಜಿಲ್ಲಾಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಆಶಾ, ಉಪ ಕಾರ್ಯದರ್ಶಿ ಲಕ್ಷ್ಮೀ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಭಾಗದ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವುದು ಅವಶ್ಯ
ಬಸ್‌ ನಿಲ್ದಾಣ ಉದ್ಘಾಟಿಸಿದ ಸಂಸದ ಡಾ.ಸುಧಾಕರ್‌