ರಾಜ್ಯ ಸರ್ಕಾರದ ಅನುದಾನದ ಮೇಲೆ ಅಧ್ಯಕ್ಷರ ಕಣ್ಣು: ಕೃಷ್ಣ

KannadaprabhaNewsNetwork |  
Published : Apr 09, 2026, 01:30 AM IST
೮ಕೆಎಂಎನ್‌ಡಿ-೧ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷ ಕೃಷ್ಣ ಮಾತನಾಡಿದರು. | Kannada Prabha

ಸಾರಾಂಶ

ಮಂಡ್ಯ ಜಿಲ್ಲಾ ಕುರುಬರ ಸಂಘದ ವಿದ್ಯಾರ್ಥಿನಿಲಯ ಕಟ್ಟಡ ಕಾಮಗಾರಿಗೆ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನದ ಮೇಲೆ ಅಧ್ಯಕ್ಷ ಸುರೇಶ್ ಕಣ್ಣು ಬಿದ್ದಿದೆ. ಅದಕ್ಕಾಗಿಯೇ ರಾಜೀನಾಮೆ ನೀಡದೆ ಭಂಡಾಟ-ಮೊಂಡಾಟವಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾ ಕುರುಬರ ಸಂಘದ ವಿದ್ಯಾರ್ಥಿನಿಲಯ ಕಟ್ಟಡ ಕಾಮಗಾರಿಗೆ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನದ ಮೇಲೆ ಅಧ್ಯಕ್ಷ ಸುರೇಶ್ ಕಣ್ಣು ಬಿದ್ದಿದೆ. ಅದಕ್ಕಾಗಿಯೇ ರಾಜೀನಾಮೆ ನೀಡದೆ ಭಂಡಾಟ-ಮೊಂಡಾಟವಾಡುತ್ತಿದ್ದಾರೆ ಎಂದು ಸಂಘದ ಉಪಾಧ್ಯಕ್ಷ ಕೃಷ್ಣ ಆರೋಪಿಸಿದರು.

ರಾಜ್ಯ ಸರ್ಕಾರ ವಿದ್ಯಾರ್ಥಿನಿಲಯದ ಕಾಮಗಾರಿಗೆ ೨.೧೫ ಕೋಟಿ ರು. ನಿಗದಿಪಡಿಸಿ ಮೊದಲ ಹಂತದಲ್ಲಿ ೫೦ ಲಕ್ಷ ರು.ಗಳನ್ನು ಹಿಂದುಳಿದ ವರ್ಗಗಳ ಇಲಾಖೆಗೆ ಬಿಡುಗಡೆ ಮಾಡಿತ್ತು. ಆ ಹಣವನ್ನು ಸಂಘದ ಖಾತೆಗೆ ಹಾಕಿಸಿಕೊಂಡು ಖರ್ಚು ಮಾಡಲಾಗಿದೆ. ಇದೀಗ ಸರ್ಕಾರ ಮತ್ತೆ ೧ ಕೋಟಿ ರು. ಹಣ ಬಿಡುಗಡೆ ಮಾಡಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಿಯಮಬದ್ಧವಾಗಿ ಅಧ್ಯಕ್ಷರು ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿಯನ್ನು ನಿರ್ಮಿತಿ ಕೇಂದ್ರ ಅಥವಾ ಭೂ ಸೇನಾ ನಿಗಮದವರಿಂದ ಕಾಮಗಾರಿ ಮಾಡಿಸಬೇಕಿತ್ತು. ಆದರೆ, ಸಭೆಯನ್ನೂ ಕರೆಯದೆ ಏಕಪಕ್ಷೀಯವಾಗಿ ಅವರೇ ಕಾಮಗಾರಿ ನಡೆಸುತ್ತಿದ್ದಾರೆ ಎಂದು ದೂರಿದರು.

ವಿದ್ಯಾರ್ಥಿನಿಲಯ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ೮ ತಿಂಗಳಾದರೂ ಇದುವರೆಗೂ ಯಾರಿಂದ ಎಷ್ಟು ಹಣ ಸಂಗ್ರಹಿಸಲಾಗಿದೆ ಎಂಬ ಬಗ್ಗೆ ಸಭೆಗೆ ಲೆಕ್ಕ ಕೊಟ್ಟಿಲ್ಲ. ಸಮಿತಿಗಳನ್ನು ರಚನೆ ಮಾಡಿಲ್ಲ. ತಮ್ಮದೇ ಗುಂಪು ಕಟ್ಟಿಕೊಂಡು ತಮ್ಮದೇ ನಿರ್ಧಾರಗಳೊಂದಿಗೆ ಸರ್ವಾಧಿಕಾರಿಯಂತೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆದಿದ್ದಾರೆ ಎಂದು ಆರೋಪಿಸಿದರು.

ಮಾ.೬ಕ್ಕೆ ಆಡಳಿತ ಮಂಡಳಿಯ ಅವಧಿ ಮುಗಿದಿದೆ. ಆಗಿನಿಂದಲೂ ರಾಜೀನಾಮೆ ನೀಡುವಂತೆ ಕೇಳುತ್ತಲೇ ಇದ್ದೇವೆ. ರಾಜೀನಾಮೆ ನೀಡದೆ ಅಧಿಕಾರದಲ್ಲಿ ಮುಂದುವರೆದಿದ್ದಾರೆ. ಅಧ್ಯಕ್ಷರ ಮೇಲೆ ಕಪ್ಪು ಮಸಿ ಎರಚಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರೂ ಅವರಿಗೆ ಮರ್ಯಾದೆಯೇ ಇಲ್ಲ. ಇನ್ನೂ ವಿಭಿನ್ನ ರೀತಿಯಲ್ಲಿ ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸುವುದಕ್ಕೆ ಸಭೆ ಕರೆದು ತೀರ್ಮಾನಿಸಲಿದ್ದೇವೆ ಎಂದರು.

ಅಧ್ಯಕ್ಷ ಸ್ಥಾನದಲ್ಲಿರುವ ಸುರೇಶ್ ಮತ್ತೆ ಅಧ್ಯಕ್ಷರಾಗುವುದಕ್ಕೆ ನಮ್ಮ ಯಾವುದೇ ಆಕ್ಷೇಪವಿಲ್ಲ. ಅದಕ್ಕೆ ಮೊದಲು ಎಲ್ಲಾ ಸದಸ್ಯರ ಬಹಿರಂಗ ಸಭೆ ಕರೆಯಲಿ. ಎಲ್ಲರೂ ಒಮ್ಮತದಿಂದ ಸುರೇಶ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಒಪ್ಪಿದರೆ ನಮ್ಮ ಯಾರ ಆಕ್ಷೇಪಣೆಯೂ ಇರುವುದಿಲ್ಲ. ಸಭೆ ಕರೆಯಲಾಗದಿದ್ದರೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆಗೆ ಸ್ಪರ್ಧಿಸಲಿ. ಸದಸ್ಯರ ಬೆಂಬಲದೊಂದಿಗೆ ಮರು ಆಯ್ಕೆಯಾಗಲಿ. ಅದಕ್ಕೂ ನಾವು ಬೇಡ ಎನ್ನುತ್ತಿಲ್ಲ. ಆದರೆ, ಯಾವುದನ್ನೂ ಒಪ್ಪದೆ ಅಧಿಕಾರ ದಾಹದಿಂದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುತ್ತಿರುವ ಸುರೇಶ್ ವರ್ತನೆ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.

ಕಾನೂನುಬದ್ಧವಾಗಿ ಚುನಾವಣೆ ನಡೆಸುವಂತೆ ಜಿಲ್ಲಾ ನೋಂದಣಾಧಿಕಾರಿ ಬಳಿ ಹೋದರೆ ಆಡಳಿತ ಮಂಡಳಿ ಮುಂದುವರೆಸುವ ತೀರ್ಮಾನ ಮಾಡಿರುವುದನ್ನು ತೋರಿಸಿ ಎಲ್ಲರಿಗೂ ಎಂಡಾರ್ಸ್‌ಮೆಂಟ್ ಕೊಡುತ್ತಿದ್ದಾರೆ. ಆದರೂ ನಾವು ಕಾನೂನು ಮತ್ತು ಅಧ್ಯಕ್ಷರ ವಿರುದ್ಧದ ಹೋರಾಟವನ್ನು ಮುಂದುವರೆಸುವುದಾಗಿ ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್ ಎಂಬಾತ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ವಿಫಲರಾಗಿದ್ದರೆ. ಹುದ್ದೆಯ ಘನತೆ-ಗೌರವಗಳನ್ನು ಕಳೆದಿದ್ದಾರೆ. ಠರಾವು ಪುಸ್ತಕವನ್ನು ಬೈಲಾ ಪ್ರಕಾರ ಬರೆಯುವ ಅರ್ಹತೆ, ಯೋಗ್ಯತೆಯನ್ನು ಪ್ರದರ್ಶಿಸಿಲ್ಲ. ಸಂಘದ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸದೆ ಬೆಂಗಳೂರಿನಲ್ಲೇ ಸದಾ ಇದ್ದುಕೊಂಡು ವರ್ಗಾವಣೆ ದಂಧೆ, ವಸೂಲಿ ಮಾಡಿಕೊಂಡು ಸಂಘದ ಲೆಟರ್‌ಹೆಡ್‌ಗಳನ್ನು ದುರುಪಯೋಗ ಮಾಡಿಕೊಂಡು ಜೀವನ ನಡೆಸುವುದೇ ಇವರ ಕಾರ್ಯವಾಗಿದೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ದೊಡ್ಡಯ್ಯ, ಶ್ರೀಧರ್, ರಮೇಶ್, ಗೋಪಾಲ್, ಸ್ವಾಮಿ, ಶಿವರಾಮು, ಶಂಕರ್, ರಾಜಶೇಖರ್ ಇತರರಿದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಭಾಗದ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವುದು ಅವಶ್ಯ
ಬಸ್‌ ನಿಲ್ದಾಣ ಉದ್ಘಾಟಿಸಿದ ಸಂಸದ ಡಾ.ಸುಧಾಕರ್‌