ಗುರುರಾಯರ 353ನೇ ಮಧ್ಯಾರಾಧನೆ ಸಂಭ್ರಮ

KannadaprabhaNewsNetwork |  
Published : Aug 22, 2024, 12:46 AM IST
21ಕೆಪಿಆರ್‌ಸಿಆರ್01 | Kannada Prabha

ಸಾರಾಂಶ

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ನಿಮಿತ್ತ ಮೂಲ ಬೃಂದಾವನಕ್ಕೆ ಶ್ರೀಗಳು ಮಹಾಪಂಚಾಮೃತಾಭಿಷೇಕ ಹಾಗೂ ಮಂಗಳಾರತಿ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರುಯತಿಕುಲ ತಿಲಕ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯುತ್ತಿರುವ ಶ್ರೀ ಗುರು ಸಾರ್ವಭೌಮರ 353ನೇ ಆರಾಧಾನಾ ಮಹೋತ್ಸವದ ಮಧ್ಯಾರಾಧನೆಯಲ್ಲಿ ಶ್ರೀ ಗಳಿಂದ ರಾಯರ ಮೂಲ ಬೃಂದಾವನಕ್ಕೆ ಮಹಾ ಪಂಚಾಮೃತಾಭಿಷೇಕ, ಅಲಂಕಾರ, ಪ್ರಹ್ಲಾದ ರಾಜರ ಉತ್ಸವ ಮೂರ್ತಿಯ ಸುವರ್ಣ ರಥೋತ್ಸವ ಸೇರಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾ ಭಕ್ತಿ, ಸಂಭ್ರಮ ಸಡಗರದಿಂದ ಬುಧವಾರ ಜರುಗಿದವು.

ಮಧ್ಯಾರಾಧನೆ ನಿಮಿತ್ತ ಶ್ರೀಮಠದ ಧಾರ್ಮಿಕ-ವಿಧಿವಿಧಾನಗಳಂತೆ ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಉತ್ಸವ ರಾಯರ ಪಾದಪೂಜೆ ಮತ್ತು ಪಂಚಾಮೃತ, ನಂತರ ಮಂತ್ರಾಲಯದ ವಿದ್ವಾನ್‌ ಪಂಚಮುಖಿ ಪವಮಾನಾಚಾರ್ಯ ಅವರಿಂದ ಪ್ರವಚನ, ಗ್ರಂಥಗಳ ಪಾರಾಯಣ, ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶ್ರೀಗುರುರಾಯರ ಮೂಲ ಬೃಂದಾವನದಕ್ಕೆ ಮಹಾ ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ ಸೇವೆ ಮಾಡಿ, ಕಳೆದ ಆ.18 ರಂದು ಟಿಟಿಡಿಯಿಂದ ಆಗಮಿಸಿದ್ದ ವಸ್ತ್ರ ರೂಪದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ಸಮರ್ಪಿಸಿದರು. ಬಳಿಕ ಶ್ರೀ ಮೂಲ ರಘುಪತಿ ವೇದವಾಸ್ಯ ದೇವರಿಗೆ ವಿಶೇಷ ಅಲಂಕಾರ ಪೂಜೆ, ಹಸ್ತೋದಕ ಸಂತರ್ಪಣೆ, ಮಹಾಮಂಗಳಾರತಿ ನೆರವೇರಿಸಿದರು.

ಇದೇ ವೇಳೆ ಮಠದ ಪ್ರಾಂಗಣದಲ್ಲಿ ಪ್ರಹ್ಲಾದರಾಜರ ಉತ್ಸವ ವಿಗ್ರಹವನ್ನು ಸುವರ್ಣ ರಥದಲ್ಲಿರಿಸಿ ಮಹಾ ಮಂಗಳಾರತಿ ಸೇವೆ ನೆರವೇರಿಸಿದ ಶ್ರೀಗಳು ಮೆರವಣಿಗೆ ಚಾಲನೆ ನೀಡಿದರು.

ಪ್ರಾಂಗಣದ ಸುತ್ತಲು ಸಾಗಿದ ರಥೋತ್ಸವದ ಮುಂದೆ ಪಲ್ಲಕ್ಕಿ ಸೇವೆ, ವೇದ-ಮಂತ್ರಗಳ ಘೋಷಣೆ, ಗಾಯನ, ನೃತ್ಯರೂಪಕಗಳು ಮಧ್ಯಾರಾಧನೆಯ ಸಂಭ್ರಮವನ್ನು ಹಿಮ್ಮಡಿಗೊಳಿಸಿದ್ದವು. ಸಂಜೆ ಹಗಲು ದೀವಟಗೆ, ಮಲ್ಕಿ ಮಂಗಳಾರತಿ ಸೇವೆ, ಸ್ವಸ್ಥಿ ವಚನ ಮತ್ತು ಪ್ರಾಕಾರ ಉತ್ಸವದ ಜೊತೆಗೆ ವಿವಿಧ ಸಾಂಸ್ಕೃತಿಕ-ಧಾರ್ಮಿಕ ಸಮಾರಂಭಗಳು ಭಕ್ತ ಸಮುದಾದ ಗಮನ ಸೆಳೆದವು.

ಈ ಸಂದರ್ಭದಲ್ಲಿ ಶ್ರೀ ಮಠದ ವೇದ ಪಂಡಿತರು, ವಿದ್ವಾಂಸರು, ಅಧಿಕಾರಿ-ಸಿಬ್ಬಂದಿ ವರ್ಗದವರು ಹಾಗೂ ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತರು ಭಾಗವಹಿಸಿದ್ದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು