ಕನ್ನಡಪ್ರಭ ವಾರ್ತೆ ರಾಯಚೂರು
ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸುಕ್ಷೇತ್ರ ಮಂತ್ರಾಲಯದಲ್ಲಿ 36 ಅಡಿ (ವೇದಿಕೆ ಸೇರಿ 52 ಅಡಿ) ಎತ್ತರದ ಏಕಶಿಲಾ ಅಭಯ ಶ್ರೀರಾಮ ಏಕಶಿಲಾ ಮೂರ್ತಿಯ ಅನಾವರಣ ಮಾಡಲಾಯಿತು.
ಮಂತ್ರಾಲಯದ ರಾಯಚೂರು ಮುಖ್ಯ ರಸ್ತೆಯಲ್ಲಿರುವ ಅಭಯ ಆಂಜನೇಯ ಸ್ವಾಮಿ ಮಂದಿರದ ಮುಂಭಾಗದಲ್ಲಿರುವ ಆರು ಎಕರೆ ಪ್ರದೇಶದಲ್ಲಿ ಅಭಯ ಶ್ರೀರಾಮನ ಮೂರ್ತಿ, ಮಂದಿರ ನಿರ್ಮಾಣವನ್ನು ಮಾಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಶನಿವಾರ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು 36 ಅಡಿ ಎತ್ತರದ ಅಭಯ ಶ್ರೀರಾಮನ ಏಕಶಿಲಾ ಮೂರ್ತಿಯನ್ನು ಪೂಜಾ-ವಿಧಿವಿಧಾನಗಳ ಮುಖಾಂತರ ಪ್ರತಿಷ್ಠಾಪಿಸಿದರು.
ಕಳೆದ ಐದಾರು ವರ್ಷಗಳ ಹಿಂದೆ ಮಂತ್ರಾಲಯದಲ್ಲಿ ಸುಮಾರು 32 ಅಡಿ ಎತ್ತರದ ಏಕಶಿಲಾ ಅಭಯಾಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಿ, ಆಕರ್ಷಕ ಮಂದಿರವನ್ನು ನಿರ್ಮಿಸಲಾಗಿದೆ. ಇದೀಗ ಇದೇ ಮಂದಿರದ ಮುಂಭಾಗದಲ್ಲಿರುವ 6 ಎಕರೆ ಪ್ರದೇಶದಲ್ಲಿ 36 ಅಡಿಯ ಏಕಶಿಲಾ ರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ವೇದಿಕೆಯೂ ಸೇರಿದರೆ ಈ ಮೂರ್ತಿ 52 ಅಡಿ ಎತ್ತರವಿದೆ. ಇನ್ನು ಕಟ್ಟಡ, ಗಾರ್ಡ್ ಇತರ ನಿರ್ಮಾಣದ ಕೆಲಸ ಬಾಕಿ ಉಳಿದಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮಂತ್ರಾಲಯದಲ್ಲಿ ರಾಮೋತ್ಸವವನ್ನು ಏರ್ಪಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ 36 ಅಡಿ ಎತ್ತರದ ಭವ್ಯವಾದ ವಿರಾಟ ಮೂರ್ತಿಯನ್ನು ಸಾಂಕೇತಿಕವಾಗಿ ಪ್ರತಿಷ್ಠಾಪಿಸಲಾಗಿದೆ. ಜ. 22ರಂದು ಸುಕ್ಷೇತ್ರದಲ್ಲಿ ವಿಶೇಷ ಪೂಜೆ, ಹೋಮ, ಪ್ರಾರ್ಥನೆ, ಭಜನೆ ಹಾಗೂ ತೀರ್ಥ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಮಂತ್ರಾಲಯದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ತಿಳಿಸಿದರು.
ಪ್ರತಿಷ್ಠೆಯಲ್ಲಿ ಸುಳ್ಯದ ಪುರೋಹಿತ ಭಾಗಿ:ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಬಾಲರಾಮ ವಿಗ್ರಹದ ಪ್ರಾಣ ಪ್ರತಿಷ್ಠೆಗೆ ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಕೆಮನಬಳ್ಳಿಯ ಸಂಸ್ಕೃತ ವಿದ್ವಾಂಸ ಡಾ.ಕೆ.ಗಣಪತಿ ಭಟ್ ಆಯ್ಕೆಯಾಗಿದ್ದಾರೆ.
ರಾಮನ ವಿಗ್ರಹ ಪ್ರತಿಷ್ಠೆಯ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲು ನೇಮಕವಾಗಿರುವ 101 ಮಂದಿ ಪ್ರಧಾನ ಪುರೋಹಿತರಲ್ಲಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ವಿದ್ವಾಂಸರಿವರು.
ಇವರು, ಪ್ರಸ್ತುತ ತಿರುಪತಿಯ ರಾಷ್ಟ್ರೀಯ ಸಂಸ್ಕ್ರತ ವಿ.ವಿಯ ಪರಮಚಾರ್ಯ ಗುರುಕುಲದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾಶಿಯ ವಿದ್ವಾಂಸ ಗಣೇಶ್ವರ ಶಾಸ್ತ್ರಿ ಮತ್ತು ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿವೆ.