ಕಳೆದ 2025-26ನೇ ಸಾಲಿನಲ್ಲಿ ನಡೆದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಿವಿಧ ಕಾಮಗಾರಿಗಳಲ್ಲಿ ದಾಖಲಾತಿಗಳ ಹೊಂದಾಣಿಕೆ ಇಲ್ಲದ ಕಾರಣಕ್ಕಾಗಿ ₹37.63 ಲಕ್ಷಗಳನ್ನು ಆಕ್ಷೇಪಣೆಗೆ ಒಳಪಡಿಸಲಾಗಿದೆ.
ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆಯಲ್ಲಿ ತಾಲೂಕು ಸಂಪನ್ಮೂಲ ವ್ಯಕ್ತಿ
ಕನ್ನಡಪ್ರಭ ವಾರ್ತೆ ಗದಗ
ಕಳೆದ 2025-26ನೇ ಸಾಲಿನಲ್ಲಿ ನಡೆದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಿವಿಧ ಕಾಮಗಾರಿಗಳಲ್ಲಿ ದಾಖಲಾತಿಗಳ ಹೊಂದಾಣಿಕೆ ಇಲ್ಲದ ಕಾರಣಕ್ಕಾಗಿ ₹37.63 ಲಕ್ಷಗಳನ್ನು ಆಕ್ಷೇಪಣೆಗೆ ಒಳಪಡಿಸಲಾಗಿದೆ ಎಂದು ನರೇಗಾ ತಾಲೂಕು ಸಂಪನ್ಮೂಲ ವ್ಯಕ್ತಿ ಸಂತೋಷ ಪಾಟೀಲ ತಿಳಿಸಿದರು.
ತಾಲೂಕಿನ ಲಕ್ಕುಂಡಿ ಗ್ರಾಮದ ದುರ್ಗಾದೇವಿ ಸಮುದಾಯ ಭವನದಲ್ಲಿ ಸ್ಥಳೀಯ ಗ್ರಾಪಂ ವತಿಯಿಂದ ನಡೆದ 2025-26ನೇ ಸಾಲಿನ ನರೇಗಾ ಯೋಜನೆಯ ಕಾಮಗಾರಿ, 15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.
ದನದ ದೊಡ್ಡಿ, ಮನೆ ನಿರ್ಮಾಣ, ಬದು ನಿರ್ಮಾಣ, ಅರಣ್ಯೀಕರಣ, ಸಿ.ಸಿ ರಸ್ತೆ, ಚರಂಡಿ ನಿರ್ಮಾಣ, ಶಾಲಾ ಆಟದ ಮೈದಾನ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಕೂಲಿ ಮೊತ್ತ ₹10941249, ಸಾಮಗ್ರಿ ಮೊತ್ತ ₹1377322 ಸೇರಿ ಒಟ್ಟು ₹12318571 ಬಳಕೆಯಾಗಿದೆ. ಇದರಲ್ಲಿ ಅಳತೆ ಪುಸ್ತಕಕ್ಕೆ ಚೆಕ್ ಮೆಜೆರಮೆಂಟ್ ಇರುವುದಿಲ್ಲ. ಬಿಲ್‌ಗೆ ಪೊರೈಕೆದಾರ ಸಹಿ ಇಲ್ಲ. ಕೆ.ಟಿ.ಟಿ.ಪಿ ನಿಯಮ ಪಾಲನೆ ಮಾಡಿಲ್ಲ, ಅರಣ್ಯ ಇಲಾಖೆ ಕಾಮಗಾರಿಗಳಿಗೆ ನೀರು ಹಾಕಿರುವ ಛಾಯಾಚಿತ್ರ ಇಲ್ಲದಿರುವುದು ಒಳಗೊಂಡಂತೆ ₹3763841ಗಳನ್ನು ಆಕ್ಷೇಪಣೆಗೆ ಒಳಪಡಿಸಲಾಗಿದೆ. ಇನ್ನೂ 15ನೇ ಹಣಕಾಸು ಯೋಜನೆಯಲ್ಲಿ ಕುಡಿಯುವ ನೀರು, ಬೀದಿ ದೀಪ, ಶಾಲಾ ಮೈದಾನ, ಗಟಾರು, ಹೈಮಾಸ್ಟ, ಸ್ವಚ್ಛತೆ, ಸೇರಿ 11 ಕಾಮಗಾರಿಗಳಿಗೆ ₹5023098 ಖರ್ಚು ಮಾಡಲಾಗಿದ್ದು, ಇದರಲ್ಲಿ ₹59674 ಗಳನ್ನು ತೆರಿಗೆ ಭರಣ ಮಾಡಿರುವುದಿಲ್ಲ ಎಂದು ತಿಳಿಸಿದರು.
ಈ ವೇಳೆ ಗ್ರಾಪಂ ಮಾಜಿ ಸದಸ್ಯ ಕುಬೇರಪ್ಪ ಬೆಂತೂರು ಮಾತನಾಡಿ, ಕಳೆದ 2-3 ವರ್ಷಗಳಿಂದ ಸಾಮಾಜಿಕ ಪರಿಶೋಧನೆಯಲ್ಲಿ ವಿವಿಧ ಕಾಮಗಾರಿಗಳಲ್ಲಿ ಲಕ್ಷಾಂತರ ರು. ಮೊತ್ತವನ್ನು ಆಕ್ಷೇಪಣೆಗೆ ಒಳಪಡಿಸಲಾಗಿದೆ. ಆದರೆ ಆಕ್ಷೇಪಣೆಗೆ ಒಳಪಡಿಸಿದ ಹಣ ವಸೂಲಾತಿ ಆಗಿರುವ ಬಗ್ಗೆ ಅಧಿಕಾರಿಗಳು ಈ ಗ್ರಾಮ ಸಭೆಗೆ ತಿಳಿಸುವುದಿಲ್ಲವಾದ್ದರಿಂದ ಗ್ರಾಮಸ್ಥರಿಗೆ ತಿಳಿಯದೇ ಚರ್ಚೆ ಮುಗಿದು ಹೋಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಈಗ ನಡೆದಿರುವ ವಿಬಿಜಿ-ರಾಮಜಿ ಕಾಮಗಾರಿಯಲ್ಲಿ ವಿಕಲಚೇತನರನ್ನು ಕೂಲಿ ಕೆಲಸದಲ್ಲಿ ತೆಗೆದುಕೊಂಡಿಲ್ಲ ಎಂದು ದೂರಿದರು.
ಗ್ರಾಮೀಣ ಕ್ಷೇತ್ರ ಸಮನ್ವಯಾಧಿಕಾರಿ ಜೆ.ಎ. ಭಾವಿಕಟ್ಟಿ ಮಾತನಾಡಿದರು. ಆಡಳಿತಾಧಿಕಾರಿ ಶಿವಕುಮಾರ ವಾಲಿ, ತಾಂತ್ರಿಕ ಸಹಾಯಕ ವಿಜಯ ಅಬ್ಬಿಗೇರಿ, ಸಾಮಾಜಿಕ ಪರಿಶೋಧನೆ ತಂಡದ ವಸಂತ ಹಾದಿಮನಿ, ಮಲ್ಲಪ್ಪ ಜಿನಗಿ, ಮೈಲಾರಪ್ಪ ಹುಯಿಲಗೋಳ, ಮಂಜುನಾಥ ಹುಡೇದ ಇತರರಿದ್ದರು.
ಸಾರಿಗೆ ವ್ಯವಸ್ಥೆ ಕಲ್ಪಿಸಿ
ಈಗ ಆರಂಭವಾಗಿರುವ ಕಾಮಗಾರಿಯ ಸ್ಥಳ ದೂರವಿದ್ದು ಹೋಗಲು ಅಧಿಕ ಸಮಯ ಬೇಕಾಗಿದ್ದು ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಸತತವಾಗಿ 125 ದಿನ ಕೆಲಸ ಕೊಡಿ, ಕೆಲಸದ ಸ್ಥಳಕ್ಕೆ ಕುಡಿಯುವ ನೀರು ಪೊರೈಕೆ ಮಾಡಿ, ಕೂಲಿ ಮೊತ್ತವನ್ನು ಬೇಗನೆ ಹಾಕಿ, ಆರೋಗ್ಯ ಕಿಟ್ ನೀಡದಿರುವ ಬಗ್ಗೆ ಕೂಲಿಕಾರರು ದೂರಿದರು. ಇದಕ್ಕೆ ಸ್ಪಂದಿಸಿದ ಪಿಡಿಒ ಅಮೀರನಾಯಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಯಾವುದೇ ಆದೇಶ ಬಂದಿಲ್ಲ. 20 ಕ್ಯಾನ್ ಕುಡಿಯುವ ನೀರು ಪೊರೈಕೆಗೆ ಕ್ರಮ ವಹಿಸಲಾಗುವುದು. ಇನ್ನೂ ಜಿಲ್ಲೆಯಲ್ಲಿ ಪ್ರಥಮವಾಗಿ ಲಕ್ಕುಂಡಿಯಲ್ಲಿಯೇ ವಿಬಿಜಿ-ರಾಮಜಿ ಕಾಮಗಾರಿ ಆರಂಭವಾಗಿದ್ದು ಹೆಚ್ಚು ಕೆಲಸ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.