ಮುನಿರಾಬಾದ್: ಕಲ್ಯಾಣ ಕರ್ನಾಟಕ ಭಾಗದ ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಕಳೆದ ವಾರದಲ್ಲಿ 38 ಟಿಎಂಸಿ ನೀರು ಹರಿದು ಬಂದಿದೆ. ಇದರ ಫಲವಾಗಿ ಶುಕ್ರವಾರ ತುಂಗಭದ್ರಾ ಜಲಾಶಯದ ನೀರಿನ ಮಟ್ಟ 1622.55 ಅಡಿಗೆ ತಲುಪಿದೆ. ಶುಕ್ರವಾರ ಜಲಾಶಯಕ್ಕೆ ನೀರಿನ ಒಳಹರಿವು 47.559 ಸಾವಿರ ಕ್ಯೂಸೆಕ್ ಇತ್ತು. ಜಲಾಶಯದಲ್ಲಿ 68.77 ಟಿಎಂಸಿ ನೀರು ಶೇಖರಣೆಯಾಗಿದೆ.
ಆದರೆ ಆಗಷ್ಟ್ ತಿಂಗಳಲ್ಲಿ ತುಂಗಭದ್ರಾ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣದಲ್ಲಿ ಹಂತ ಹಂತವಾಗಿ ಏರಿಕೆಯಾಗಿ ವಾರದಲ್ಲಿ ತುಂಗಭದ್ರಾ ಜಲಾಶಯದಲ್ಲಿ ಈಗ 68.77 ಟಿಎಂಸಿ ನೀರು ಶೇಖರಣೆಯಾಗಿದೆ. ಇದರಿಂದ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂತಸ ಮೂಡಿದೆ. ಜಲಾಶಯಕ್ಕೆ ಇದೇ ರೀತಿ ನೀರಿನ ಒಳಹರಿವು ಇದ್ದರೆ ಇನ್ನೆರಡು ವಾರದಲ್ಲಿ ಭರ್ತಿಯಾಗಬಹುದು ಎಂದು ಅಂದಾಜಿಸಲಾಗಿದೆ. ಇನ್ನು 36ಟಿಎಂಸಿ ಒಳ ಹರಿವು ಬರಬೇಕಿದೆ. ಭೀಕರ ಬರಗಾಲ ಇದ್ದರೂ ತುಂಗಭದ್ರಾ ಜಲಾಶಯದ 75 ವರ್ಷದ ಇತಿಹಾಸದಲ್ಲಿ ಮುಂಗಾರು ಬೆಳೆಗೆ ಯಾವ ವರ್ಷವೂ ನೀರಿನ ಕೊರತೆ ಆಗಿಲ್ಲ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
2017ರಲ್ಲಿ ತುಂಗಭದ್ರಾ ಜಲಾಶಯಕ್ಕೆ ಮುಂಗಾರು ಬೆಳೆಗೆ ನೀರಿನ ಒಳ ಹರಿವಿನಲ್ಲಿ ಏರುಪೇರು ಆಗಿತ್ತು. ಆಗಸ್ಟ್ ತಿಂಗಳಲ್ಲಿ ಬರಬೇಕಾದ ನೀರಿನ ಒಳಹರಿವು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಬಂತು ಆಗ ನೀರಾವರಿ ಇಲಾಖೆ ಅಧಿಕಾರಿಗಳು ಆನ್ ಅಂಡ್ ಆಫ್ ವ್ಯವಸ್ಥೆ ಮೂಲಕ ಅಚ್ಚುಕಟ್ಟು ಪ್ರದೇಶದ ರೈತರ ಗದ್ದೆಗಳಿಗೆ ಮುಂಗಾರು ಬೆಳೆಗೆ ನೀರನ್ನು ಒದಗಿಸಿದರು.ಕಳೆದ ವರ್ಷ ಜುಲೈ ಎರಡರಂದು ತುಂಗಭದ್ರಾ ಜಲಾಶಯದ ಎಲ್ಲ ಕಾಲುವೆಗಳಲ್ಲಿ ಬಲದಂಡೆ ಮೇಲ್ಮಟ್ಟದ ಹಾಗೂ ಬಲದಂಡೆ ಕೆಳಮಟ್ಟದ ಕಾಲುವೆಗಳಲ್ಲಿ ನೀರನ್ನು ಹರಿಸಲಾಯಿತು, ಆದರೆ ಪ್ರಸಕ್ತ ಸಾಲಿನಲ್ಲಿ ಆ.7 ಗತಿಸಿದ್ದರೂ ಇನ್ನು ಕಾಲುವೆಗಳಲ್ಲಿ ನೀರು ಹರಿಸಿಲ್ಲ.