ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣಾ ಕಾರ್ಯ ಕೈಗೊಳ್ಳಲಾಗಿದ್ದು, ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಮಂಗಳವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್.ಜೆ.ಸೋಮಶೇಖರ್ ಪ್ರಕಟಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣಾ ಕಾರ್ಯ ಕೈಗೊಳ್ಳಲಾಗಿದ್ದು, ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಮಂಗಳವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್.ಜೆ.ಸೋಮಶೇಖರ್ ಪ್ರಕಟಿಸಿದರು. ಅಂತಿಮ ಮತದಾರರ ಪಟ್ಟಿಯನ್ನು ಎಲ್ಲಾ ಮತಗಟ್ಟೆಗಳಲ್ಲಿ, ತಾಲೂಕು ಕಚೇರಿಗಳಲ್ಲಿ, ಮತದಾರರ ನೋಂದಣಾಧಿಕಾರಿ ಅವರ ಕಚೇರಿಯಲ್ಲಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ ಪ್ರಕಟಿಸಲಾಗಿದ್ದು, ಅಂತಿಮ ಮತದಾರರ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಪರಿಶೀಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಂತೆ ಜಿಲ್ಲೆಯಲ್ಲಿ 4,11,632 ಮತದಾರರು ಇದ್ದು, ಇವರಲ್ಲಿ 2,00,885 ಪುರುಷ ಮತದಾರರು ಮತ್ತು 2,10,743 ಮಹಿಳಾ ಮತದಾರರು, 4 ಇತರ ಮತದಾರರು ಇದ್ದಾರೆ. ಒಟ್ಟು 567 ಮತಗಟ್ಟೆಗಳಿವೆ ಎಂದು ವಿವರಿಸಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರಗಳಲ್ಲಿ 285 ಮತಗಟ್ಟೆಗಳಲ್ಲಿ 2,12,244 ಮತದಾರರು ಇದ್ದು, ಇವರಲ್ಲಿ 1,02,737 ಪುರುಷ ಮತದಾರರು ಮತ್ತು 1,09,505 ಮಹಿಳಾ ಮತದಾರರು ಹಾಗೂ ಇಬ್ಬರು ಇತರೆ ಮತದಾರರು ಇದ್ದಾರೆ. ಹಾಗೆಯೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 282 ಮತಗಟ್ಟೆಗಳಿದ್ದು, 98,148 ಪುರುಷ ಮತದಾರರು, 1,01,238 ಮಹಿಳಾ ಮತದಾರರು ಹಾಗೂ ಇಬ್ಬರು ಇತರೆ ಮತದಾರರು ಇದ್ದಾರೆ ಎಂದು ಸೋಮಶೇಖರ್ ಅವರು ಹೇಳಿದರು.2026 ರ ಆ.24 ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯಂತೆ ಒಟ್ಟು 4,05,803 ಮತದಾರರು ಇದ್ದರು, ಕರಡು ಮತದಾರರ ಪಟ್ಟಿಗೆ ಅಂತಿಮ ಮತದಾರರ ಪಟ್ಟಿಯನ್ನು ಹೋಲಿಕೆ ಮಾಡಿದಾಗ, ಅಂತಿಮ ಮತದಾರರ ಪಟ್ಟಿಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿಂದ 5829 ನಿವ್ವಳ ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ 2026 ರ ಸಂಬಂಧ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಅವರು ಮ್ಯಾಪಿಂಗ್ ಇಲ್ಲದ(ಕಳೆದ ಎಸ್ಐಆರ್ನಲ್ಲಿ ಇಲ್ಲದ ಮತ್ತು ಕೊನೆಯ ಎಸ್ಐಆರ್ನಲ್ಲಿ ಇಲ್ಲದ) ಹಾಗೂ ಮ್ಯಾಪಿಂಗ್ನಲ್ಲಿ ವ್ಯತ್ಯಾಸಗಳು) ಇಂತಹ ಮತದಾರರಿಗೆ ಮಾಹಿತಿ ನೀಡಿ ವಿಚಾರಣೆ ನಡೆಸಿ ಪೂರ್ಣಗೊಳಿಸಿದ್ದು, ಅದರಂತೆ ಜಿಲ್ಲೆಯಲ್ಲಿ ಒಟ್ಟು 567 ಮತಗಟ್ಟೆಗಳಲ್ಲಿ 58,883 ಮಂದಿಗೆ ನೋಟೀಸ್ ನೀಡಿ ಮಾಹಿತಿ ಪಡೆಯಲಾಗಿತ್ತು. ಅದರಂತೆ ಜಿಲ್ಲೆಯಲ್ಲಿ 567 ಮಂದಿ ಮಾತ್ರ ಎಸ್ಐಆರ್ ಪ್ರಕ್ರಿಯೆಯಲ್ಲಿ ಅನರ್ಹರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು. ‘ಈ 567 ಅನರ್ಹರಲ್ಲಿ 125 ಮಂದಿ ಮೃತಪಟ್ಟಿದ್ದಾರೆ. 240 ಮಂದಿ ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದ್ದರು. 186 ಮಂದಿ ಶಾಶ್ವತವಾಗಿ ಸ್ಥಳಾಂತರವಾಗಿದ್ದಾರೆ. 8 ಮಂದಿ ವಿದೇಶದಲ್ಲಿ ನೆಲೆಸಿದ್ದು, ಸ್ವಯಂ ಪ್ರೇರಣೆಯಿಂದ ಮತದಾರರ ಪಟ್ಟಿಯಿಂದ ತೆಗೆಯುವಂತೆ ಮನವಿ ಮಾಡಿದ್ದಾರೆ. ಹಾಗೆಯೇ 8 ಮಂದಿ ಗೈರು ಆಗಿದ್ದಾರೆ (ಪತ್ತೆ ಹಚ್ಚಲು ಸಾಧ್ಯವಾಗಿಲ್ಲ) ಎಂದು ವಿವರಿಸಿದರು.ನಮೂನೆ-6, 6ಎ, ನಮೂನೆ-7 ಮತ್ತು 8 ಸ್ವೀಕೃತಿ ಮತ್ತು ವಿಲೇವಾರಿ ಕೈಗೊಳ್ಳಲಾಗಿದ್ದು, 2026 ರ ಜೂ.16 ರಿಂದ 2026 ರ ಸೆ.23 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ನಮೂನೆ-6 ರಂತೆ 5,486 ಮಂದಿ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ 5,372 ಮಂದಿ ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು. ನಮೂನೆ-6, 6ಎ, 7 ಮತ್ತು 8 ರ ಅರ್ಜಿಗಳನ್ನು ಭಾರತ ಚುನಾವಣಾ ಆಯೋಗವು ಅಭಿವೃದ್ಧಿ ಪಡಿಸಿರುವ ಮೊಬೈಲ್ ಅಪ್ಲಿಕೇಷನ್ ಮತದಾರರ ಸಹಾಯವಾಣಿ ಆಪ್ ಹಾಗೂ ಆನ್ಲೈನ್ನಲ್ಲಿ ನೇರವಾಗಿ ಸಲ್ಲಿಸಬಹುದು. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ಅಂತಿಮ ಸೇವಾ ಮತದಾರರ ಪಟ್ಟಿಯನ್ನು 2026 ರ ಅ. 27 ರಂದು ಪ್ರಕಟಿಸಲಾಗಿದೆ. ಸೇವಾ ಮತದಾರರ ಪಟ್ಟಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 1,213 ಮಂದಿ ಇದ್ದು, ಇವರಲ್ಲಿ 1160 ಪುರುಷರು ಮತ್ತು 53 ಮಹಿಳಾ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಸಭೆ ನಡೆಸಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ಅಂತಿಮ ಮತದಾರರ ಪಟ್ಟಿಯ ಭಾವಚಿತ್ರ ಸಹಿತ ಪ್ರತಿಯನ್ನು ರಾಜಕೀಯ ಮುಖಂಡರಿಗೆ ನೀಡಿದರು. ಒಟ್ಟಾರೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಕಾರ್ಯವು ನಿರಂತರ ಪ್ರಕ್ರಿಯೆಯಯಾಗಿದ್ದು, 18 ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಬಿಜೆಪಿಯ ಸಜಿಲ್ ಕೃಷ್ಣ, ಜಾತ್ಯತೀತ ಜನತಾ ದಳದ ಗುಲಾಬಿ ಜನಾರ್ಧನ ತೆಕ್ಕಡೆ, ಸಿಪಿಐಎಂನ ರಮೇಶ್, ಬಿಎಸ್ಪಿಯ ದಿವಿಲ್ ಕುಮಾರ್, ಚುನಾವಣೆ ಶಾಖೆಯ ಅನಿಲ್ ಕುಮಾರ್ ಇತರರು ಇದ್ದರು.
............
ಹೆಸರು ಸೇರ್ಪಡೆ ನಿರಂತರ ಪ್ರಕ್ರಿಯೆ.....
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯು ನಿರಂತರ ಪ್ರಕ್ರಿಯೆಯಾಗಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಆಗದೆ ಇರುವ, ನಾಗರಿಕರು ಹೆಸರನ್ನು ಸೇರ್ಪಡೆ ಮಾಡಲು ನಮೂನೆ-6 ರಲ್ಲಿ ಅರ್ಜಿ ಸಲ್ಲಿಸಬಹುದು. ಅನಿವಾಸಿ ಭಾರತೀಯರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ನಮೂನೆ-6ಎ, ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು, ಕೈಬಿಡಲು ನಮೂನೆ-7, ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಥವಾ ಕ್ಷೇತ್ರದ ಹೊರಗೆ ನಿವಾಸವನ್ನು ಸ್ಥಳಾಂತರಿಸಲು, ನಮೂದುಗಳನ್ನು ಸರಿಪಡಿಸಲು, ಮತದಾರ ಗುರುತಿನ ಚೀಟಿ(ಎಪಿಕ್)ಯನ್ನು ಬದಲಾಯಿಸಲು ಮತ್ತು ವಿಶೇಷ ಚೇತನ ವ್ಯಕ್ತಿಗಳನ್ನು(ಪಿಡಬ್ಲ್ಯೂಡಿ) ಗುರುತು ಮಾಡಲು ನಮೂನೆ-8 ರಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಅವರು ವಿವರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.