ಭೀಮನಗರದಲ್ಲಿ ಇಂದಿನಿಂದ 4 ದಿನ ಅಂಬೇಡ್ಕರ್ ಹಬ್ಬ

KannadaprabhaNewsNetwork | Published : Apr 11, 2025 12:36 AM

ಸಾರಾಂಶ

ಕೊಳ್ಳೇಗಾಲದ ಪ್ರವಾಸಿ ಮಂದಿರದಲ್ಲಿ 4 ದಿನಗಳ ಅಂಬೇಡ್ಕರ್ ಜಯಂತಿ ಆಚರಣೆ ಸಂಬಂಧ ಕಾರ್ಯಕ್ರಮದ ಪತ್ರಿಕೆಯನ್ನು ದೊಡ್ಡ ಯಜಮಾನ ಚಿಕ್ಕಮಾಳಿಗೆ ಪ್ರದರ್ಶಿಸಿದರು. ನಟರಾಜಮಾಳಿಗೆ, ನಿಂಪು ರಾಜೇಶ್, ಸಿದ್ದಾರ್ಥ್, ವರದರಾಜು, ನಟರಾಜು, ಇನ್ನಿತರರಿದ್ದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವವನ್ನು ಪಟ್ಟಣದ ಭೀಮನಗರದಲ್ಲಿ ಏ.11ರ ಶುಕ್ರವಾರದಿಂದ ಮನೆ ಮನೆಯ ಹಬ್ಬವಾಗಿ ನಾಲ್ಕು ದಿನಗಳ ಕಾಲ ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದು ಭೀಮನಗರದ ದೊಡ್ಡ ಯಜಮಾನ ಚಿಕ್ಕಮಾಳಿಗೆ ಹೇಳಿದರು.

ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಳ್ಳೇಗಾಲ ಶಕ್ತಿ ಕೇಂದ್ರವಾಗಿ ಭೀಮನಗರ ಗುರುತಿಸಿಕೊಂಡಿದೆ. ಹಿಂದಿನಿಂದಲೂ ನಮ್ಮ ಹಿರಿಯರು ಅಂಬೇಡ್ಕರ್ ಜಯಂತಿಯನ್ನು ವಿಭಿನ್ನವಾಗಿ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಅಂತೆಯೇ, ಡಾ.ಅಂಬೇಡ್ಕರ್ 134ನೇ ಜಯಂತಿ ಆಚರಣಾ ಸಮಿತಿ ವತಿಯಿಂದ ಈ ಬಾರಿ ಜಯಂತಿ ಅಂಗವಾಗಿ 4 ದಿನಗಳ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಿದ್ದೇವೆ.

ಏ.೧೧ ರಂದು ಭೀಮನಗರದ ಮಾತೆ ಸಾವಿತ್ರಿ ಬಾಯಿಫುಲೆ ಜ್ಞಾನ ಮಂದಿರದಲ್ಲಿ ಕಾನೂನು ಅರಿವು ಕಾರ್ಯಕ್ರಮ, ಏ.12 ರಂದು ರಮಾಬಾಯಿ ಶಾಲೆಯಲ್ಲಿ ಬೆಳಗ್ಗೆ 9 ರಿಂದ 2 ಗಂಟೆವರೆವಿಗೆ ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರ, 13 ರಂದು ಪಟ್ಟಣದ ಬಸವೇಶ್ವರ ಮಿಲ್ ಪಕ್ಕದ ಭೀಮನಗರದ ಆದಿ ಕರ್ನಾಟಕ ಜನಾಂಗದ ನಿವೇಶನದಲ್ಲಿ ಸಂಜೆ 4 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, 6 ಗಂಟೆಗೆ ಖ್ಯಾತ ರಂಗಕರ್ಮಿ ಗಿರೀಶ್ ಮಾಚಳ್ಳಿಯವರ ರಚನೆ ಮತ್ತು ನಿರ್ದೇಶನದ ಮನುಸ್ಮೃತಿ ಮತ್ತು ಭಾರತ ಸಂವಿಧಾನ ನಾಟಕ ಪ್ರದರ್ಶನ, 14 ರಂದು ಬೆಳಗ್ಗೆ 6ರಿಂದ ರಿಂದ 8 ಗಂಟೆವರೆಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ.

9 ಗಂಟೆಗೆ ತಾಲೂಕು ಆಡಳಿತ ವತಿಯಿಂದ ನಡೆಸುವ ಡಾ.ಅಂಬೇಡ್ಕರ್‌ ಭಾವಚಿತ್ರ ಮೆರವಣಿಗೆ ಭೀಮನಗರದ ಬಸವನಗುಡಿ ಬೀದಿಯಿಂದ ಪ್ರಮುಖ ರಸ್ತೆಗಳಲ್ಲಿ ಸಾಗಲಿದ್ದು ನ್ಯಾಷನಲ್ ಶಾಲಾ ಆವರಣವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಗೆ ಭೀಮನಗರದ ಆದಿ ಕರ್ನಾಟಕ ಜನಾಂಗದ ನಿವೇಶನದಲ್ಲಿ ಗೀತಾಗಾಯನ, ಬುದ್ಧ ಗಾಯನ, ಪ್ರತಿಭಾ ಪುರಸ್ಕಾರ, ಕಲಾವಿಧರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.

ಸಮಾರಂಭದಲ್ಲಿ ಸಚಿವರು, ಸಂಸದರು, ಶಾಸಕರು ಹಾಗು ಮಾಜಿ ಶಾಸಕರು, ನಗರಸಭೆ ಅಧ್ಯಕ್ಷರು ಹಾಗೂ ಸದಸ್ಯರು, ಜನಪ್ರತಿ ನಿಧಿಗಳು, ವಿವಿಧ ಸಮುದಾಯದ ಮುಖಂಡರು, ವಿವಿಧ ಗ್ರಾಮಗಳ ದಲಿತ ಮುಖಂಡರು, ಅಂಬೇಡ್ಕರ್ ಅವರ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರನ್ನು ಆಹ್ವಾನಿಸಿದ್ದೇವೆ. ಈ ಹಿನ್ನಲೆ ಕಾರ್ಯಕ್ರಮಕ್ಕೆ ಹೆಚ್ಚು ಸಂಖ್ಯೆಯಲ್ಲಿ ಸರ್ವರೂ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಮುಖಂಡ ಎಂ ನಟರಾಜಮಾಳಿಗೆ, ಪತ್ರಕರ್ತ ನಿಂಪು ರಾಜೇಶ್, ಯಜಮಾನರಾದ ವರದರಾಜು, ಪಾಪಣ್ಣ, ಮಹದೇವಸ್ವಾಮಿ, ಸಿದ್ದಾರ್ಥ್, ಸನತ್‌ಕುಮಾರ್, ಮುಖಂಡ ಲಿಂಗರಾಜು, ಚಂದ್ರಶೇಖರ್, ದಿಲೀಪ್ ಸಿದ್ದಪ್ಪಾಜಿ, ಚೇತನ್, ಎಸ್.ಸಿದ್ದಪ್ಪಾಜಿ, ಕಿರಣ್, ನಟರಾಜು ಇನ್ನಿತರರಿದ್ದರು.

Share this article